ʼನಾ ಖಾವೂಂಗ, ನಾ ಖಾನೇದೂಂಗʼ ನಿಮ್ಮ ಮಾತು ಸತ್ಯ ಆಗಿದ್ದರೆ 40% ಕಮಿಷನ್ ತನಿಖೆ ಯಾವಾಗ ಮೋದಿ: ಸಿದ್ದರಾಮಯ್ಯ

Siddaramaiah modi
  • #AnswerMadiModi ಹ್ಯಾಷ್‌ಟ್ಯಾಗ್‌ನಡಿ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಪ್ರಶ್ನೆ
  • ಕರ್ನಾಟಕದ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ, ಕೇಂದ್ರದ ಪಾಲು ಕಡಿಮೆಯಾಗುತ್ತಿದೆ: ಬೇಸರ

“ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ತಮಗೆ ಪತ್ರ ಬರೆದು ರಾಜ್ಯದ ಬಿಜೆಪಿ ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ 40% ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿದ್ದಾರೆ. ʼನಾ ಖಾವೂಂಗ, ನಾ ಖಾನೇದೂಂಗʼ ಎನ್ನುವ ನಿಮ್ಮ ಮಾತು ಸತ್ಯವೇ ಆಗಿದ್ದರೆ ಈ ಹಗರಣದ ತನಿಖೆ ಯಾವಾಗ ಮಾಡಿಸುತ್ತೀರಿ ಪ್ರಧಾನಿ ಮೋದಿಯವರೇ?” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸೋಮವಾರ #AnswerMadiModi ಹ್ಯಾಸ್‌ಟ್ಯಾಗ್‌ನಡಿ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಪ್ರಧಾನಿ ಮೋದಿ ಅವರ ಮುಂದಿಟ್ಟಿದ್ದಾರೆ.

“ಬೆಂಗಳೂರು ಜನತೆಯ ಬಹುಕಾಲದ ಬೇಡಿಕೆಯಾದ ಬೆಂಗಳೂರು ಉಪನಗರ ರೈಲು ಯೋಜನೆ ನೆನೆಗುದಿಗೆ ಬೀಳಲು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಕಾರಣವಲ್ಲವೇ? ಈ ಯೋಜನೆಯ ಚಾಲನೆ ಇಷ್ಟೊಂದು ವಿಳಂಬವಾಗಲು ಕೇಂದ್ರ ಸರ್ಕಾರವೇ ಹೊಣೆಯಲ್ಲವೇ?,” ಪ್ರಧಾನಿ ನರೇಂದ್ರ ಮೋದಿ ಅವರೇ ಇದಕ್ಕೆ ಉತ್ತರಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

“ಮೂಲಯೋಜನೆಯ ಪ್ರಕಾರ ಬೆಂಗಳೂರು ಉಪನಗರ ರೈಲು ಯೋಜನೆಯ ಶೇ.20ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿದೆ. ಈ ಶೇ.20 ವೆಚ್ಚವನ್ನು ಕೇಂದ್ರ ಸರ್ಕಾರ ನೀಡಿದೆಯೇ? ಇಲ್ಲವೇ ಇದು ಇನ್ನೊಂದು ಜುಮ್ಲಾವೇ,” ಎಂದು ಪ್ರಶ್ನಿಸಿದ್ದಾರೆ.

“ದೇಶದ ರೈತರ ಪ್ರತಿರೋಧಕ್ಕೆ ಮಣಿದು ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಆದರೆ ರಾಜ್ಯ ಸರ್ಕಾರ ಇಲ್ಲಿಯ ವರೆಗೆ ಕಾಯ್ದೆಗಳನ್ನು ರದ್ದುಮಾಡಿಲ್ಲ. ಇದು ನಿಮ್ಮ ಸೂಚನೆಯಂತೆಯೇ ನಡೆದಿದ್ದೋ?  ಇಲ್ಲವೇ ರಾಜ್ಯ ಸರ್ಕಾರದ ರೈತವಿರೋಧಿ ನೀತಿಯೇ?,” ಎಂದು ಕೇಳಿದ್ದಾರೆ.

“ಬೆಂಗಳೂರು ನಗರಕ್ಕೆ ಕುಡಿಯುವ ನೀರುಣಿಸುವ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದು ಏಕೆ? ಇದಕ್ಕೆ ಕಾರಣ ತಮಿಳುನಾಡು ಸರ್ಕಾರದ ಒತ್ತಡವೇ? ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ ಪೂರ್ವಗ್ರಹವೆ?,” ಎಂದು ಪ್ರಶ್ನಿಸಿದ್ದಾರೆ.

“ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 11 ಕೋಟಿ ಜನ ಉದ್ಯೋಗಿಗಳಿದ್ದರು. ನೋಟು ಅಮಾನ್ಯೀಕರಣ, ಜಿಎಸ್ಟಿ ಜಾರಿ ಹಾಗೂ ಕೊರೊನಾದಿಂದಾಗಿ  ಕೈಗಾರಿಕೆಗಳು ಸ್ಥಗಿತಗೊಂಡು ಕೇವಲ 2.5 - 3 ಕೋಟಿ ಉದ್ಯೋಗಗಳು ಉಳಿದಿವೆ. ಈ ಉದ್ಯೋಗ ನಷ್ಟಕ್ಕೆ ಯಾರು ಹೊಣೆ ಮೋದಿಯವರೇ,” ಎಂದಿದ್ದಾರೆ.

ನಷ್ಟಕ್ಕೆ ಯಾರು ಹೊಣೆ?

ಕರ್ನಾಟಕದ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದೆ, ಕೇಂದ್ರದಿಂದ ಬರುವ ಪಾಲು ಕಡಿಮೆಯಾಗುತ್ತಿದೆ. 2012-13 ರಲ್ಲಿ ರೂ. 12,647 ಕೋಟಿ, 2013 - 14 ರಲ್ಲಿ ರೂ. 13,894 ಕೋಟಿ, 2014-15 ರಲ್ಲಿ ರೂ. 14,654 ಕೋಟಿ, 2015-16 ರಲ್ಲಿ ರೂ. 23,983 ಕೋಟಿ, 2017-18 ರಲ್ಲಿ ರೂ. 31,752 ಕೋಟಿ, 2018-19 ರಲ್ಲಿ ರೂ. 35,895 ಕೋಟಿ, 2019-20 ರಲ್ಲಿ 30,919 ಕೋಟಿ, 2020-21 ರಲ್ಲಿ ರೂ. 21,495 ಕೋಟಿ, ಈ ನಷ್ಟಕ್ಕೆ ಯಾರು ಹೊಣೆ ಪ್ರಧಾನಿ ನರೇಂದ್ರ ಮೋದಿಯವರೇ,” ಎಂದು ಪ್ರಶ್ನಿಸಿದ್ದಾರೆ.

“2013-14 ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ರೂ. 16,06000 ಕೋಟಿ ಇತ್ತು, ಈಗಿನ ಬಜೆಟ್ ಗಾತ್ರ ರೂ. 39,45,000 ಕೋಟಿಗೆ ಹೆಚ್ಚಾಗಿದೆ. ಆದರೆ ರಾಜ್ಯದ ತೆರಿಗೆ ಪಾಲು ಕಡಿಮೆಯಾಗುತ್ತಾ ಬಂದಿದೆ, ಯಾಕೆ? ಜಿಎಸ್ಟಿ ಜಾರಿಗೆ ಮೊದಲು ರಾಜ್ಯದ ತೆರಿಗೆ ಸಂಗ್ರಹದ ಬೆಳವಣಿಗೆ ದರ 13 - 14% ಇತ್ತು, 14 ಮತ್ತು 15ನೇ ಹಣಕಾಸು ಆಯೋಗದ ವರದಿಗಳ ನಡುವೆ ರಾಜ್ಯದ ತೆರಿಗೆ ಪಾಲು 1.07% ಕಡಿಮೆಯಾಯಿತು. ಈ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಿ ಕೊಡಬೇಕಲ್ವಾ?,” ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜೆಎನ್‌ಯು ಟೀಕಿಸಿ ಪೇಚಿಗೀಡಾದ ಸಂಸದ ತೇಜಸ್ವಿ ಸೂರ್ಯ; ರಾಘವ್ ಚಡ್ಡಾ ಉತ್ತರ ವೈರಲ್

“15 ನೇ ಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರೂ. 5,495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು, ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಶಿಫಾರಸನ್ನು ತಿರಸ್ಕರಿಸಿದ್ದು ರಾಜ್ಯಕ್ಕೆ ಬಗೆದ ದ್ರೋಹವಲ್ಲವೇ? ಪ್ರಸಕ್ತ ವರ್ಷದ ಜೂನ್ 30 ಕ್ಕೆ ಜಿಎಸ್ಟಿ ಪರಿಹಾರ ಕೊನೆಗೊಂಡು ವರ್ಷಕ್ಕೆ ಕನಿಷ್ಠ ರೂ.20 ಸಾವಿರ ಕೋಟಿ ನಷ್ಟವಾಗಲಿದೆ. ಜಿ.ಎಸ್ ಟಿ ಪರಿಹಾರವನ್ನುಮೂರು ವರ್ಷ ಮುಂದುವರಿಸಬೇಕೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಈ ಬಗ್ಗೆ ನಿಮ್ಮ ನಿಲುವು ಏನು?,” ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.

“ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ಜಿಎಸ್ಟಿ ಪರಿಹಾರವಾಗಿ 18,109 ಕೋಟಿ ರೂಪಾಯಿ ಸಾಲ ಕೊಟ್ಟಿದೆ. ಸಾಲವನ್ನು ರಾಜ್ಯದ ಜನರಿಂದಲೇ ಸೆಸ್ ಮೂಲಕ ಕೇಂದ್ರ ಸರ್ಕಾರ ಸಂಗ್ರಹಿಸುತ್ತದೆ. ಇದು ನಮ್ಮ ಜನರ ತಲೆಮೇಲಿನ ಹೆಚ್ಚುವರಿ ಹೊರೆಯಲ್ಲವೇ? ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ಮಾಡಬೇಕು ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರಲು ಹೊರಟಿದ್ದಾರೆ. ನರೇಂದ್ರ ಮೋದಿ ಅವರೇ, ಕನ್ನಡದ ಅಸ್ಮಿತೆಯ ಬಗ್ಗೆ ನಿಮ್ಮ ನಿಲುವೇನು? ನಿಮ್ಮ ಮೌನ ಅಮಿತ್ ಶಾ ಅವರ ಹೇಳಿಕೆಗೆ ಸಹಮತವೋ?,” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್