ಚಾಮರಾಜನಗರ | ದಟ್ಟಾರಣ್ಯದ ಕತ್ತಲ ಹಾದಿಯಲ್ಲಿ ಗರ್ಭಿಣಿಯನ್ನು 8 ಕಿ.ಮೀ ಡೋಲಿಯಲ್ಲಿ ಹೊತ್ತೊಯ್ದರು!

  • ಮಧ್ಯ ರಾತ್ರಿ 2 ಗಂಟೆಗೆ ಹೊರಟು ಬೆಳಿಗ್ಗೆ 6 ಗಂಟೆಗೆ ಆಸ್ಪತ್ರೆ ತಲುಪಿದ ಗ್ರಾಮಸ್ಥರು
  • ಆಪತ್ಕಾಲದಲ್ಲಿ ಗರ್ಭಿಣಿಯ ನೆರವಿಗೆ ಬರಲಿಲ್ಲ ‘ಜನವನ ಸೇತುವೆ’ ಸೌಲಭ್ಯ

ವೈದ್ಯರು ನೀಡಿದ್ದ ದಿನಾಂಕಕ್ಕಿಂತ ಹತ್ತು ದಿನ ಮೊದಲೇ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ದಟ್ಟ ಕಾಡು ದಾರಿಯಲ್ಲಿ 8 ಕಿ.ಮೀ ಹೆಗಲ ಮೇಲೆಯೇ ಹೊತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿದೆ.

ಇಂಥ ಮನಕಲಕುವ ಘಟನೆ ನಡೆದಿರುವುದು ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟ ಅರಣ್ಯ ವಲಯದ ದೊಡ್ಡಾಣೆ ಗ್ರಾಮದಲ್ಲಿ.

ದೊಡ್ಡಾಣೆ ಗ್ರಾಮದ ಶಾಂತಲಾ ಎಂಬ ಗರ್ಭಿಣಿಗೆ ತಡ ಬುಧವಾರ ರಾತ್ರಿ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅರಣ್ಯ ಇಲಾಖೆ ಮತ್ತು ಚಾಮರಾಜನಗರ ಜಿಲ್ಲಾಡಳಿತದ ಸಹಯೋಗದಲ್ಲಿ ವ್ಯವಸ್ಥೆ ಮಾಡಿದ್ದ ಜೀಪ್ ಚಾಲಕರಿಗೆ ಕರೆ ಮಾಡಿದ್ದಾರೆ. ಆದರೆ ಸಂಪರ್ಕ ಸಿಕ್ಕಿಲ್ಲ. ಬೇರೆ ದಾರಿ ಹೊಳೆಯದೇ ಮಾಮೂಲಿನಂತೆ ಡೋಲಿಯಲ್ಲಿ ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ.

ತಡರಾತ್ರಿ 2 ಗಂಟೆ ಗ್ರಾಮಸ್ಥರು ದೊಡ್ಡಾಣೆಯಿಂದ ಹೊರಟು ಕಾಡು ಪ್ರಾಣಿಗಳ ಭಯದ ನಡುವೆಯೂ 8 ಕಿ.ಮೀ ಕಾಡಿನ ಕಲ್ಲು ಮುಳ್ಳಿನ ದಾರಿಯಲ್ಲಿ ನಡೆದು ಸಾಗಿದ್ದಾರೆ. ಹೀಗೆ ಸತತ ನಾಲ್ಕು ಗಂಟೆ ನಡೆದು ಬೆಳಿಗ್ಗೆ 6 ಗಂಟೆಗೆ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿಯನ್ನು ತಲುಪಿಸಿದ್ದಾರೆ. ಅದೃಷ್ಟವಶಾತ್ ಹಾದಿ ಮಧ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಅಲ್ಲದೇ ನಾರ್ಮಲ್ ಹೆರಿಗೆ ಆಗಿದೆ.

ದೊಡ್ಡಾಣೆ ಗ್ರಾಮಸ್ಥ ಗಣೇಶ್, ಈ ದಿನ.ಕಾಮ್ ಜತೆಗೆ ಮಾತನಾಡಿ, ”ಶಾಂತಲಾ ಅವರಿಗೆ ಇದೇ ಚೊಚ್ಚಲ ಹೆರಿಗೆ. ವೈದ್ಯರು ನೀಡಿದ್ದ ದಿನಾಂಕಕ್ಕಿಂತ ಹತ್ತು ದಿನ ಮೊದಲೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ನಾಲ್ಕು ಜೀಪ್‌ಗಳ ವ್ಯವಸ್ಥೆ ಮಾಡಿತ್ತು. ನಾವು ಚಾಲಕರಿಗೆ ಮತ್ತು ಅಧಿಕಾರಿಗಳಿಗೆ ಕರೆ ಮಾಡಲು ತುಂಬಾ ಪ್ರಯತ್ನಪಟ್ಟೆವು ಆದರೆ, ಸಂಪರ್ಕ ಸಿಗಲಿಲ್ಲ” ಎಂದು ಸನ್ನಿವೇಶ ವಿವರಿಸಿದರು. 

“ಹೆರಿಗೆ ನೋವು ಹೆಚ್ಚಾಗುತ್ತಿದ್ದ ಕಾರಣ ಶಾಂತಲಾ ಅವರನ್ನು ಅನಿವಾರ್ಯವಾಗಿ ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ನಾರ್ಮಲ್ ಹೆರಿಗೆ ಆಗಿದ್ದು, ಮಗು ಹುಟ್ಟುವಾಗ ಕಡಿಮೆ ತೂಕ ಇದ್ದ ಕಾರಣ ಹೆಚ್ಚಿನ ಆರೈಕೆಗೆ ಮೈಸೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ” ಎಂದು ತಮ್ಮ ಅಳಲು ತೋಡಿಕೊಂಡರು.

ಕೆಲವು ದಿನಗಳ ಹಿಂದೆಯಷ್ಟೇ ನಾಲ್ಕು ಜೀಪ್ ಖರೀದಿಸಲಾಗಿತ್ತು

ಚಾಮರಾಜನಗರ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ 55 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಜೀಪ್‌ಗಳನ್ನು ಖರೀದಿಸಲಾಗಿತ್ತು. 18 ಗ್ರಾಮಗಳಲ್ಲಿ 15 ಗ್ರಾಮಗಳಿಗೆ ವಿವಿಧ ಮಾರ್ಗಗಳನ್ನು ಗುರುತು ಮಾಡಿ ಈ ಜೀಪ್‌ಗಳ ಸಂಚಾರ ಆರಂಭಿಸಲಾಗಿತ್ತು. ಈ ಯೋಜನೆಗೆ ‘ಜನವನ ಸೇತುವೆ’ ಎಂದು ಹೆಸರಿಡಲಾಗಿತ್ತು. ಗರ್ಭಿಣಿಯರು, ವಿದ್ಯಾರ್ಥಿಗಳು, ಅನಾರೋಗ್ಯಪೀಡಿತರು ಹಾಗೂ ಪಡಿತರ ತರುವವರಿಗೆ ಉಚಿತ ಸೇವೆ ಎಂದು ಘೋಷಿಸಲಾಗಿತ್ತು. ಈಗಾಗಲೇ ಜೀಪುಗಳು ಕಾರ್ಯಾರಂಭ ಮಾಡಿದ್ದವು.

Image

ಅರಣ್ಯ ಪ್ರದೇಶವಾದ್ದರಿಂದ ನೆಟ್‌ವರ್ಕ್ ಸಮಸ್ಯೆ ಆಗಿದೆ: ಡಿಎಫ್‌ಒ

ಚಾಮರಾಜನಗರ ಜಿಲ್ಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕೊಂಡಲು ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ,“ಮಹದೇಶ್ವರ ಬೆಟ್ಟ ಅರಣ್ಯ ವಲಯದಲ್ಲಿ ಅಂದು ಕರೆಂಟ್ ಹೋಗಿತ್ತು. ಜತೆಗೆ ಅರಣ್ಯ ಪ್ರದೇಶ ಆದ್ದರಿಂದ ನೆಟ್‌ವರ್ಕ್ ಸಮಸ್ಯೆಯೂ ಆಗಿರಬಹುದು. ಕಾಡಂಚಿನ ಗ್ರಾಮಗಳ ಜನರ ಅನುಕೂಲಕ್ಕಾಗಿಯೇ ನಾಲ್ಕು ಜೀಪ್‌ಗಳನ್ನು ಖರೀದಿಸಿದ್ದೇವೆ. ಅವು ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಒಬ್ಬರು ಗರ್ಭಿಣಿಯನ್ನು ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿ ಸೇರಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಇಲಾಖೆಯ ವಾಹನಗಳಲ್ಲಿಯೇ ಅವರನ್ನು ಕರೆದುಕೊಂಡು ಬಂದಿದ್ದೇವೆ” ಎಂದರು.

“ಗರ್ಭಿಣಿಯರಿಗೆ ವೈದ್ಯರು ನೀಡುವ ದಿನಾಂಕಕ್ಕೂ ಹತ್ತು ದಿನ ಮೊದಲೇ ಆಸ್ಪತ್ರೆಗೆ ದಾಖಲಿಸಬೇಕು ಅಥವಾ ಮುಂಚೆಯೇ ಅವರಿಗೆ ನಗರದಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಕೇಳಿಕೊಂಡಿದ್ದೇನೆ” ಎಂದು ಡಿಸಿಎಫ್‌ ಏಡುಕೊಂಡಲು ಹೇಳಿದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಕಾಡಂಚಿನ ನಿವಾಸಿಗಳ ನಿತ್ಯ ಸಂಕಟಕ್ಕೆ ತಾತ್ಕಾಲಿಕ ಪರಿಹಾರ

ಹತ್ತು ದಿನ ಮೊದಲೇ ಆಸ್ಪತ್ರೆಗೆ ದಾಖಲಿಸಲು ಸೂಚನೆ: ಡಿಎಚ್‌ಒ

ಚಾಮರಾಜನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ ಈ ದಿನ.ಕಾಮ್ ಜತೆಗೆ ಮಾತನಾಡಿ, ”ಕೆಲವು ಸಂದರ್ಭದಲ್ಲಿ ಹೆರಿಗೆ ದಿನಾಂಕ ಹೆಚ್ಚು ಕಡಿಮೆ ಆಗುವ ಸಂದರ್ಭ ಇದೆ. ಡೋಲಿಯಲ್ಲಿ ಹೊತ್ತು ತರುವಾಗ ಹೆರಿಗೆ ಆಗುವ ಸಾಧ್ಯತೆಗಳು ಹೆಚ್ಚು. ಆದರೆ ಗ್ರಾಮೀಣ ಭಾಗದ ಮಹಿಳೆ ಆದ್ದರಿಂದ ಯಾವುದೇ ಸಮಸ್ಯೆ ಆಗಿಲ್ಲ. ನಾರ್ಮಲ್ ಹೆರಿಗೆ ಆಗಿದ್ದು, ಮಗುವಿನ ಹೆಚ್ಚಿನ ಆರೈಕೆಗೆ ಮೈಸೂರಿಗೆ ಕಳುಹಿಸಲಾಗಿದೆ” ಎಂದು ಹೇಳಿದರು.

“ಈ ರೀತಿಯ ಘಟನೆಗಳು ಮರುಕಳಿಸದಂತೆ ಗರ್ಭಿಣಿಯರಿಗೆ ಹೆರಿಗೆ ದಿನಾಂಕಕ್ಕಿಂತ ಹತ್ತು ದಿನ ಮೊದಲೇ ಆಸ್ಪತ್ರೆಗೆ ದಾಖಲು ಮಾಡುವ ಬಗ್ಗೆ ಚರ್ಚಿಸಲಾಗಿದೆ. ಅದರಂತೆ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಬಳಿಯೂ ಮಾತನಾಡಿದ್ದೇವೆ” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್