ಕೆ ಆರ್ ಪೇಟೆ | ಸಾಗುವಳಿ ಭೂಮಿ ಕಬಳಿಕೆ ಆರೋಪ: ಸಚಿವರ ವಿರುದ್ದ ರೈತರ ಪ್ರತಿಭಟನೆ

K R Pete
  • ಸರ್ವೇ ನಂಬರ್ 287ರ ಸಾಗುವಳಿ ಭೂಮಿ ಕಬಳಿಕೆಗೆ ಯತ್ನ
  • 'ಜಾತಿ ಸಮುದಾಯ ಭವನ ಕಟ್ಟಲು ರೈತರ ಭೂಮಿ ಕಬಳಿಕೆ'

ಜಾತಿ ಸಂಘಟನೆಗಳ ಸಮುದಾಯ ಭವನ ನಿರ್ಮಿಸಲು ರೈತರ ಸಾಗುವಳಿ ಜಮೀನಿನನ್ನು ಕಬಳಿಸಿ, ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಸಚಿವ ಕೆ.ಸಿ ನಾರಾಯಣಗೌಡ ಹಾಗೂ ತಾಲೂಕು ಆಡಳಿತದ ವಿರುದ್ದ ಕೆಆರ್‌ ಪೇಟೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. 

ಕೆಆರ್‌ ಪೇಟೆ ನಗರದ ಹೊರವಲಯದಲ್ಲಿರುವ ಸರ್ವೇ ನಂಬರ್ 287ರಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿ ಸಂಘಟನೆಗಳ ಸಮುದಾಯ ಭವನ ನಿರ್ಮಿಸಲು ಸಚಿವರು ಹಾಗೂ ತಾಲೂಕು ಆಡಳಿತ ಮುಂದಾಗಿದೆ. ಅದಕ್ಕಾಘಿ ರೈತರ ಸಾಗುವಳಿ ಭೂಮಿಯನ್ನು ಕಸಿಯುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭಟನಕಾರರು ಕಿಡಿಕಾರಿದ್ದಾರೆ.

ಪುರಸಭಾ ಸದಸ್ಯ ಕೆ.ಸಿ ಮಂಜುನಾಥ್ ಮಾತನಾಡಿ, “ಸರ್ವೇ ನಂಬರ್ 287ರಲ್ಲಿ ಸುಮಾರು 135 ಎಕರೆ ಸರ್ಕಾರಿ ಗೋಮಾಳವಿದೆ. ಈ ಗೋಮಾಳವನ್ನು 1977-78ರಲ್ಲಿ ಪುರಸಭಾ ವ್ಯಾಪ್ತಿಯ 65 ಭೂರಹಿತ ಕಡುಬಡವರಿಗೆ ತಲಾ ಒಂದು ಎಕರೆ ಭೂಮಿಯನ್ನು ದರಕಾಸು ಸಮಿತಿಯ ಮೂಲಕ ಮಂಜೂರಾತಿ ಮಾಡಲಾಯಿತು. ಇಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಂದ ಹಣ ಕಟ್ಟಿಸಿಕೊಂಡು ಕಂದಾಯ ಇಲಾಖೆ ರೈತರಿಗೆ ಸಾಗುವಳಿ ಚೀಟಿ ನೀಡಿದೆ” ಎಂದರು.

ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಗುಂಡಿಬಿದ್ದ ಸೇತುವೆ: ಗ್ರಾಮಸ್ಥರ ಪ್ರತಿಭಟನೆ

“ಈ ಹಿಂದೆ ರೈತರ ಭೂಮಿಯನ್ನು ಪಡೆದು ರಾಜೀವ್‌ಗಾಂಧಿ ವಸತಿ ನಿಲಯ ಸ್ಥಾಪಿಸಲು ತಾಲೂಕು ಆಡಳಿತ ಮುಂದಾಗಿತ್ತು. ಪುರಸಭೆ ವಸತಿ ಉದ್ದೇಶಕ್ಕೆ ಸುಮಾರು 28 ಎಕರೆ ಭೂಮಿಯನ್ನು ರೈತರಿಂದ ಪಡೆಯಲು ತಹಶೀಲ್ದಾರ್ ಕಾಂತರಾಜು ಮುಂದಾಗಿದ್ದರು. ರೈತರ ಸಂಕಷ್ಟವನ್ನು ಕಂಡು ಅವರೂ ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು” ಎಂದು ಅವರು ಹೇಳಿದರು.

Image
K R Pete
ಪ್ರತಿಭಟನಾ ನಿರತ ರೈತರು​​​​​

“2012ರಲ್ಲಿ ಕೆ.ಸಿ ನಾರಾಯಣಗೌಡ ರೈತರಿಗೆ ಸುಮಾರು 50 ಸಾವಿರ ಧನಸಹಾಯ ಮಾಡಿದ್ದರು. ಅಂದು ರೈತರ ಪರವಿದ್ದವರು, ಇಂದು ರಾಜಕೀಯ ಲಾಭಕ್ಕಾಗಿ ರೈತರನ್ನೇ ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ” ಎಂದು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

“ಸಚಿವರು, ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಿದರೆ ಮಾತ್ರ ಅವರನ್ನು ಗೌರವಿಸುತ್ತೇವೆ. ಯಾರದ್ದೋ ಲಾಭಕ್ಕಾಗಿ ಸುಳ್ಳು ವರದಿಗಳನ್ನು ಸೃಷ್ಟಿಸಿ ರೈತರ ಭೂಮಿಯನ್ನು ಕಬಳಿಸಲು ಮುಂದಾದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ಡಿ ಪ್ರೇಮ್ಕುಮಾರ್, ಪುರಸಭೆಯ ಮಾಜಿ ಅಧ್ಯಕ್ಷ ಚಂದ್ರೇಗೌಡ, ರೈತರು ಮತ್ತಿತ್ತರು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್