ದಕ್ಷಿಣ ಕನ್ನಡದಲ್ಲಿ ಮತ್ತೆ ಅನೈತಿಕ ಪೊಲೀಸ್‌ಗಿರಿ; ಪ್ರೇಮಿಗಳಿಗೆ ಕಾಟ

  • ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಲ್ಲಿ ನಡೆದ ಘಟನೆ
  • ಅನ್ಯಧರ್ಮದ ಜೋಡಿಯನ್ನು ತಡೆದ ಸಂಘಪರಿವಾರದ ಕಾರ್ಯಕರ್ತರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್‌ಗಿರಿ ಘಟನೆ ನಡೆದಿದ್ದು, ಸಂಘ ಪರಿವಾರ ಭಿನ್ನಮತೀಯ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ವೈರಲ್ ಆಗಿದೆ. 

ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬಂದು ಕಾಡಿನ ಬದಿಯಲ್ಲಿ ಜೊತೆಗೆ ನಿಂತಿರುವುದನ್ನು ಕಂಡ ಹಿಂದೂ ಪರ ಸಂಘಟನೆಯ ಸದಸ್ಯರು ಪ್ರೇಮಿಗಳನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ಯುವಕನ ಕಾಲರ್ ಪಟ್ಟಿ ಹಿಡಿದು ಪ್ರಶ್ನಿಸುವ ದೃಶ್ಯ ವೀಡಿಯೋದಲ್ಲಿ ಕಂಡುಬಂದಿದೆ. 

ಬೆಳ್ತಂಗಡಿ ತಾಲೂಕಿನ ವೇಣೂರು ಮೂಲದ ಹಿಂದೂ ಧರ್ಮಕ್ಕೆ ಸೇರಿದ ಯುವತಿ ಹಾಗೂ ಪುತ್ತೂರಿನಲ್ಲಿ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕ ಇಂದು ರಿಕ್ಷಾದಲ್ಲಿ ಗುಂಡ್ಯಕ್ಕೆ ಆಗಮಿಸಿದ್ದು, ದೇರಣೆ ಕ್ರಾಸ್ ಸಮೀಪ ಕಾಡು ರಸ್ತೆಯಲ್ಲಿ ಜೊತೆಗಿದ್ದರು ಎಂದು ಆರೋಪಿಸಲಾಗಿದೆ.

ವೀಡಿಯೋದಲ್ಲಿದ್ದ ಯುವತಿಯನ್ನು ಉದ್ದೇಶಿಸಿ ಗುಂಪಿನಲ್ಲಿದ್ದ ಒಬ್ಬರು, ''ನೀನು ಒಂದು ಹೆಣ್ಣು. ಹಣೆಯಲ್ಲಿ ತಿಲಕ ಇಟ್ಟಿದ್ದೀಯಾ. ಯಾಕೆ ಇಲ್ಲಿ ಬಂದೆ? ಸುಳ್ಳು ಬೇರೆ ಹೇಳುತ್ತಿದ್ದೀಯಾ?'' ಎಂದು ತುಳುವಿನಲ್ಲಿ ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಭಜರಂಗದಳದ ಕಾರ್ಯಕರ್ತರು ಪ್ರೇಮಿಗಳನ್ನು ನೆಲ್ಯಾಡಿ ಹೊರಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿರುವುದಾಗಿ ವರದಿಯಾಗಿದೆ.  

ಘಟನೆ ಸಂಬಂಧ ಈ ದಿನ.ಕಾಂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆಯವರನ್ನು ಸಂಪರ್ಕಿಸಿದಾಗ, "ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ. ವೀಡಿಯೋದಲ್ಲಿರುವ ಯುವಕ ದೂರು ನೀಡಲು ಮುಂದೆ ಬಂದಿದ್ದಾನೆ" ಎಂದು ಮಾಹಿತಿ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್