ಜಿಎಸ್‌ಟಿ | 'ಮೋದಿ ಪ್ರಧಾನಿಯಾದ ಮೇಲೆ 24 ಲಕ್ಷ ಜನ ಬಡತನದ ಕೂಪಕ್ಕೆ ಹೋಗಿದ್ದಾರೆ'

Congress Protest
  • ಬೆಂಗಳೂರಿನ ಜಿಎಸ್‌ಟಿ ಕಚೇರಿ ಮುಂದೆ ಬುಧವಾರ ಕಾಂಗ್ರೆಸ್‌ ಪ್ರತಿಭಟನೆ
  • ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ವಿರೋಧಿಸಿ ಬೆಂಗಳೂರಿನ ಮೂರು ಜಿಲ್ಲಾ ಸಮಿತಿಗಳ ವತಿಯಿಂದ ಕೋರಮಂಗಲದ ಜಿಎಸ್‌ಟಿ ಕಚೇರಿ ಮುಂದೆ ಬುಧವಾರ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, “ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ ಹಾಕದ ತೆರಿಗೆಗಳನ್ನು ಈಗ ಹಾಕಿದ್ದಾರೆ. ಬಡವರು ಬಳಸುವ ಆಹಾರ ಪದಾರ್ಥ, ಮೊಸರು, ಅಕ್ಕಿ, ಬೆಲ್ಲ, ಜೇನುತುಪ್ಪ, ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವ ನಕ್ಷೆ, ಪೆನ್ಸಿಲ್, ಚೆಕ್ ಬುಕ್, ರೈರೈತರು ಬಳಸುವ ಪಂಪ್ ಸೆಟ್, ಮೋಟಾರ್ ಸೇರಿದಂತೆ ಎಲ್ಲದಕ್ಕೂ ತೆರಿಗೆ ಹಾಕಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“25 ಕೆಜಿ ಮೇಲ್ಪಟ್ಟ ಪದಾರ್ಥಗಳಿಗೆ ತೆರಿಗೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಜನ 25 ಕೆಜಿಯಷ್ಟು ಹಾಲು, ಮೊಸರು, ಬೆಲ್ಲ, ಜೇನು ತುಪ್ಪ, ಮಕ್ಕಳ ಪುಸ್ತಕ, ಪೆನ್ಸಿಲ್‌ಗಳನ್ನು ಖರೀದಿ ಮಾಡಲು ಸಾಧ್ಯವೇ? ಮೋದಿ 8 ವರ್ಷಗಳ ಹಿಂದೆ ಬಣ್ಣ ಬಣ್ಣದ ಮಾತುಗಳನ್ನು ಆಡಿದ್ದರು. ಇದೇ ಮೋದಿ ಅಚ್ಛೇ ದಿನ್” ಎಂದು ಟೀಕಿಸಿದರು.

“ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 25 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲಕ್ಕೆ ಎತ್ತಿದ್ದರು. ಆದರೆ ಮೋದಿ ಅವರು ಬಂದ ನಂತರ 24 ಲಕ್ಷ ಜನ ಬಡತನ ಕೂಪಕ್ಕೆ ಹೋಗಿದ್ದಾರೆ. ಈಗ ಈ ತೆರಿಗೆ ಮೂಲಕ ಬಡವರನ್ನು ಪಾತಾಳಕ್ಕೆ ತುಳಿಯುವ ಕೆಲಸ ಮಾಡುತ್ತಿದ್ದಾರೆ” ಎಂದು ದೂರಿದರು. 

“ಮೋದಿ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಈ ತೆರಿಗೆಗಳನ್ನು ಹಿಂಪಡೆಯಬೇಕು. ಅದಾನಿ, ಅಂಬಾನಿಯಂತಹ ಶ್ರೀಮಂತರಿಗೆ ಎಷ್ಟಾದರೂ ತೆರಿಗೆ ಹಾಕಲಿ. ಆದರೆ, ಸರ್ಕಾರ ಇಂತಹ ದೊಡ್ಡ ಶ್ರೀಮಂತರ ₹ 12.5 ಲಕ್ಷ ಕೋಟಿಯಷ್ಟು ಸಾಲವನ್ನು ಮನ್ನಾ ಮಾಡುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 1947ರಿಂದ 2014ರವರೆಗೂ ದೇಶದ ಮೇಲೆ 53 ಲಕ್ಷ ಕೋಟಿ ಸಾಲ ಇತ್ತು. ಆದರೆ, ಮೋದಿ ಅವರು ಕಳೆದ 8 ವರ್ಷಗಳಲ್ಲಿ ₹100 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ದೇಶದ ಸಾಲದ ಪ್ರಮಾಣವನ್ನು ₹ 153 ಲಕ್ಷ ಕೋಟಿಗೂ ಹೆಚ್ಚಾಗಿದೆ. ಆ ಮೂಲಕ ದೇಶದ ಪ್ರಜೆಯ ಮೇಲೆ ಒಂದು ಮುಕ್ಕಾಲು ಲಕ್ಷ ರೂಪಾಯಿಯಷ್ಟು ಸಾಲ ಹಾಕಲಾಗಿದೆ” ಎಂದರು. 

ಈ ಸುದ್ದಿ ಓದಿದ್ದೀರಾ? ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ | ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಕ್ಲೀನ್ ಚಿಟ್

“ಇಂತಹ ಕೆಟ್ಟ ಸರ್ಕಾರ ತೊಲಗಬೇಕು. ಮೋದಿ ಸರ್ಕಾರ ಇದ್ದಷ್ಟು ದಿನ ಬಡವರು ರೈತರು, ಕಾರ್ಮಿಕರು ಸೇರಿದಂತೆ ಯಾವುದೇ ವರ್ಗ ನೆಮ್ಮದಿಯಾಗಿ ಇರುವುದಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲವಾಗಿದೆ. ಹೀಗಾಗಿ ಇಷ್ಟು ಕಠೋರವಾಗಿ ನಡೆದುಕೊಳ್ಳುತ್ತಿದೆ” ಎಂದು ಹರಿಹಾಯ್ದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಚ್ ಎಂ ರೇವಣ್ಣ, ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಶಾಸಕರಾದ ಎನ್ ಎ ಹ್ಯಾರಿಸ್, ಸೌಮ್ಯಾ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಬೆಂಗಳೂರಿನ ಮೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು ಸೇರಿದಂತೆ ಮತ್ತಿತರ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್