₹860 ಕೋಟಿಯ ಬಹುದೊಡ್ಡ ಹಗರಣದಲ್ಲಿ ಸಿಎಂ ಬೊಮ್ಮಾಯಿ ಭಾಗಿ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ

Bommai and Ramesh Jaraki Holi
  • ರಮೇಶ್ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯಲಕ್ಷ್ಮಿ ಶುಗರ್ಸ್ ಕಾರ್ಖಾನೆ ಮೇಲೆ ಅಕ್ರಮದ ಆರೋಪ
  • ದಿವಾಳಿ ಸಂಸ್ಥೆ ಎಂದು ಘೋಷಣೆಯಾದ ಕಾರ್ಖಾನೆ ಕ್ರಮವಾಗಿ ₹60, 72 ಕೋಟಿ ಲಾಭ ಮಾಡಿದ್ದೇಗೆ?

"ರಮೇಶ್ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯಲಕ್ಷ್ಮಿ ಶುಗರ್ಸ್ ಕಾರ್ಖಾನೆ 9 ಸಹಕಾರಿ ಬ್ಯಾಂಕ್‌ಗಳಲ್ಲಿ 578 ಕೋಟಿ ರೂ. ಸಾಲ ಮಾಡಿದೆ. ಈ ಸಾಲ ಮರು ಪಾವತಿ ಮಾಡಿರುವುದಿಲ್ಲ. ಅಪೆಕ್ಸ್ ಬ್ಯಾಂಕ್ ಈ ಕಾರ್ಖಾನೆಯನ್ನು NPA (ದಿವಾಳಿ ಸಂಸ್ಥೆ) ಎಂದು ಘೋಷಿಸಿದೆ. ಆದರೆ, ಈ ದಿವಾಳಿ ಕಂಪನಿ 2021-22 ಮತ್ತು 2022-23ನೇ ಸಾಲಿನಲ್ಲಿ ವಾರ್ಷಿಕವಾಗಿ ಕ್ರಮವಾಗಿ ₹60 ಕೋಟಿ ಮತ್ತು ₹72 ಕೋಟಿ ಲಾಭ ಮಾಡಿದೆ" ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ತಿಳಿಸಿದರು. 

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಸಂಸ್ಥೆಗೆ 9 ಜನ ನಿರ್ದೇಶಕರಿದ್ದರೂ ಇವರನ್ನು ಉದ್ದೇಶಿತ ಸುಸ್ತಿದಾರರು ಎಂದು ಅಪೆಕ್ಸ್ ಬ್ಯಾಂಕ್ ಘೋಷಿಸಿದೆ. ಈ ರೀತಿ ಉದ್ದೇಶಿತ ಸುಸ್ತಿದಾರ ಎಂದು ಘೋಷಿಸಿದ ನಂತರ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲಿ ಆ ಕೆಲಸ ನಡೆದಿಲ್ಲ” ಎಂದು ದೂರಿದರು.

Eedina App

“ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ಕೃಪಾಕಟಾಕ್ಷದಿಂದ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿಲ್ಲ. ʼಅಮಿತ್ ಶಾ ಅವರು ನನಗೆ ಆತ್ಮೀಯರು, ಅವರ ಕೃಪಾಕಟಾಕ್ಷ ನನ್ನ ಮೇಲಿದೆʼ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಇನ್ನು ರಾಜ್ಯ ಸಹಕಾರ ಸಚಿವ ಸೋಮಶೇಖರ್ ಮತ್ತು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಬಸವರಾಜ ಬೊಮ್ಮಾಯಿ ಅವರು ₹860 ಕೋಟಿಯ ಬಹುದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದಾರೆ” ಎಂದು ಆರೋಪಿಸಿದರು.

“578 ಕೋಟಿ ರೂ. ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೆ, ಆದಾಯ ತೆರಿಗೆ ಇಲಾಖೆಗೆ ₹150 ಕೋಟಿ ಪಾವತಿ ಬಾಕಿ, ರೈತರ ಬಳಿ ₹50 ಕೋಟಿ ಬಾಕಿ ಹಾಗೂ ಗುತ್ತಿಗೆದಾರರ ಬಳಿ ₹50 ಕೋಟಿ, ಇತರೆ ಸಾಲ ₹60 ಕೋಟಿ ಬಾಕಿ ಉಳಿಸಿಕೊಂಡು ಮೋಸ ಮಾಡಿದ್ದಾರೆ. ಇಷ್ಟೆಲ್ಲ ಮೋಸ ಮಾಡಿದ್ದರೂ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ, ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಸುಮ್ಮನೆ ಇದ್ದಾರೆ.  ಇವರು ಅಧ್ಯಕ್ಷರಾಗುವ ಮುನ್ನ 2019ರಲ್ಲಿ ಅಪೆಕ್ಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಈ ಸಂಸ್ಥೆಗೆ ನೋಟಿಸ್ ನೀಡಿ ಬಾಕಿ ಹಣ ವಾಪಸ್ ಮಾಡಬೇಕು; ಇಲ್ಲದಿದ್ದರೆ ಕಾರ್ಖಾನೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದರು” ಎಂದರು.

“ನಂತರ ರಮೇಶ್ ಜಾರಕಿಹೊಳಿ ಅವರು ಈ ನೋಟಿಸ್ ವಿರುದ್ಧ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿರುತ್ತಾರೆ. ಆಗ ಕೋರ್ಟ್ 28-11-2019ರಂದು ಒಂದು ನಿರ್ದೇಶನ ನೀಡಿ ಈ ₹578 ಕೋಟಿ ಸಾಲದಲ್ಲಿ ಶೇ.50ರಷ್ಟು ಸಾಲವನ್ನು ಆರು ವಾರಗಳಲ್ಲಿ ಮರುಪಾವತಿ ಮಾಡಿ ನಂತರ ನ್ಯಾಯಾಲಯಕ್ಕೆ ಆಗಮಿಸುವಂತೆ ತಿಳಿಸುತ್ತದೆ. ನ್ಯಾಯಾಲಯ ಕೊಟ್ಟ ಆರು ವಾರಗಳು ಅಷ್ಟೇ ಅಲ್ಲ 3 ವರ್ಷ ಕಳೆದರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆ ಮೂಲಕ ಕೋರ್ಟ್ ಆದೇಶ ಉಲ್ಲಂಘನೆ ಮಾಡಲಾಗಿದೆ” ಎಂದರು. 

“ತದನಂತರದಲ್ಲಿ 2-12-2021ರಂದು ಬೆಳ್ಳಿ ಪ್ರಕಾಶ್ ಅವರು ಶೋಕಾಸ್ ನೋಟಿಸ್ ನೀಡಿ ನ್ಯಾಯಾಲಯದ ಆದೇಶದಂತೆ ಅವರು ಸಾಲದ ಪ್ರಮಾಣದಲ್ಲಿ ಅರ್ಧದಷ್ಟು ಸಾಲ ಮರುಪಾವತಿ ಮಾಡಬೇಕಿತ್ತು, ಅದನ್ನು ವಸೂಲಿ ಮಾಡಲು ಸರ್ಫೇಸಿ ಆಕ್ಟ್ ಪ್ರಕಾರ ಆಸ್ತಿ ಮುಟ್ಟುಗೋಲು ಹಾಕುವಂತೆ ಆದೇಶ ನೀಡಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಾರೆ. ಈ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ವಿವರಿಸಿದರು.

“ನಾವು ಈ ವಿಚಾರದಲ್ಲಿ ಆಕ್ಷೇಪ ಎತ್ತಿ ಷಡ್ಯಂತ್ರ ಬಯಲು ಮಾಡಿದ ನಂತರ NCLT ಅವರು IRP ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದ್ದಾರೆ. ಒಂದು ವಾರದ ಹಿಂದೆ ಈ ಆದೇಶ ಹೊರಬಂದಿದೆ. ಅಲ್ಲದೇ ಇತರೆ 8 ಬ್ಯಾಂಕುಗಳು NCLTಗೆ ಆಕ್ಷೇಪಣಾ ಪತ್ರ ಬರೆದಿದ್ದು, ನಮಗೂ ಸಾಲ ಮರುಪಾವತಿ ಆಗಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಎಲ್ಲ ಪ್ರಕ್ರಿಯೆಗೆ ತಡೆ ಹಿಡಿಯಲಾಗಿದೆ. ಆ ಮೂಲಕ ನಮ್ಮ ಹೋರಾಟಕ್ಕೆ ಮೊದಲ ಹಂತದಲ್ಲಿ ಜಯ ಸಿಕ್ಕಿದೆ” ಎಂದರು.

“ಬಿಜೆಪಿಯವರಿಗೆ ಮಾನ ಮಾರ್ಯಾದೆ ಇದ್ದರೆ ಸುಸ್ತಿದಾರ ಎಂದು ರಮೇಶ್ ಜಾರಕಿಹೊಳಿ ಹಾಗೂ ಅವರ ಜತೆಗಿನ ಇತರೆ ನಿರ್ದೇಶಕರು ಘೋಷಣೆ ಆಗಿದ್ದರೂ ಅವರು ಬ್ಯಾಂಕುಗಳಲ್ಲಿ ಕೋಟ್ಯಂತರ ರೂಪಾಯಿ ಹಣ ಡ್ರಾ ಮಾಡುತ್ತಿದ್ದಾರೆ. ಇದು ಹೇಗೆ ಸಾಧ್ಯ? ಹೀಗಾಗಿ ಇವರನ್ನು ಉದ್ದೇಶಿತ ಸುಸ್ತಿದಾರ ಎಂದು ಪರಿಗಣಿಸಬೇಕು. ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಇವರನ್ನು ಬಂಧಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಶಿಕ್ಷಕರ ನೇಮಕಾತಿ ಅಕ್ರಮ | ಏಕಕಾಲಕ್ಕೆ ನಾಲ್ಕು ಜಿಲ್ಲೆಗಳಲ್ಲಿ ಸಿಐಡಿ ದಾಳಿ; 38 ಶಿಕ್ಷಕರ ಬಂಧನ

ಹಣ ಲಪಟಾಯಿಸುವ ಪ್ರಯತ್ನ

“ಸೌಭಾಗ್ಯಲಕ್ಷ್ಮಿ ಶುಗರ್ಸ್ ಕಂಪನಿಯ ₹850 ಕೋಟಿಯ ಹಗರಣವನ್ನು ದಾಖಲೆ ಸಮೇತ ಬಹಿರಂಗಪಡಿಸಲಾಗಿದೆ. ಬೇನಾಮಿ ವರ್ಗಾವಣೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಾನೂನು ತಂದಿದ್ದು. ಹರಿಹಂತ್ ಬ್ಯಾಂಕ್ ಮೂಲಕ ಸಾರ್ವಜನಿಕ ಹಣ ಲಪಟಾಯಿಸುವ ಪ್ರಯತ್ನದ ವಿರುದ್ಧ ತನಿಖೆ ಆಗಿ ಇದರಲ್ಲಿ ಭಾಗವಾಗಿರುವವರ ವಿರುದ್ಧ ಅಗತ್ಯ ಕ್ರಮ ವಹಿಸಬೇಕು” ಮಾಜಿ ಎಂಎಲ್ಸಿ ರಮೇಶ್ ಬಾಬು ಒತ್ತಾಯಿಸಿದರು.

“ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ 250 ಎಕರೆ ಜಾಗವನ್ನು ಇಶಾ ಫೌಂಡೇಶನ್‌ಗೆ ನೀಡುವುದರ ಜತೆಗೆ ಸುಮಾರು 100 ಕೋಟಿ ರೂ. ಹಣವನ್ನು ಮಣ್ಣಿನ ಸಂರಕ್ಷಣೆ ಅಭಿಯಾನ ಹೆಸರಲ್ಲಿ ಜಗ್ಗಿ ವಾಸುದೇವ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರ್ಕಾರ ನೀಡಿದೆ. ಇದು ಸೌಭಾಗ್ಯಲಕ್ಷ್ಮಿ ಶುಗರ್ಸ್ ಮಾದರಿಯ ಮತ್ತೊಂದು ರೀತಿಯ ಹಗರಣವಾಗಿದೆ” ಎಂದರು.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app