
- ತನಗಿಂತ 20 ವರ್ಷ ಚಿಕ್ಕ ವಯಸ್ಸಿನ ಮಹಿಳೆಯನ್ನು ವಿವಾಹವಾಗಿದ್ದ ತುಮಕೂರಿನ ಶಂಕರಪ್ಪ ಆತ್ಮಹತ್ಯೆ.
- ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶಂಕರಪ್ಪ ಶವ ಪತ್ತೆ, ಪೊಲೀಸರಿಂದ ಸ್ಥಳ ಪರಿಶೀಲನೆ
ಕಳೆದ ವರ್ಷ 25 ವರ್ಷ ವಯಸ್ಸಿನ ಮಹಿಳೆ ಮೇಘನಾ ಎಂಬಾಕೆಯನ್ನು ವಿವಾಹವಾಗಿ ಸುದ್ದಿಯಾಗಿದ್ದ 45 ವರ್ಷದ ಶಂಕರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿಪಾಳ್ಯದ ನಿವಾಸಿಯಾಗಿದ್ದ ಶಂಕರಪ್ಪ, ತನಗಿಂತ 20 ವರ್ಷ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದರು. ಸ್ವತಃ ಮೇಘನಾ ತನ್ನನ್ನು ಮದುವೆಯಾಗುವಂತೆ ಶಂಕರಪ್ಪ ಅವರನ್ನು ಕೇಳಿಕೊಂಡಿದ್ದರಿಂದ ಗ್ರಾಮಸ್ಥರ ಸಮ್ಮುಖದಲ್ಲಿ ದೇವಸ್ಥಾನದ ಮುಂದೆ ಇಬ್ಬರು ವಿವಾಹವಾಗಿದ್ದರು. ಆ ವೇಳೆ ಈ ದಂಪತಿಗಳ ವಿವಾಹ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಮಹಿಳೆ ಮೇಘನಾ, ಶಂಕರಪ್ಪ ಅವರನ್ನು ವಿವಾಹವಾಗುವ ಮುನ್ನವೇ ಬೇರೆ ಮದುವೆಯಾಗಿದ್ದರು. ಆದರೆ, ಪತಿ ನಾಪತ್ತೆಯಾಗಿ ವರ್ಷಗಳೇ ಕಳೆದರೂ ಮನೆಗೆ ಹಿಂದಿರುಗಿರಲಿಲ್ಲ. ನಂತರ 45 ವರ್ಷ ವಯಸ್ಸಾದರೂ ಅವಿವಾಹಿತರಾಗಿಯೇ ಉಳಿದಿದ್ದ ಶಂಕರಪ್ಪ ಮತ್ತು ಮೇಘನಾ 5 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಬೆಳಗ್ಗೆ ಮನೆಯಲ್ಲಿ ಟೀ ಕುಡಿದ ಬಳಿಕ ತೋಟದ ಕಡೆ ಹೋಗಿದ್ದ ಶಂಕರಪ್ಪ ತೋಟದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂಬ ಮಾಹಿತಿ ಇದ್ದು, ಪೊಲೀಸರು ಖಚಿತಪಡಿಸಬೇಕಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಚೇತನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.