ಕನಿಷ್ಠ ಜ್ಞಾನವಿಲ್ಲದ ಶಿಕ್ಷಣ ಸಚಿವರನ್ನು ಕಿತ್ತುಹಾಕಿ: ಪ್ರಧಾನಿ ಮೋದಿಗೆ ರೂಪ್ಸ ಪತ್ರ

narendra modi
  • ಶಿಕ್ಷಣ ಸಚಿವರ ತಪ್ಪು ನಿರ್ಧಾರ ಶಿಕ್ಷಣದ ಪ್ರಗತಿಗೆ ಮಾರಕ: ಆರೋಪ
  • ಶಿಕ್ಷಣ ಸಚಿವರೇ ಮಕ್ಕಳನ್ನು ಕಲಿಕೆಯಿಂದ ದೂರ ಮಾಡಿದ್ದಾರೆ: ರೂಪ್ಸ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ತಪ್ಪು ನಿರ್ಧಾರಗಳು ಹಾಗೂ ಅವರ ನಡವಳಿಕೆಗಳು ರಾಜ್ಯದಲ್ಲಿ ಶಿಕ್ಷಣದ ಪ್ರಗತಿಗೆ ಮಾರಕವಾಗಿದ್ದು, ದಯಮಾಡಿ ಸಚಿವರನ್ನು ವಜಾ ಮಾಡಲು ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರೂಪ್ಸ) ಮನವಿ ಮಾಡಿದೆ.

ಈ ಕುರಿತು ಪ್ರಧಾನಮಂತ್ರಿಗೆ ಪತ್ರ ಬರೆದಿರುವ ರೂಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, “ರಾಜ್ಯದ ಪ್ರತೀ ಮಗುವಿಗೂ ಕಡ್ಡಾಯವಾಗಿ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಬಹುಮುಖ್ಯ ಕರ್ತವ್ಯ. ಇದರ ಕನಿಷ್ಠ ಜ್ಞಾನವಿಲ್ಲದ ಪಕ್ಕಾ ವ್ಯಾಪಾರಿ ಮನೋಭಾವದ ವ್ಯಕ್ತಿ ಮಂತ್ರಿ ಆಗಿರುವುದು ರಾಜ್ಯದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ನಮ್ಮ ಶಿಕ್ಷಣ ಮಂತ್ರಿಗಳ ತಪ್ಪು ನಿರ್ಧಾರಗಳು, ಅವುಗಳಿಂದಾದ ದುಷ್ಪರಿಣಾಮಗಳ ಕೆಲ ಉದಾಹರಣೆಗಳನ್ನು ತಮ್ಮ ಅವಗಾಹನೆಗೆ ತರುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ 

“ಕೋವಿಡ್ ಸಾಂಕ್ರಾಮಿಕ ಕಾರಣ ಎರಡು ವರ್ಷ ಸತತವಾಗಿ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳು ತಾವು ಕಲಿತ ಕಲಿಕೆಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಜೊತೆಗೆ ಬಾಲ್ಯ ವಿವಾಹ, ಬಾಲಕಾರ್ಮಿಕತೆ, ಮಕ್ಕಳ ಮಾರಾಟ, ಹಾಗೂ ದುಶ್ಚಟದಂತಹ ಸಾಮಾಜಿಕ ಪಿಡುಗುಗಳು ತಲೆಯೆತ್ತಿರುವ ಇಂತಹ ಸಂದರ್ಭದಲ್ಲಿ, ಶಿಕ್ಷಣ ಇಲಾಖೆ ಪ್ರಾಥಮಿಕವಾಗಿ ಪರಿಹಾರ ಬೋಧನೆ ಯಂತಹ ವಿಷಯಕ್ಕೆ ಗಮನ ಕೊಡುವುದನ್ನು ಬಿಟ್ಟು, ಪಠ್ಯಪುಸ್ತಕ ಪರಿಷ್ಕರಣೆಯಂತಹ ಗೊಂದಲದ ಗೂಡಿಗೆ ಕೈ ಹಾಕಿ ಮಕ್ಕಳ ಕಲಿಕೆ ಮತ್ತಷ್ಟು ಹಾಳಾಗಲು ಕಾರಣರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಶಾಲೆ ಪ್ರಾರಂಭವಾಗಿ ಒಂದೂವರೆ ತಿಂಗಳಾದರೂ ಮಳೆಬಿಲ್ಲು, ವಿದ್ಯಾಪ್ರವೇಶ ಹಾಗೂ ಕಲಿಕಾ ಚೇತರಿಕೆ ಎಂಬ ಪೊಳ್ಳು ಕಾರ್ಯಕ್ರಮಗಳನ್ನು ಸೃಷ್ಟಿಸಿ, ಅವುಗಳಿಗೆ ಪೂರಕವಾದ ಕಲಿಕಾ ಸಾಮಗ್ರಿಗಳನ್ನೂ ನೀಡದೆ ನಿರಂತರವಾಗಿ ಮಕ್ಕಳನ್ನು ಕಲಿಕೆಯಿಂದ ದೂರ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಶಾಲೆಗೆ ಮಕ್ಕಳ ದಾಖಲಾತಿ ಮರೆತ ಶಿಕ್ಷಣ ಇಲಾಖೆ

“2022-23ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿಗಾಗಿ ಯಾವುದೇ ಕಾರ್ಯಕ್ರಮ ರೂಪಿಸದೆ, ಹತ್ತಾರು ಲಕ್ಷ ಮಕ್ಕಳು ಶಾಲೆ ಬಿಟ್ಟು ಬೀದಿ ಪಾಲಾಗಲು ಶಿಕ್ಷಣ ಇಲಾಖೆ ಕಾರಣವಾಗಿದೆ. ಇದರ ಅರಿವು ಇದ್ದರೂ ಇಲ್ಲದಂತೆ ಅನಗತ್ಯ ವಿವಾದಗಳನ್ನು ಹುಟ್ಟು ಹಾಕುವುದೇ ನಮ್ಮ ಶಿಕ್ಷಣ ಸಚಿವರ ಕೆಲಸವಾಗಿದೆ” ಎಂದು ದೂರಿದ್ದಾರೆ.

ಕಲಿಕಾ ವಾತಾವರಣ ಹಾಳುಗೆಡವಿದ ಹಿಜಾಬ್ ವಿವಾದ 

“ಹಿಜಾಬ್ ವಿವಾದ ಮಕ್ಕಳ ಕಲಿಕಾ ವಾತಾವರಣವನ್ನು ಸಂಪೂರ್ಣವಾಗಿ ನಾಶ ಮಾಡಿರುವುದು ದುರ್ದೈವದ ಸಂಗತಿ. ಈಗ ಶಾಲೆಯಲ್ಲಿ ಅದರ ದುಷ್ಪರಿಣಾಮವನ್ನು ಶಿಕ್ಷಕರು ಪ್ರತಿ ದಿನ ಅನುಭವಿಸುವಂತಾಗಿದೆ. ಮಕ್ಕಳಲ್ಲಿ ಸಾಮರಸ್ಯ, ಸಹಬಾಳ್ವೆ, ಸಮಬಾಳ್ವೆ, ಹಾಗೂ ಕೂಡಿ ಕಲಿಯುವ ಮನೋಭಾವ ಹೋಗಿ ಧಾರ್ಮಿಕವಾಗಿ ವಿಭಜನೆಯ ಲಕ್ಷಣಗಳು ಕಾಣಿಸುತ್ತಿವೆ. ಈ ಬೆಳವಣಿಗೆ ಮುಂದೆ ಬಹುದೊಡ್ಡ ಅಪಾಯಕಾರಿ ಸಮಸ್ಯೆಯನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.

ಅವೈಜ್ಞಾನಿಕ ನಿಯಮಗಳ ಪಾಲನೆಗೆ ಆದೇಶ

“ರಾಜ್ಯದ ಖಾಸಗಿ ಶಾಲೆಗಳು ಅದರಲ್ಲೂ ಬಜೆಟ್ ಶಾಲೆಗಳನ್ನು ಆಧಾರವಾಗಿಟ್ಟುಕೊಂಡು ಪ್ರತಿ ವರ್ಷ ಮಾನ್ಯತೆ ನವೀಕರಣ, ಕಟ್ಟಡ ದಕ್ಷತೆ, ಅಗ್ನಿ ಅವಘಡ ಸುರಕ್ಷತೆ, ಇತ್ಯಾದಿ ನಿಯಮಗಳನ್ನು ಕಡ್ಡಾಯ ಮಾಡಿ, ಸಾವಿರಾರು ಬಜೆಟ್ ಶಾಲೆಗಳನ್ನು ಮುಚ್ಚಿಸಲು ಹಾಗೂ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣರಾಗಿದ್ದಾರೆ” ಎಂದು ದೂರಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 

“ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತಿದ್ದೇವೆ ಎನ್ನುತ್ತಾ ಕಳೆದ ಎರಡು ವರ್ಷದಿಂದ ಕಾಗೆ ಹಾರಿಸುತ್ತಿದ್ದಾರೆ. ಅದಕ್ಕಾಗಿ ಬೇಕಾದ  ಪೂರ್ವ ತಯಾರಿಯನ್ನು ಸಹ ಮಾಡುತ್ತಿಲ್ಲ. ರಾಜ್ಯ ಬಜೆಟ್ ನಲ್ಲಿ ಯಾವುದೇ ಅನುದಾನವನ್ನು ಮೀಸಲಿಟ್ಟಿಲ್ಲ. ಬರೀ ಸುಳ್ಳುಗಳನ್ನು ಹೇಳುತ್ತಾ ಹೀಗೆ ಮುಂದುವರಿದರೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ. ಇದರ ರೂವಾರಿಗಳಾದ ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಜನರ ಮುಂದೆ ನಗೆಪಾಟಿಲಿಗೀಡಾಗುತ್ತಿದ್ದಾರೆ” ಎಂದು ವಿವರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ವಿಚಾರದಲ್ಲಿ ಹೊಸ ವಿವಾದ ಮೈಮೇಲೆ ಎಳೆದುಕೊಂಡ ರಾಜ್ಯ ಸರ್ಕಾರ

ಸಮ ವಸ್ತ್ರ, ಸೈಕಲ್, ಪುಸ್ತಕ ನೀಡಿಲ್ಲ  

“ಶಾಲೆಗಳು ಪ್ರಾರಂಭವಾಗಿ ಎರಡು ತಿಂಗಳಾದರೂ ಸರಿಯಾದ ಸಮಯಕ್ಕೆ ಪುಸ್ತಕ, ಸಮವಸ್ತ್ರ ಹಾಗೂ ಸೈಕಲ್ ನೀಡದೇ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಾ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ, ಪೋಷಕರು ಸಮವಸ್ತ್ರ ಇಲ್ಲದೆ ಮಕ್ಕಳನ್ನು ಶಾಲೆಗೆ ದಾಖಲಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಇದರಿಂದ ಸಚಿವರಿಗೆ ಚುನಾವಣೆಯಲ್ಲಿ ಅನುಕೂಲವಾಗಬಹುದಾದರೂ ಇದು ಅನೇಕ ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತದೆ” ಎಂದಿದ್ದಾರೆ.

ಶಿಕ್ಷಕರಿಲ್ಲದ ಸರ್ಕಾರಿ ಶಾಲೆಗಳು 

ಕನಿಷ್ಠ 50 ಸಾವಿರ ಶಿಕ್ಷಕರ ಕೊರತೆಯಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪಾಠಗಳು ಸರಿಯಾಗಿ ನಡೆಯುತ್ತಿಲ್ಲ. ಮಕ್ಕಳು ಶಾಲೆಗೆ ಬರುತ್ತಿರುವುದು ಊಟಕ್ಕಾಗಿ, ಬಟ್ಟೆಗಾಗಿ ಎನ್ನುವಂತಾಗಿದೆ.

ಶಿಕ್ಷಣ ಸಚಿವರ ಅವೈಜ್ಞಾನಿಕ ನಿರ್ಧಾರಗಳು ಬಗೆದಷ್ಟೂ ಆಳ. ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಬಾಹ್ಯವಾಗಿ ಸರಳವಾಗಿ ಕಂಡರೂ, ಶಿಕ್ಷಣ ಸಚಿವರಾಗವ ಕನಿಷ್ಠ ಮಾನದಂಡಗಳನ್ನೂ ಹೊಂದಿರದ ವ್ಯಕ್ತಿ. ರಾಜ್ಯದ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಬಲಿ ಕೊಡುತ್ತಿರುವುದು ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ. ಆದ್ದರಿಂದ ದಯಮಾಡಿ ಇವರನ್ನು ವಜಾ ಮಾಡಲು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಬೇಕೆಂದು ಈ ಮೂಲಕ ಪ್ರಾರ್ಥಿಸುತ್ತೇವೆ” ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್