40% ಕಮಿಷನ್ | ಪ್ರಧಾನಿಗೆ ಪತ್ರ ಬರೆದಿದ್ದ ಗುತ್ತಿಗೆದಾರನ ವಿರುದ್ದ ಪ್ರಕರಣ ದಾಖಲು

  • ಅಧಿಕಾರಿಗಳ ವಿರುದ್ಧ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ಈಶ್ವರಪ್ಪಗೆ ಪತ್ರ ಬರೆದಿದ್ದ ಯರ್‍ರಿಸ್ವಾಮಿ
  • ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೋಹನ್ ನೀಡಿದ ದೂರಿನನ್ವಯ ಪ್ರಕರಣ ದಾಖಲು

ಸಾರ್ವಜನಿಕ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್‌ ಕೇಳುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರೊಬ್ಬರು ಪ್ರಧಾನಿಗೆ ಪತ್ರ ಬರೆದಿದ್ದರು. ಇದೀಗ, ಅವರ ವಿರುದ್ಧ ಗಂಗಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್ ನಂಬಿಕೆ ದ್ರೋಹ ಆರೋಪದಡಿ ಪ್ರಕರಣ ದಾಖಲಾಗಿದೆ. 

ಕಾರಟಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ.ಮೋಹನ್ ನೀಡಿದ ದೂರಿನನ್ವಯ ಗುತ್ತಿಗೆದಾರ ಯರ್‍ರಿಸ್ವಾಮಿ ಕುಂಟೋಜಿ ವಿರುದ್ಧ ಐಪಿಸಿ ಸೆಕ್ಷನ್‌ 406ರ ಅಡಿಯಲ್ಲಿ ಮೇ 6ರಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 10 ದಿನಗಳ ನಂತರ ವಿಷಯ ಬೆಳಕಿಗೆ ಬಂದಿದೆ.

Eedina App

2021ರ ಏಪ್ರಿಲ್ 17ರಿಂದ 2021ರ ಜೂನ್ 17ರವರೆಗೆ ಯರ್‍ರಿಸ್ವಾಮಿ ಅಕ್ರಮಗಳನ್ನು ಎಸಗಿದ್ದಾರೆ ಎಂದು ಮೋಹನ್‌ ದೂರಿನಲ್ಲಿ ತಿಳಿಸಿದ್ದಾರೆ.

"ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮುಸ್ಟೂರು ಗ್ರಾಮದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಮಗ್ರಿ ಪೂರೈಸಲು ಯರ್‍ರಿಸ್ವಾಮಿ ಅವರ ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್‌ಗೆ ವಹಿಸಲಾಗಿತ್ತು. ಗ್ರಾಮದ ತಾಂತ್ರಿಕ ಸಹಾಯಕ ವಿಷ್ಣುಕುಮಾರ್ ನಾಯ್ಕ್ ಕಾಮಗಾರಿಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕಿತ್ತು. ಅದಾಗ್ಯೂ, ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ನಾಯ್ಕ್‌ ಅವರಿಗೆ ಯರ್‍ರಿಸ್ವಾಮಿ ಪೋನ್‌ಪೇ ಮೂಲಕ ಹಣವನ್ನು ನೀಡಿದ್ದಾರೆ. ಈ ಅಕ್ರಮವು ವಿಶ್ವಾಸಾರ್ಹತೆಯ ಉಲ್ಲಂಘನೆಯಾಗಿದ್ದು, ಅವರಿಬ್ಬರ ವಿರುದ್ಧವೂ ಕ್ರಿಮಿನಲ್ ನಂಬಿಕೆ ದ್ರೋಹದ ಆರೋಪದಲ್ಲಿ ಪ್ರಕರಣ ದಾಖಲಿಸಬೇಕು" ಎಂದು ತಮ್ಮ ದೂರಿನಲ್ಲಿ ಕಾರ್ಯನಿರ್ವಹಣಾಧಿಕಾರಿ ವಿವರಿಸಿದ್ದಾರೆ. 

AV Eye Hospital ad

ಮೋಹನ್‌ ಅವರ ದೂರನ್ನು ಆಧರಿಸಿ, ಗಂಗಾವತಿ ಪೊಲೀಸರು ಯರ್‍ರಿಸ್ವಾಮಿ ಮತ್ತು ವಿಷ್ಣುಕುಮಾರ್ ನಾಯ್ಕ್ ವಿರುದ್ಧ ಐಪಿಸಿ ಸೆಕ್ಷನ್‌ 406 (ಕ್ರಿಮಿನಲ್ ನಂಬಿಕೆ ದ್ರೋಹ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಈ ಬಗ್ಗೆ 'ಈ ದಿನ.ಕಾಮ್‌' ಜೊತೆ ಮಾತನಾಡಿದ ಗಂಗಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯ ಎಸ್‌ಪಿ ಶಾರದಮ್ಮ "ಕಾರಟಗಿ ತಾಲೂಕು ಪಂಚಾಯಿತಿಯಲ್ಲಿ ಗುತ್ತಿಗೆ ಪಡೆದಿದ್ದ ಯರ್‍ರಿಸ್ವಾಮಿ ಅವರು ಅಕ್ರಮ ಎಸಗಿದ್ದಾರೆ. ಅವರೊಂದಿಗೆ ವಿಷ್ಣುಕುಮಾರ್‍‌ ನಾಯ್ಕ್‌ ಕೂಡ ಕೈಜೋಡಿದ್ದಾರೆಂದು ಮೋಹನ್‌ ಅವರು ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಇಬ್ಬರ ವಿರುದ್ಧವೂ ನಂಬಿಕೆ ದ್ರೋಹ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಇನ್ನೂ ಯಾರನ್ನೂ ಬಂಧಿಸಿಲ್ಲ. ತನಿಖೆ ನಡೆಯುತ್ತಿದೆ. ಪ್ರಧಾನಿಗೆ ಪತ್ರ  ಬರೆದಿದ್ದಕ್ಕೂ, ಪ್ರಕರಣಕ್ಕೂ ಸಂಬಂಧವಿದೆಯೆಂದು ಹೇಳಲಾಗುವುದಿಲ್ಲ" ಎಂದು ತಿಳಿಸಿದ್ದಾರೆ.

ಹಣಕ್ಕೆ ಬೇಡಿಕೆ ಇಡುತ್ತಿರುವ ಅಧಿಕಾರಿಗಳ ವಿರುದ್ಧ ಯರ್‍ರಿಸ್ವಾಮಿ ಮಾ.3ರಂದು ಮಾಧ್ಯಮದವರ ಮೊರೆ ಹೋಗಿದ್ದರು. "ತಾವು ನಡೆಸಿದ ಸಾರ್ವಜನಿಕ ಕಾಮಗಾರಿಗೆ ಶೇ.40ರಷ್ಟು ಕಮಿಷನ್ ನೀಡುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆಂದು" ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಗಿ ಹೇಳಿದ್ದರು. 

"ಕಾಮಗಾರಿಗೆ ಸಂಬಂಧಿಸಂತೆ 15 ಲಕ್ಷ ರೂ.ಗಳ ಸಾಮಾಗ್ರಿಗಳನ್ನು ಪೂರೈಸಲಾಗಿದೆ. ಆದರೆ, ಇಲ್ಲಿಯವರೆಗೆ 4.8 ಲಕ್ಷ ರೂ.ಗಳನ್ನು ನನಗೆ ಪಾವತಿ ಮಾಡಿದ್ದಾರೆ. ಉಳಿದ ಹಣವನ್ನು ಪಾವತಿಸಿಲ್ಲ. ಹಿಂದಿನ ಚುನಾಯಿತ ಗ್ರಾಮ ಪಂಚಾಯಿತಿಯು ನನಗೆ ಕಾಮಗಾರಿಯ ಟೆಂಡರ್ ನೀಡಿತ್ತು. ಹೊಸ ಚುನಾಯಿತ ಸಂಸ್ಥೆ ಅಧಿಕಾರ ವಹಿಸಿಕೊಂಡ ನಂತರ, ಅಧಿಕಾರಿಗಳು ಟೆಂಡರ್‍‌ನ ಮೊತ್ತದಲ್ಲಿ ಶೇ.40 ರಷ್ಟು ಕಡಿತಗೊಳಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದರು" ಎಂದು ಯರ್‍ರಿಸ್ವಾಮಿ ಆರೋಪಿಸಿದ್ದರು. 

ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡಿಸುತ್ತೇನೆ. ಯಾವುದೇ ಹಣ ನೀಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದೆ. ಆರಂಭದಲ್ಲಿ, ಎಲ್ಲರೂ ಒಪ್ಪಿದರು. ಆದರೆ ನಂತರ ಅವರ ವರ್ತನೆ ಬದಲಾಯಿತು. ಮತ್ತೆ ಬೇಡಿಕೆಯನ್ನು ಮುಂದಿಟ್ಟರು. 40% ಕಮಿಷನ್ ನೀಡದಿದ್ದರೆ, ಭೀಕರ ಪರಿಣಾಮ ಎದುರಿಸಬೇಕಾಗುತ್ತದೆಂದು ಅಧಿಕಾರಿಗಳು ಬೆದರಿಕೆ ಹಾಕಿದರು" ಎಂದು ಗುತ್ತಿಗೆದಾರ ಆರೋಪಿಸಿದ್ದರು.

"ಅಲ್ಲದೆ, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೂ ಪತ್ರ ಬರೆದಿದ್ದೆ. ಆದರೆ, ಇದೀಗ ನನ್ನ ವಿರುದ್ಧವೇ ಐಪಿಸಿ ಸೆಕ್ಷನ್ 406 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಯರ್‍ರಿಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ವಿಶೇಷ ಸಂದರ್ಶನ| ಶೇ.40 ಕಮಿಷನ್‌ನಲ್ಲಿ ಆರ್‌ಎಸ್‌ಎಸ್‌ಗೂ ಪಾಲಿದೆ: ಬಿ.ಕೆ. ಹರಿಪ್ರಸಾದ್

ಏಪ್ರಿಲ್ 12 ರಂದು, ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ - ಉಡುಪಿಯ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದಿದ್ದ ಆತ್ಮಹತ್ಯೆ ಪತ್ರದಲ್ಲಿ, "ಕಳೆದ ವರ್ಷ ತಮ್ಮ ಗ್ರಾಮದಲ್ಲಿ ನಡೆಸಲಾದ ಸಿವಿಲ್ ಕಾಮಗಾರಿಯಲ್ಲಿ 40% ಪರ್ಸೆಂಟ್ ಕಮಿಷನ್ ನೀಡಬೇಕೆಂದು ಈಶ್ವರಪ್ಪ ಕೇಳಿದ್ದಾರೆ" ಎಂದು ಆರೋಪಿಸಿದ್ದರು.

ಘಟನೆಯ ಬೆನ್ನಲ್ಲೇ ಈಶ್ವರಪ್ಪ ಅವರು ತನಿಖೆಯ ನಂತರ ಸ್ಪಷ್ಟನೆ ನೀಡುವುದಾಗಿ ಹೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ನಿಮಗೆ ಏನು ಅನ್ನಿಸ್ತು?
2 ವೋಟ್
eedina app