ಕೋವಿಡ್‌ ಅಲೆ| ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.96ರಷ್ಟು ಎರಡನೇ ಡೋಸ್ ಲಸಿಕೆ

  • 12ರಿಂದ 14 ವರ್ಷದ ಶೇ.52ರಷ್ಟು ಮಕ್ಕಳಿಗೆ ಮೊದಲ ಡೋಸ್
  • 18 ವರ್ಷ ಮೇಲ್ಪಟ್ಟ ಶೇ. 102ರಷ್ಟು ಮಂದಿಗೆ ಮೊದಲ ಡೋಸ್

ಕೋವಿಡ್ ಪ್ರಕರಣ ಹೆಚ್ಚಳವಾದ ಹಿನ್ನೆಲೆಯಲ್ಲಿ, ಲಸಿಕಾ ಕಾರ್ಯವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುರುಕುಗೊಳಿಸಿದೆ.

ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. 18 ವರ್ಷ ಮೇಲ್ಪಟ್ಟವರು ಶೇ. 102ರಷ್ಟು ಮಂದಿ ಮೊದಲ ಡೋಸ್ ಹಾಗೂ ಶೇ.96ರಷ್ಟು ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.

ಈ ಕುರಿತು ಈ ದಿನ.ಕಾಂನೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್, "ಮಕ್ಕಳಿಗೆ ಶಾಲೆಗಳಲ್ಲಿ ಅಭಿಯಾನದ ಮೂಲಕ ಲಸಿಕೆ ನೀಡಲಾಗುತ್ತದೆ. 12ರಿಂದ 14 ವರ್ಷದ ಮಕ್ಕಳಿಗೆ ಮೊದಲ ಡೋಸ್ ಶೇ.52ರಷ್ಟು ನೀಡಲಾಗಿದೆ. 15ರಿಂದ 17 ವರ್ಷದ ಮಕ್ಕಳಿಗೆ ಮೊದಲ ಡೋಸ್ ಶೇ.76ರಷ್ಟು ನೀಡಲಾಗಿದೆ. 18ರಿಂದ 60ವರ್ಷದ ಮೇಲಿನವರಿಗೆ ಈಗಾಗಲೇ ಶೇ.102ರಷ್ಟು ಮೊದಲನೇ ಡೋಸ್ ನೀಡಲಾಗಿದೆ. ಹಾಗೂ ಎರಡನೇ ಡೋಸ್ ಶೇ.98ರಷ್ಟು ನೀಡಲಾಗಿದೆ" ಎಂದು ಮಾಹಿತಿ ನೀಡಿದರು.

ಇದನ್ನು ಓದಿದ್ದೀರಾ? ಪ್ರಶ್ನೆ ಪತ್ರಿಕೆ ಸೋರಿಕೆ: ಕರ್ನಾಟಕ ವಿವಿ ಕುಲಸಚಿವರ ಬಂಧನ ಸಾಧ್ಯತೆ

AV Eye Hospital ad

"ಮಕ್ಕಳಿಗೆ ಈಗಾಗಲೇ ಶೇ.52ರಷ್ಟು ಕೋರ್ಬೆವ್ಯಾಕ್ಸ್ ಲಸಿಕೆ ನೀಡಿದ್ದೇವೆ. ಶಾಲೆಗಳು ರಜೆ ಇರುವುದರಿಂದ ಮಕ್ಕಳಿಗೆ ಪೂರ್ಣ ಪ್ರಮಾಣ ಲಸಿಕೆ ಹಾಕಲು ಸಾಧ್ಯವಾಗಲಿಲ್ಲ. ಮುಂದಿನ 10 ದಿನಗಳಲ್ಲಿ ಶೇ.70ರಷ್ಟು ಲಸಿಕೆ ನೀಡುವ ಗುರಿ ಹೊಂದಿದ್ದೇವೆ" ಎಂದರು.

"ಕೊರೊನಾ ತಡೆಯಲು ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಕಾಕಿಸಿಕೊಂಡರೆ ಕೊರೊನಾ ತೀವ್ರತೆ ಹೆಚ್ಚಿರುವುದಿಲ್ಲ. ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ" ಎಂದು ಹೇಳಿದರು.

ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕಚಂದ್ರ, "ಕೋವಿಡ್ ನಾಲ್ಕನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲ ಅರ್ಹ ಫಲಾನುಭವಿಗಳು ಆದಷ್ಟು ಬೇಗ ಮುನ್ನೆಚ್ಚರಿಕಾ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯ. ಅರ್ಹ ಫಲಾನುಭವಿಗಳು ನಿಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಬಹುದು. 60 ವರ್ಷ ಮೇಲಿನವರು, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು" ಎಂದು ತಿಳಿಸಿದರು.

ಬಿಬಿಎಂಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ಡ್ (18 ವರ್ಷ ಮೇಲಿನವರಿಗೆ) ಕೋವ್ಯಾಕ್ಸಿನ್ (15 ವರ್ಷ ಮೇಲಿನವರಿಗೆ), ಕೋರ್ಬೆವ್ಯಾಕ್ಸ್ (12-14 ವರ್ಷದೊಳಗಿನವರಿಗೆ) ಒಂದನೇ ಡೋಸ್, ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್-ಬೂಸ್ಟರ್ ಡೋಸ್ (ಮುಂಚೂಣಿ ಕಾರ್ಯಕರ್ತರು, ಅರೋಗ್ಯ ಕಾರ್ಯಕರ್ತರು, ಮತ್ತು 60 ವರ್ಷ ಮೇಲಿನವರಿಗೆ) ಉಚಿತವಾಗಿ ನೀಡಲಾಗುತ್ತಿದೆ.

18 ರಿಂದ 59 ವರ್ಷದೊಳಗಿನವರು ಖಾಸಗಿ ಲಸಿಕಾ ಕೇಂದ್ರಗಳಲ್ಲಿ (ಖಾಸಗಿ ಆಸ್ಪತ್ರೆ ಅಥವಾ ಲಸಿಕೆ ಕೇಂದ್ರ) ಬೂಸ್ಟರ್‌ ಡೋಸ್ ಪಡೆದುಕೊಳ್ಳಬಹುದು. ಖಾಸಗಿ ಕೇಂದ್ರಗಳಲ್ಲಿ ಪ್ರತಿ ಡೋಸ್ ಗೆ ₹386 ದರ ನಿಗದಿಪಡಿಸಲಾಗಿದೆ. ವಿವರಗಳಿಗೆ apps.bbmpgov.in ನೋಡಬಹುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app