- ಸುಮಾರು 1 ಕಿಮೀ ರಸ್ತೆ ಕೆಸರುಮಯ
- ‘ಗ್ರಾಮಕ್ಕೆ ಕಾರ್ಕಳ ಶಾಸಕರು ಈ ತನಕ ಭೇಟಿ ನೀಡಿಲ್ಲ’
"ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ (ಬೈಲೂರು) ನೀರೆ ಗ್ರಾಮದ ಸಾಗ ಎಂಬ ಪ್ರದೇಶದಲ್ಲಿ ರಸ್ತೆ ತೀರಾ ಹದಗೆಟ್ಟಿದ್ದು, ದಾರಿ ದೀಪದ ವ್ಯವಸ್ಥೆಯಿಲ್ಲ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡಲು ಪರದಾಡಬೇಕಿದೆ. ರಸ್ತೆಯನ್ನು ನೋಡಿ ಶಾಸಕರ್ಯಾರು ಎಂದು ಕೇಳುತ್ತಾರೆ. ನಮ್ಮ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ" ಎಂದು ನೀರೆ ಗ್ರಾಮದ ಯುವಕರೊಬ್ಬರು ಟ್ವೀಟ್ ಮಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಗ್ರಾಮದ ರಸ್ತೆಯ ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ, ಪ್ರಧಾನಿ ಹಾಗೂ ಸಚಿವ ಹಾಗೂ ಶಾಸಕ ಸುನೀಲ್ ಕುಮಾರ್ ಕಾರ್ಕಳ ಅವರಿಗೆ ಟ್ಯಾಗ್ ಮಾಡಿ, ರಸ್ತೆ ದುರಸ್ತಿ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
“ನೀರೆ ಗ್ರಾಮದ ಸಾಗ ಎಂಬ ಪ್ರದೇಶದಲ್ಲಿ ಸುಮಾರು 25 ಮನೆಗಳಿವೆ. ಈ ಗ್ರಾಮ ಉಡುಪಿ-ಕಾರ್ಕಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯಿಂದ ನಾಲ್ಕುವರೆ ಕಿಲೋ ಮೀಟರ್ ದೂರವಿದೆ. ಈ ನಾಲ್ಕುವರೆ ಕಿಮೀ ರಸ್ತೆಯಲ್ಲಿ ಮೂರು ಕಿಮೀ ರಸ್ತೆಯನ್ನು ಇಪ್ಪತ್ತು ವರ್ಷಗಳ ಹಿಂದೆ ಗೋಪಾಲ ಭಂಡಾರಿಯವರು ಡಾಂಬರೀಕರಣ ಮಾಡಿಸಿದ್ದರು. ಕಳೆದ ವರ್ಷ 75 ಲಕ್ಷ ರೂಪಾಯಿ ವೆಚ್ಚದಲ್ಲಿ 700 ಮೀಟರ್ ರಸ್ತೆಗೆ ಕಾಂಕ್ರಿಟ್ ಹಾಕಲಾಗಿದೆ. ಉಳಿದ ಒಂದು ಕಿಮೀ ರಸ್ತೆ ಕೆಸರುಮಯವಾಗಿದ್ದು, ಗ್ರಾಮಸ್ಥರು, ಸಾರ್ವಜನಿಕರು, ವಾಹನ ಸವಾರರು ಸಂಚರಿಸಲು ಸಾಧ್ಯವಾಗದಷ್ಟು ಹದಗೆಟ್ಟಿದೆ” ಎಂದು ಟ್ವೀಟ್ ಮಾಡಿ ಸಂದೀಪ್ ಆರ್ ನಾಯಕ್ ಎಂಬ ಯುವಕ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮಂಗಳೂರು ಸ್ಫೋಟ ಪ್ರಕರಣ | ಶಂಕಿತ ಶಾರೀಕ್ ಮನೆಯಲ್ಲಿ ಪೊಲೀಸರ ಶೋಧ
“ಸಾಗ ಪ್ರದೇಶದಲ್ಲಿ ಮೀಸಲು ಅರಣ್ಯವಿದ್ದು, ಈ ಮೀಸಲು ಅರಣ್ಯದಲ್ಲಿ ಕಾಡು ಕೋಣ, ಚಿರತೆ, ಹುಲಿ, ಹಂದಿಗಳ ಹಾವಳಿ ಹೆಚ್ಚಾಗಿದೆ. ಇಷ್ಟಾದರೂ ಈ ಪ್ರದೇಶದಲ್ಲಿ ಒಳ್ಳೆಯ ರಸ್ತೆ ಹಾಗೂ ದಾರಿದೀಪ ವ್ಯವಸ್ಥೆ ಮಾಡಿಲ್ಲ” ಎಂದು ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇಲ್ಲಿನ ವೀರಮಾರುತಿ ಭಜನಾ ಮಂದಿರದಲ್ಲಿ 12 ಶನಿವಾರ ಭಜನಾ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಸುಮಾರು 150ರಿಂದ 200 ಜನ ಸೇರುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಭಜನಾ ಮಂಗಳೋತ್ಸವಕ್ಕೆ 400ರಿಂದ 500 ಜನರ ಸೇರುತ್ತಾರೆ. ಇವರೆಲ್ಲ ಈ ರಸ್ತೆ ಮುಖಾಂತರವೇ ಸಂಚರಿಸಬೇಕು. ಈ ಊರಿಗೆ ಬರುವವರು ರಸ್ತೆಯನ್ನು ನೋಡಿ ಯಾರು ಶಾಸಕರು ಎಂದು ಕೇಳುತ್ತಾರೆ. ಸಾಗ ಗ್ರಾಮಕ್ಕೆ ಕಾರ್ಕಳ ಶಾಸಕರು ಈ ತನಕ ಭೇಟಿ ನೀಡಿಲ್ಲ” ಎಂದು ಬರೆದುಕೊಂಡಿದ್ದಾರೆ.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರಮೋದಿ ಯವರಿಗೆ, ಹಾಗೂ ಸುನಿಲ್ ಕುಮಾರ್ ಅವರಿಗೆ (ಬೈಲೂರು) ನೀರೇ ಗ್ರಾಮದ ಜನರ ನಮಸ್ಕಾರಗಳು,@PMOIndia @karkalasunil @narendramodi
— sandeep r nayak (@sandeeprnayak1) November 19, 2022
ವಿಷಯ,:- ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ (ಬೈಲೂರು) ನೀರೆ ಗ್ರಾಮದ ಸಾಗ ಎಂಬ ಪ್ರದೇಶದಲ್ಲಿ ರಸ್ತೆ ಮತ್ತು ದಾರಿ ದೀಪದ ನಿರ್ಲಕ್ಷದ ಬಗ್ಗೆ ಮನವಿ.(1/9) pic.twitter.com/Julyr6AZRr
“ಇಲ್ಲಿನ ರಸ್ತೆಗಳು ಹುಲ್ಲು ಹಾಗೂ ಪೊದೆಗಳಿಂದ ಮುಚ್ಚಿ ಹೋಗಿದ್ದು, ರಾತ್ರಿಯ ಸಮಯದಲ್ಲಿ ಓಡಾಡಲು ತುಂಬಾ ಕಷ್ಟವಾಗುತ್ತಿದೆ. ಇಲ್ಲಿನ ರಸ್ತೆಗಳು ಮಳೆಗಾಲದಲ್ಲಿ ಕೆಸರುಮಯವಾಗಿರುತ್ತದೆ. ವಾಹನ ಸಂಚಾರ ಮಾಡಲೂ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿರುತ್ತವೆ. ಈ ಬಗ್ಗೆ ಗ್ರಾಮದ ಸಂಬಂಧಪಟ್ಟವರಲ್ಲಿ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆಯಿಲ್ಲ. ಚುನಾವಣೆ ಸಮಯದಲ್ಲಿ ಬರೀ ಆಶ್ವಾಸನೆ ನೀಡುತ್ತಾರಷ್ಟೇ” ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.