ಟೈಲರ್ ಪ್ರವೀಣ್ ನಡೆಸಿದ್ದ ಭೀಕರ ಹತ್ಯೆಗಳು: ಮಂಗಳೂರನ್ನು ಬೆಚ್ಚಿ ಬೀಳಿಸಿದ್ದ ಮೂರು ದಶಕದ ಕೊಲೆ ಕೇಸಿಗೆ ಈಗ ಮರುಜೀವ!

28 ವರ್ಷದ ಹಿಂದೆ ದಕ್ಷಿಣಕನ್ನಡ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣವೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. 1994ರ ಫೆಬ್ರವರಿ 24ರ ಮುಂಜಾನೆ ತನ್ನ ನಾಲ್ವರು ಸಂಬಂಧಿಕರನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಟೈಲರ್ ಪ್ರವೀಣ್, ನಂತರ ಪೊಲೀಸರಿಗೆ ಸಿಕ್ಕಿಬಿದ್ದು ಬಳ್ಳಾರಿ ಜೈಲು ಸೇರಿದ್ದ. ಇದೀಗ ಸರ್ಕಾರವು ಆತನನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಹೊರಟಿದ್ದು, ಆತನ ಕುಟುಂಬದವರೇ ಅದನ್ನು ವಿರೋಧಿಸುತ್ತಿದ್ದಾರೆ.
vamanjuru 1994 Muder Case

ಅದು 1994ರ ಫೆಬ್ರವರಿ 24ರಂದು ರವಿವಾರ ಬೆಳಗಿನ ಸಮಯ. ಮಂಗಳೂರು ಸಮೀಪದ ವಾಮಂಜೂರಿನ ನಿವಾಸಿ ಅಪ್ಪಿ ಶೇರಿಗಾರ್ತಿಯವರ ಮನೆಗೆ ಬೆಳಗ್ಗೆ 7.30ರ ಸುಮಾರಿಗೆ ಪ್ರತಿನಿತ್ಯ ಹಾಲು ಕೊಡಲೆಂದು ಬಂದ ಬಾಲಕಿ, ಎದುರಿನ ಬಾಗಿಲು ಚಿಲಕ ಹಾಕಿದ್ದನ್ನು ಗಮನಿಸಿ ಹಿಂಬದಿಗೆ ತೆರಳಿದಾಗ ಮನೆಯ ಬಾಗಿಲು ಅರ್ಧ ತೆರೆದಿತ್ತು. ಸಂಶಯಗೊಂಡು ಮನೆಯ ಒಳಗಡೆ ಹೋದ ಬಾಲಕಿಗೆ ಮನೆಯಲ್ಲಿದ್ದ ಹಿರಿಯ ಮಹಿಳೆ ರಕ್ತಸಿಕ್ತವಾಗಿ ಬಿದ್ದಿದ್ದ ದೃಶ್ಯ ಕಂಡು, ಭಯದಿಂದ ಮನೆಗೆ ಹೋಗಿ ವಿಷಯ ತಿಳಿಸಿದ್ದಳು. 

ಮನೆಯಲ್ಲಿದ್ದ ಅಪ್ಪಿ ಶೇರಿಗಾರ್ತಿ (75), ಆಕೆಯ ಪುತ್ರಿ ಶಕುಂತಲಾ (36), ಪುತ್ರ ಗೋವಿಂದ (30), ಮೊಮ್ಮಗಳು ದೀಪಿಕಾ (9) ಶವವಾಗಿ ಬಿದ್ದಿದ್ದರು. ಕೂಡಲೇ ಅಕ್ಕಪಕ್ಕದ ಮನೆಯವರು ಸೇರಿದಂತೆ ಊರವರಿಗೂ ವಿಷಯ ತಿಳಿಯಿತು. ಘಟನೆ ಬೆಳಗ್ಗೆ 7.30ಕ್ಕೆ ನಡೆದಿದ್ದರೂ ಕೇವಲ ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿದ್ದ ಪೊಲೀಸ್ ಠಾಣೆ (ಕಂಕನಾಡಿ ಗ್ರಾಮಾಂತರ ಠಾಣೆ ಬಿಕರ್ನಕಟ್ಟೆಯಲ್ಲಿತ್ತು)ಗೆ ತಿಳಿಸುವಾಗ 11.15 ಆಗಿತ್ತು. ಪೊಲೀಸರಿಗೆ ವಿಷಯ ತಿಳಿಸಿದ್ದು ಶವ ಕಂಡಿದ್ದ ಬಾಲಕಿಯ ತಂದೆ.  ಸ್ಥಳಕ್ಕೆ ಬಂದ ಪೊಲೀಸರು ಮಹಜರು ನಡೆಸಿದಾಗ ಹೊರಗಿನಿಂದ ಬಂದವರು ಈ ಕೃತ್ಯ ಎಸಗಿದ್ದರು ಎಂದು ಪ್ರಾಥಮಿಕವಾಗಿ ಶಂಕಿಸಿದ್ದರು.

ಬಳಿಕ ತನಿಖೆ ಮುಂದುವರಿಸಿದಾಗ ಗೋವಿಂದ ಮಲಗಿದ್ದ ಸ್ಥಳದಲ್ಲಿ ಇನ್ನೊಂದು ಬೆಡ್ ಇರುವುದನ್ನು ಗಮನಿಸಿದಾಗ ಅದರಲ್ಲಿ ರಕ್ತದ ಕಲೆ ಇತ್ತು. ಬಳಿಕ ಇದು ಪರಿಚಯ ಇರುವವರೇ, ಹಿಂದಿನ ದಿನ (ಫೆಬ್ರವರಿ 23, ಶನಿವಾರ) ರಾತ್ರಿ ಮನೆಯಲ್ಲಿ ಮಲಗಿದ್ದವರೇ ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಖಚಿತಪಡಿಸಿದ್ದರು.

ಆ ಕಾಲದಲ್ಲಿ ರಾತ್ರಿಯ ವೇಳೆ ಕಳ್ಳರ ಕಾಟ ಹೆಚ್ಚಿತ್ತು. ಹಾಗಾಗಿ ಅಪ್ಪಿ ಶೇರಿಗಾರ್ತಿಯವರು ಮನೆಯ ಹಿಂಬದಿಯ ಬಾಗಿಲನ್ನು ಲಾಕ್ ಮಾಡುವುದರ ಜೊತೆಗೆ, ಬಾಗಿಲಿಗೆ ತಾಗಿಸಿ ಪಾತ್ರೆಗಳನ್ನು ಜೋಡಿಸಿಡುತ್ತಿದ್ದರು. ಯಾಕೆಂದರೆ, ಮನೆಯ ಬಾಗಿಲನ್ನು ಕಳ್ಳರು ಮುರಿದು ಒಳಗೆ ಬಂದರೂ ಪಾತ್ರೆಯ ಸದ್ದಿಗೆ ಎಚ್ಚರವಾಗಬಹುದು ಎಂದು ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಆದರೆ ಹಿಂಬದಿಯ ಬಾಗಿಲಲ್ಲಿಟ್ಟಿದ್ದ ಪಾತ್ರೆಯು ಪೊಲೀಸರು ಮಹಜರು ನಡೆಸಿದಾಗ ಹಾಗೆಯೇ ಇತ್ತು. ಆದ್ದರಿಂದ ಇದು ಕಳ್ಳರ ಕೃತ್ಯ ಅಲ್ಲ ಎಂದು ತಿಳಿದುಬಂದಿತ್ತು. 

Image
Murder Praveen

ಕೊಲೆ ಮಾಡಿ ಆಭರಣಗಳೊಂದಿಗೆ ಪರಾರಿಯಾಗಿದ್ದ ಪ್ರವೀಣ್

ಪೊಲೀಸರು ಅನುಮಾನಪಟ್ಟಂತೆ ಈ ಕೃತ್ಯ ಎಸಗಿದ್ದು, ಹಿಂದಿನ ದಿನ ಬಂದು ಮಲಗಿದ್ದ ಪ್ರವೀಣ್. ಈತ ಮೂಲತಃ ಉಪ್ಪಿನಂಗಡಿಯ ಪೆರಿಯಡ್ಕದ ನಿವಾಸಿ. ವೃತ್ತಿಯಲ್ಲಿ ಟೈಲರ್ ಆಗಿದ್ದ. ಅಪ್ಪಿ ಶೇರಿಗಾರ್ತಿ ಪ್ರವೀಣನ ತಂದೆಯ ತಂಗಿ. ಅಂದರೆ ಸಂಬಂಧದಲ್ಲಿ ಅತ್ತೆ.

ಪ್ರವೀಣ್‌ 1994 ಫೆಬ್ರವರಿ 23ರಂದು ವಾಮಂಜೂರಿನ ಅತ್ತೆಯ ಮನೆಯಲ್ಲಿ ರಾತ್ರಿ ಮಲಗಿದ್ದವನು ಮಧ್ಯರಾತ್ರಿ ಎದ್ದು, ಮದ್ಯ ಸೇವಿಸಿ, ಆ ಬಳಿಕ ನಾಲ್ವರನ್ನು ಗಟ್ಟಿಯಾದ ಮರದ ಹಿಡಿಯಿಂದ ತಲೆಗೆ ಹೊಡೆದು ಕೊಲೆ ಮಾಡಿ, ಅಂದಿನ ಮೌಲ್ಯ ಸುಮಾರು ₹80 ಸಾವಿರ ಮೌಲ್ಯದ ಚಿನ್ನಾಭರಣ, ₹5 ಸಾವಿರ ಹಣದೊಂದಿಗೆ ಪರಾರಿಯಾಗಿದ್ದ.

ಅಪ್ಪಿ ಶೇರಿಗಾರ್ತಿಯ ಮನೆಯವರು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಪಾಟುಗಳಲ್ಲಿಡದೆ ಸಣ್ಣ ಸಣ್ಣ ಡಬ್ಬಗಳಲ್ಲಿ ಇಡುತ್ತಿದ್ದರು. ಚಿನ್ನಾಭರಣ, ನಗದು ಎಲ್ಲಿ ಇಡುತ್ತಿದ್ದರೆಂಬುದನ್ನು ಮೊದಲೇ ತಿಳಿದುಕೊಂಡಿದ್ದ ಪ್ರವೀಣ, ಕೊಲೆ ಮಾಡುವುದಕ್ಕಾಗಿ ಒಂದು ವಾರ ಮೊದಲೇ ಯೋಜನೆ ರೂಪಿಸಿದ್ದ. ಪ್ರವೀಣ ಫೆಬ್ರವರಿ 23ರ ರಾತ್ರಿ ಅಪ್ಪಿ ಶೇರಿಗಾರ್ತಿಯ ಪುತ್ರ ಗೋವಿಂದನ ಬಳಿ ಮಲಗಿದ್ದ. ಮೊದಲೇ ತಾನು ಬಚ್ಚಲು ಮನೆಯಲ್ಲಿ ತಂದು ಬಚ್ಚಿಟ್ಟಿದ್ದ ಗಟ್ಟಿಯಾದ ಮರದ ತುಂಡಿನಿಂದ ಮೊದಲು ಗೋವಿಂದನನ್ನು ಹತ್ಯೆಗೈದಿದ್ದ. ಬಳಿಕ ಅಪ್ಪಿ ಶೇರಿಗಾರ್ತಿ ಪುತ್ರಿ ಶಕುಂತಲಾ ಹಾಗೂ ಶಕುಂತಾಲಾರ ಪುತ್ರಿ ದೀಪಿಕಾಳನ್ನು ಕೊಲೆ ಮಾಡಿದ್ದ. ಬೊಬ್ಬೆಯ ಸದ್ದು ಕೇಳಿ ಬಂದ ಅಪ್ಪಿ ಶೇರಿಗಾರ್ತಿಯನ್ನೂ ತಲೆಗೆ ಬಡಿದು ಕೊಲೆ ಮಾಡಿ, ಅಲ್ಲಿಂದ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದ.

ಉಪ್ಪಿನಂಗಡಿಯ ಸಮೀಪದ ಪೆರಿಯಡ್ಕ ನಿವಾಸಿಯಾಗಿದ್ದ ಪ್ರವೀಣ್ ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದ. ಆಗ ಸಿಂಗಲ್‌ ನಂಬರ್‌ ಲಾಟರಿ ನಡೆಯುತ್ತಿದ್ದು, ಈತ ಟಿಕೆಟ್‌ ಖರೀದಿಯ ಚಟಕ್ಕೆ ಅಂಟಿಕೊಂಡಿದ್ದ. ಇದರಿಂದ ಆತ ಹಣಕಾಸಿನ ಬಿಕ್ಕಟ್ಟಿನಲ್ಲಿದ್ದು, ಪತ್ನಿ ಮತ್ತು ಇತರ ಕುಟುಂಬದ ಸದಸ್ಯರ ಚಿನ್ನಾಭರಣಗಳನ್ನು ಅಡವಿಟ್ಟು ಸಾಲವನ್ನೂ ಪಡೆದಿದ್ದ. ಈ ಸಾಲದ ಪಾವತಿಗೆ ಈ ಕೃತ್ಯ ಎಸಗಿದ್ದೆ ಎಂದು ಪೊಲೀಸರ ತನಿಖೆಯ ವೇಳೆ ತಿಳಿಸಿದ್ದ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಅಪರಾಧಿ

ಪ್ರವೀಣನನ್ನು ಕೆಲವೇ ದಿನಗಳಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ತನಿಖೆಯ ವೇಳೆ ಮನೆಯಿಂದ ಲಪಟಾಯಿಸಿ ಬಳಿಕ ಬಿದಿರಿನ ಮರದ ಪೊದೆಯಲ್ಲಿ ಕರ್ಚೀಫು ಸುತ್ತಿ ಚಿನ್ನಾಭರಣಗಳನ್ನು ಇಟ್ಟಿರುವುದಾಗಿ ತಿಳಿಸಿದ್ದ. ಅದರಂತೆ ಆತ ಬಚ್ಚಿಟ್ಟಲ್ಲಿಂದ ಅವುಗಳನ್ನು ವಶಪಡಿಸಿಕೊಂಡಿದ್ದರು. ಹೀಗೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು 1997ನೇ ಇಸವಿಯಲ್ಲಿ ವಿಚಾರಣೆಗಾಗಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಮಂಗಳೂರು ಜೈಲಿಗೆ ಕರೆತರುತ್ತಿದ್ದಾಗ ಹುಬ್ಬಳ್ಳಿಯ ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ.

ಬಹಳಷ್ಟು ಹುಡುಕಾಟ ನಡೆಸಿದ್ದರೂ ಆತನ ಪತ್ತೆ ಸಾಧ್ಯವಾಗಿರಲಿಲ್ಲ. ಕೊನೆಗೆ ಉಪಾಯ ಹೂಡಿದ ಪೊಲೀಸರು, 1999ರ ಸಮಯದಲ್ಲಿ ಪತ್ರಿಕೆಯಲ್ಲಿ ಪ್ರವೀಣನ ಫೋಟೋ ಸಹಿತ ವಿವರ ಪ್ರಕಟಿಸಿ, ಆರೋಪಿ ಎಲ್ಲಿದ್ದಾನೆಂದು ಸುಳಿವು ನೀಡುವವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದರು.

ಪ್ರವೀಣ್‌ ತಪ್ಪಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪ ಬೇರೆ ಹೆಸರಿನಲ್ಲಿ ತಲೆಮರೆಸಿಕೊಂಡು ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಅವಳಿಗೆ ಮಗು ಕೂಡ ಆಗಿತ್ತು. ಪತ್ರಿಕೆಯಲ್ಲಿ ಬಂದಿದ್ದ ಮಾಹಿತಿಯನ್ನು ಗಮನಿಸಿದ್ದ ಎರಡನೇ ಪತ್ನಿಯ ತಮ್ಮ ಪೊಲೀಸರಿಗೆ ಖಚಿತ ಮಾಹಿತಿ ನೀಡಿದ್ದ. ನಾಪತ್ತೆಯಾದ ಆರೋಪಿ ಶೋಧ ಪ್ರಕ್ರಿಯೆಯಲ್ಲಿ ತೊಡಗಿದ ಮಂಗಳೂರಿನ ಇನ್ಸ್‌ಪೆಕ್ಟರ್‌ ಜಯಂತ್‌ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ತಂಡ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಪುನಃ ಜೈಲಿಗಟ್ಟಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಮಂಗಳೂರಿನ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಮಂಗಳೂರು ನ್ಯಾಯಾಲಯ ನೀಡಿದ ತೀರ್ಪನ್ನು ಬಳಿಕ ಹೈಕೋರ್ಟ್​ ಮತ್ತು 2003ರಲ್ಲಿ ಸುಪ್ರೀಂ ಕೋರ್ಟ್​ ಕೂಡಾ ಎತ್ತಿ ಹಿಡಿದಿದ್ದವು. ಮರಣ ದಂಡನೆಯ ಶಿಕ್ಷೆಯ ಬಳಿಕ ಆತ ರಾಷ್ಟ್ರಪತಿಯವರಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯನ್ನು 2013 ಏಪ್ರಿಲ್‌ 4 ರಂದು ರಾಷ್ಟ್ರಪತಿ ತಿರಸ್ಕರಿಸಿದ್ದರು. ಆದರೆ, ರಾಜೀವ್‌ ಗಾಂಧಿಯನ್ನು ಕೊಂದಿದ್ದ ಮೂವರ ಗಲ್ಲು ಶಿಕ್ಷೆ ರದ್ದು ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದದ್ದನ್ನೇ ಆಧಾರವಾಗಿಟ್ಟು ಪ್ರವೀಣ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು‌, 2014 ಜನವರಿ 22 ರಂದು ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತನೆ ಮಾಡಿತ್ತು.

28 ವರ್ಷಗಳ ಬಳಿಕ ಮತ್ತೆ ಸುದ್ದಿಯಾದ ಪ್ರಕರಣ

ಪ್ರವೀಣನಿಗೆ ಈಗ 62 ವರ್ಷ. ಮಂಗಳೂರನ್ನು ಬೆಚ್ಚಿ ಬೀಳಿಸಿದ್ದ 1994ರ ಈ ಕೊಲೆ ಪ್ರಕರಣವು ಸರಿಸುಮಾರು 28 ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುದ್ದಿ ಮಾಡತೊಡಗಿದೆ. ಇದೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸರ್ಕಾರ ಕೆಲವು ಜನ ಕೈದಿಗಳಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಕಲ್ಪಿಸುತ್ತಿದ್ದು, ಹೀಗೆ ಬಿಡುಗಡೆಯಾಗುವವರ ಪಟ್ಟಿಯಲ್ಲಿ ಪ್ರವೀಣನೂ ಇದ್ದಾನೆ ಎಂಬ ಸುದ್ದಿ ಸಂತ್ರಸ್ತ ಕುಟುಂಬಕ್ಕೆ ತಲುಪಿದೆ. ಕಳೆದ 28 ವರ್ಷಗಳಿಂದ ಜೈಲಿನಲ್ಲಿ ಇರುವ ಆತನನ್ನು ಬಿಡುಗಡೆ ಮಾಡುವ ಬಗ್ಗೆ ಹತ್ಯೆಯಾದ ಅಪ್ಪಿ ಶೇರಿಗಾರ್ತಿ ಪುತ್ರ, ಸದ್ಯ ಮಂಗಳೂರಿನ ಗುರುಪುರದ ನಿವಾಸಿ ಸೀತಾರಾಮ ಮತ್ತವರ ಸಂಬಂಧಿಕರು ಆತಂಕ ಹಾಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Image
1994 murder case
ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್‍‌ಗೆ ಮನವಿ ಸಲ್ಲಿಸಿದ ಅಪ್ಪಿ ಶೇರಿಗಾರ್ತಿ ಕುಟುಂಬಸ್ಥರು

ಜೊತೆಗೆ ಪ್ರವೀಣ್ ಕುಮಾರ್‌ನನ್ನು ಯಾವ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಸ್ವತಃ ಪ್ರವೀಣನ ಪತ್ನಿ ಅನಸೂಯ ಸೇರಿದಂತೆ ಉಳಿದ ಕುಟುಂಬಸ್ಥರು ಮಂಗಳೂರು ನಗರದ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದ್ದಾರೆ.

'ನಾನು ಜೈಲಿನಿಂದ ಹೊರಗೆ ಬಂದರೆ ಇನ್ನೂ ನಾಲ್ಕು ಜನರನ್ನ ಕೊಲೆ ಮಾಡುವುದಾಗಿ ಈಗಾಗಲೇ ಹೇಳಿದ್ದಾನೆ. ಆದ್ದರಿಂದ ಆತನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದೆಂದು ಅಪರಾಧಿ ಪ್ರವೀಣ್‌ ಕುಮಾರ್‌ ಪತ್ನಿ, ಸಹೋದರ ಮತ್ತು ಕೊಲೆಯಾದ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ ಸಹಿತ 30 ಮಂದಿ ಕುಟುಂಬಸ್ಥರು ಇತ್ತೀಚೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಎನ್ ಶಶಿಕುಮಾರ್ ಅವರ ಕಚೇರಿಗೆ ಆಗಮಿಸಿ ಮನವಿ ಮಾಡಿ ಒತ್ತಾಯಿಸಿದರು. ಅಲ್ಲದೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಹ ಪತ್ರ ಬರೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಬಳಿಕ ಪ್ರವೀಣ್ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಗಲ್ಲು ಶಿಕ್ಷೆಯು ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಂಡಿತ್ತು. ಸದ್ಯ ಪ್ರವೀಣ್ ಬಳ್ಳಾರಿಯ ಜೈಲಿನಲ್ಲಿ ಇದ್ದಾನೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರದ ಪೊಲೀಸ್ ಕಮಿಷನರ್‌ ಶಶಿಕುಮಾರ್, "ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದು ಆತನ ಕುಟುಂಬಿಕರು ಇಲ್ಲಿ ಬಂದು ಬಿಡುಗಡೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಘಟನೆ ನಡೆದಿರುವ ಗ್ರಾಮಾಂತರ ಎಸ್ಪಿ ಅವರಲ್ಲಿ ಮಾಹಿತಿ ಕಲೆ ಹಾಕುತ್ತೇನೆ. ಈ ವಿಚಾರದಲ್ಲಿ ಏನು ಮಾಡಬೇಕೆಂದು ನಿರ್ಧರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ" ಎಂದು ಆತನ ಮನೆ ಮಂದಿಗೆ ಭರವಸೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರವೀಣ್ ಪತ್ನಿ ಅನಸೂಯ, "ನಾಲ್ವರನ್ನು ಕೊಲೆ ಮಾಡಿದ ಅವನನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ಅವನು ಜೈಲಿನಲ್ಲೇ ಇದ್ದು, ಮಾಡಿದ ಕರ್ಮವನ್ನು ಸಾಯುವವರೆಗೂ ಅನುಭವಿಸಲಿ. ನಮ್ಮ ಪಾಲಿಗೆ ಅವನು ಅಂದೇ ಸತ್ತುಹೋಗಿದ್ದಾನೆ. ಈಗ ನಮ್ಮ ಕುಟುಂಬ ನೆಮ್ಮದಿಯಲ್ಲಿದೆ. ಅದನ್ನು ಹಾಳು ಮಾಡುವುದು ಬೇಡ. ಇದು ನಮ್ಮ ಕುಟುಂಬದ ಒಮ್ಮತದ ತೀರ್ಮಾನ' ಎಂದು ಅಸಮಾಧಾನ ಹೊರಹಾಕಿದ್ದಾರೆ.

ವಿಡಿಯೋ ಕೃಪೆ: V4 NEWS

ನಿಮಗೆ ಏನು ಅನ್ನಿಸ್ತು?
1 ವೋಟ್