ಎಸಿಬಿ ರಚನೆ ಆದೇಶ ರದ್ದು | ಇದೊಂದು ಐತಿಹಾಸಿಕ ತೀರ್ಪು: ಹೋರಾಟಗಾರ ಎಸ್ ಆರ್ ಹಿರೇಮಠ್ ಸಂತಸ

ACB
  • ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳದ ಸಂಸ್ಥೆ ಇದ್ದು ಏನು ಪ್ರಯೋಜನ: ಪ್ರಿಯಾಂಕ್ ಖರ್ಗೆ
  • ಭ್ರಷ್ಟರ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬುವ ಹಿರೇಮಠ್ ಅವರಿಗೆ ಕೃತಜ್ಞತೆಗಳು: ರೆಡ್ಡಿ

2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕರ್ನಾಟಕ ಲೋಕಾಯುಕ್ತಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆ ಮಾಡಿದ್ದರು. ಪ್ರತಿಪಕ್ಷಗಳ ವಿರೋಧದ ನಡುವೆಯೂ ಅವರು ಮಹಾತ್ವಾಕಾಂಕ್ಷೆಯಿಂದ ಸ್ಥಾಪಿಸಿದ ಸಂಸ್ಥೆಯನ್ನೇ ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ.

ಆರು ವರ್ಷಗಳ ಹಿಂದೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥರಾದ ಎಸ್ ಆರ್ ಹಿರೇಮಠ್ ಮತ್ತು ಇತರೆ ಸಂಸ್ಥೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ (ಆ.11) ಎಸಿಬಿ ರಚನೆ ಆದೇಶವನ್ನೇ ರದ್ದುಗೊಳಿಸಿ, ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ತೀರ್ಪು ನೀಡಿದೆ.

ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಿರುವ ಜತೆಗೆ, ಲೋಕಾಯುಕ್ತ ಪೊಲೀಸ್ ಠಾಣೆಗಳನ್ನು ಮರುಸ್ಥಾಪಿಸಿ ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ನೀಡುವಂತೆ ಸೂಚಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶ್ವತ್ಧದಲ್ಲಿ ಕಾಂಗ್ರೆಸ್ ಆಯೊಜಿಸಿದ್ದ 'ಸ್ವಾತಂತ್ರ್ಯ ನಡಿಗೆ' ಕಾರ್ಯಕ್ರಮದಲ್ಲಿ ಭಾಗಹಿಸಿದ್ದ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯಿಸಿ, 'ಹೈಕೋರ್ಟ್ ತೀರ್ಮಾನವನ್ನು ಗೌರವಿಸುತ್ತೇನೆ. ಪೂರ್ಣ ಪ್ರಮಾಣದ ಆದೇಶ ನೋಡಿದ ಮೇಲೆ ಮತ್ತೆ ಪ್ರತಿಕ್ರಿಯಿಸುವೆ. ಎಸಿಬಿ ಸ್ವತಂತ್ರ ತನಿಖಾ ಸಂಸ್ಥೆ. ನಮ್ಮ ರಾಜ್ಯದಲ್ಲಿ ಮಾತ್ರ ಎಸಿಬಿ ಇರಲಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಎಸಿಬಿ ಇದೆ” ಎಂದು ಹೇಳಿದ್ದಾರೆ.

ಎಸಿಬಿ ರದ್ದು ಕೋರಿ ಅರ್ಜಿ ಸಲ್ಲಿಸಿದ್ದವರಲ್ಲಿ ಒಬ್ಬರಾದ ಸಾಮಾಜಿಕ ಕಾರ್ಯಕರ್ತರಾದ ಎಸ್ ಆರ್ ಹಿರೇಮಠ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಎಸಿಬಿಯನ್ನು ರದ್ದು ಮಾಡಬೇಕು. ಏಕೆಂದರೆ, ಇಡೀ ದೇಶದಲ್ಲೇ ಭ್ರಷ್ಟಾಚಾರದ ವಿರುದ್ಧ ಸ್ವಾಯುತ್ತ ಸಂಸ್ಥೆಯನ್ನು ಸ್ಥಾಪಿಸಿದ ಮೊದಲನೇ ರಾಜ್ಯ ಕರ್ನಾಟಕ. 1966ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ (ಎಆರ್‌ಸಿ) ನಾಗರಿಕ ಕುಂದು ಕೊರತೆ ನಿವಾರಣೆಗಿರುವ ಸಮಸ್ಯೆಗಳು ಕುರಿತು ತನ್ನ ವರದಿಯನ್ನು ನೀಡಿತು. ಈ ವರದಿಯಲ್ಲಿ ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಗಳ ಸ್ಥಾಪನೆಗೆ ಶಿಫಾರಸು ಮಾಡಲಾಗಿತ್ತು. ಅದರಂತೆ ಕರ್ನಾಟಕದಲ್ಲಿ ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿತ್ತು” ಎಂದು ಹೇಳಿದರು.

“ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಲೋಕಾಯುಕ್ತ ಸಂಸ್ಥೆಯ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡರು. ಅದಕ್ಕೆ ಪರ್ಯಾವಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದರು. ಈ ಸಂಸ್ಥೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದರಿಂದ ಭ್ರಷ್ಟಾಚಾರ ನಿಗ್ರಹ ಸಾಧ್ಯವಿಲ್ಲ” ಎಂದರು.

Image
S R Hiremath

“ಎಸಿಬಿ ಕಾರ್ಯಾಂಗದ ಒಳಗೇ ಇರುವಾಗ ಅದು ಭ್ರಷ್ಟರನ್ನು ರಕ್ಷಿಸುತ್ತದೆ. 1974ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಜಾರಿಗೆ ತರಲಾಗಿದೆ. ಅದರಲ್ಲಿ ಸಂತೋಷ್ ಹೆಗ್ಡೆಯವರು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಪರಾಕಾಷ್ಠೆಗೆ ತೆಗೆದುಕೊಂಡು ಹೋಗಿದ್ದರು. ಅವರು ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ತನಿಖೆಯಿಂದ, ಮೈನಿಂಗ್ ಮಾಫಿಯಾ ಕಿಂಗ್‌ಪಿನ್ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಸಚಿವರು, ಶಾಸಕರು, ಐಎಎಸ್ ಮತ್ತು ಐಎಫ್ಎಸ್ ಅಧಿಕಾರಿಗಳ ದೊಡ್ಡ ಕ್ರಿಮಿನಲ್ ತಂಡವೇ ಜೈಲಿಗೆ ಹೋಗುವಂತೆ ಮಾಡಿದ್ದರು” ಎಂದು ಹಿರೇಮಠ್ ಹೇಳಿದರು.

“ಅಷ್ಟೇ ಅಲ್ಲದೆ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಮತ್ತು ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಕೆಲವರು ಅಧಿಕಾರದಿಂದ ಕೆಳಗಿಳಿಯಬೇಕಾಗಿ ಬಂದಿದ್ದು ಲೋಕಾಯುಕ್ತ ವರದಿಯಿಂದ. ಅಂತಹ ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಿ ಎಸಿಬಿ ರಚನೆ ಮಾಡುವ ಸಿದ್ದರಾಮಯ್ಯ ಅವರ ನಿರ್ಧಾರ ಜನಹಿತದ ವಿರುದ್ಧವಾಗಿತ್ತು. ಭ್ರಷ್ಟಾಚಾರದಿಂದ ಜನಸಾಮಾನ್ಯರ ಜೀವನ ದುರ್ಭರವಾಗಿದೆ. ಹಾಗಾಗಿ ಎಸಿಬಿ ರಚಿಸಿದ್ದು ಜನಸಾಮಾನ್ಯರ ವಿರುದ್ಧವಾಗಿ ಎಂದು ನಾವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆವು” ಎಂದು ಮಾಹಿತಿ ನೀಡಿದರು. 

“ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತಿಂಗಳುಗಟ್ಟಲೆ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದ್ದರು. ಕೆಲವರು ಹೈಕೋರ್ಟ್ ಮತ್ತು ಬೇರೆ ನ್ಯಾಯಾಲಯಕ್ಕೆ ತೆರಳಿದ್ದರಿಂದ ತೀರ್ಪು ಬಂದಿರಲಿಲ್ಲ. ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಪ್ರಶಾಂತ್ ಭೂಷಣ್ ಉತ್ಕೃಷ್ಟವಾಗಿ ನ್ಯಾಯ ಮಂಡಿಸಿದ್ದಾರೆ” ಎಂದು ಹೇಳಿದರು. 

“ಈ ತೀರ್ಪು ಉತ್ತಮವಾಗಿದೆ. ಆದರೆ, ಇನ್ನೂ ಮಹತ್ವದ ತಿದ್ದುಪಡಿಗಳಾಗಬೇಕಿದೆ. ಕರ್ನಾಟಕದ ಸರ್ಕಾರಗಳು ಮಾಡಬಾರದ ಕೆಲಸ ಮಾಡಿವೆ. ಕರ್ನಾಟಕ ಲೋಕಾಯುಕ್ತರಾಗಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಅಥವಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಬೇಕಿತ್ತು. ಇವರು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಲು ತಿದ್ದುಪಡಿ ತಂದಿದ್ದಾರೆ. ಈಗಿರುವ ಲೋಕಾಯುಕ್ತ ಬಿ ಎಸ್ ಪಾಟೀಲರು ಮೊದಲಿದ್ದ ಕಾಯ್ದೆ ಪ್ರಕಾರ ಅನರ್ಹರಾಗುತ್ತಿದ್ದರು. ಅವರು ಲೋಕಾಯುಕ್ತರಾಗಲು ಸಾಧ್ಯವೇ ಇರಲಿಲ್ಲ” ಎಂದರು.

“ಈಗಿರುವ ಎಸಿಬಿ ಸಂಸ್ಥೆ ಲೋಕಾಯುಕ್ತವನ್ನು ದುರ್ಬಲ ಮಾಡಿದೆ. ಈ ಬಗ್ಗೆ ನಾವು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತೇವೆ. ಸಮಾಜ ಪರಿವರ್ತನಾ ಸಮುದಾಯ ಸಂಘಟನೆ ಹೋರಾಟ ಮುಂದುವರೆಸುತ್ತದೆ. ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಅವರ ಕೈಕೆಳಗೆ ಎಸಿಬಿ ಕೆಲಸ ಮಾಡುತ್ತಿದ್ದದ್ದರಿಂದ ಭ್ರಷ್ಟಾಚಾರ ನಿಗ್ರಹ ಸಾಧ್ಯವೇ ಇಲ್ಲ. ನಮಗೆ ಮೊದಲು ಎಸಿಬಿ ರದ್ದಾಗಬೇಕಿತ್ತು. ಮುಂದೆ ತಿದ್ದುಪಡಿಗಳ ಬಗ್ಗೆ ಜನರನ್ನು ಸಂಘಟಿಸಿ ಪ್ರತ್ಯೇಕ ಕಾನೂನು ಹೋರಾಟ ಮಾಡುತ್ತೇವೆ. ಇದೊಂದು ಸುದೀರ್ಘ ಹೋರಾಟವಾಗಿದೆ. ಹೈಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆದಿತ್ತು. ಆದರೆ, ನಿರ್ಣಯ ಬಂದಿರಲಿಲ್ಲ. ಈ ತೀರ್ಪನ್ನು ನಾವು ತುಂಬು ಹೃದಯದಿಂದ ಸ್ವೀಕಾರ ಮಾಡುತ್ತೇವೆ. ಇದೊಂದು ಐತಿಹಾಸಿಕ ತೀರ್ಪಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳದ ಸಂಸ್ಥೆ ಇದ್ದು ಏನು ಪ್ರಯೋಜನ?

"ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳದ ಸಂಸ್ಥೆ ಇದ್ದು ಏನು ಪ್ರಯೋಜನ" ಎಂದು ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ದಿನ.ಕಾಮ್ ಜತೆಗೆ ಮಾತನಾಡಿದ ಅವರು, “ಶೇ.40 ಗುತ್ತಿಗೆ ಕಮಿಷನ್ ಮತ್ತು ನೇಮಕಾತಿ ಹಗರಣ ಸೇರಿದಂತೆ ಬಿಜೆಪಿ ಸರ್ಕಾರ ಕಮಿಷನ್ ತೆಗೆದುಕೊಳ್ಳದ ಇಲಾಖೆಯೇ ಇಲ್ಲ. ಎಸಿಬಿ ಕೆಲಸ ಭ್ರಷ್ಟರನ್ನು ಬೇಟೆಯಾಡುವುದು. ಆದರೆ, ಅದೇ ಸಂಸ್ಥೆ ಇಂದು ಭ್ರಷ್ಟರ ಕೂಪವಾಗಿದೆ. ಹೈಕೋರ್ಟ್ ನ್ಯಾಯಾಧೀಶರೇ ಎಸಿಬಿ ಮುಖ್ಯಸ್ಥರಿಗೆ ಛೀಮಾರಿ ಹಾಕಿದ್ದಾರೆ. ಇಷ್ಟೆಲ್ಲ ಆದಮೇಲೆ ಈ ಸಂಸ್ಥೆ ಇದ್ದು ಏನು ಪ್ರಯೋಜನ ಎಂದು ಅದನ್ನು ರದ್ದು ಮಾಡಿರಬಹುದು” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

“ನಾವು ಎಸಿಬಿಯನ್ನು ರಚಿಸಿದ್ದೇ ಭ್ರಷ್ಟಾಚಾರದ ವಿರುದ್ಧ ಅಸ್ತ್ರವನ್ನಾಗಿ ಬಳಸಲು. ಆದರೆ, ಬಿಜೆಪಿ ಯಾವತ್ತೂ ಆ ಸಂಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ. ಬದಲಾಗಿ ತಮ್ಮ ಭ್ರಷ್ಟಾಚಾರಕ್ಕೆ ರಬ್ಬರ್ ಸ್ಟಾಂಪ್ ರೀತಿ ಬಳಸಿಕೊಂಡರು. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದವರೇ ಅರೋಪ ಮಾಡಿದ್ದಾರೆ. ಶೇ.40 ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಮೋದಿಗೆ ಪತ್ರ ಬರೆದಿದೆ” ಎಂದು ಅವರು ಹೇಳಿದರು. 

ಎಸ್ ಆರ್ ಹಿರೇಮಠ್ ಅವರಿಗೆ ಕೃತಜ್ಞತೆಗಳು: ರವಿಕೃಷ್ಣಾರೆಡ್ಡಿ

"ಎಸಿಬಿ ರದ್ದುಗೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ ಸಾಮಾಜಿಕ ಕಾರ್ಯಕರ್ತರಾದ ಎಸ್ ಆರ್ ಹಿರೇಮಠ್ ಅವರಿಗೆ ಕರ್ನಾಟಕ ಜನತೆ ಮತ್ತು ಕೆಆರ್‌ಎಸ್ ಪಕ್ಷದ ಪರವಾಗಿ ಕೃತಜ್ಞತೆಗಳು" ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷರಾದ ರವಿಕೃಷ್ಣಾರೆಡ್ಡಿ ಹೇಳಿದರು.

ಈ ದಿನ.ಕಾಮ್ ಜತೆಗೆ ಮಾತನಾಡಿದ ಅವರು, “2016ರ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತವನ್ನು ರದ್ದು ಮಾಡಿ ರಚಿಸಿದ್ದ ಎಸಿಬಿ ಎನ್ನುವಂತಹ ನಾಲಾಯಕ್ ಸಂಸ್ಥೆಯನ್ನು ರಾಜ್ಯ ಹೈಕೋರ್ಟ್ ರದ್ದು ಮಾಡಿ ಆದೇಶ ನೀಡಿದೆ. ಕರ್ನಾಟಕ ರಾಷ್ಟ್ರ ಸಮಿತಿ ಹೈಕೋರ್ಟ್ ನಿಲುವು ಮತ್ತು ತೀರ್ಪನ್ನು ಸ್ವಾಗತಿಸುತ್ತದೆ” ಎಂದು ಹೇಳಿದರು.

“ಎಸಿಬಿ ರದ್ದು ಕೋರಿ 6 ವರ್ಷ 5 ತಿಂಗಳ ಸುದೀರ್ಘ ಹೋರಾಟ ರಾಜ್ಯ ಹೈಕೋರ್ಟ್‌ನಲ್ಲಿ ನಡೆದಿದೆ. ಭ್ರಷ್ಟಾಚಾರದ ವಿರುದ್ಧ ಸುದೀರ್ಘ ಹೋರಾಟ ನಡೆಸುತ್ತಾ, ಇಂತಹ ಹೋರಾಟಗಳಿಗೆ ಶಕ್ತಿ ತುಂಬುತ್ತಿರುವ ಸಾಮಾಜಿಕ ಹೋರಾಟಗಾರರಾದ ಎಸ್ ಆರ್ ಹಿರೇಮಠ್ ಅವರಿಗೆ ಕರ್ನಾಟಕ ಜನತೆ ಮತ್ತು ಕೆಆರ್‌ಎಸ್‌ ಪಕ್ಷದ ಪರವಾಗಿ ಕೃತಜ್ಞತೆಗಳು” ಎಂದರು.

Image
Ravi Krishna Reddy

“2016ರ ಮಾರ್ಚ್‌ನಲ್ಲಿ ಸಿದ್ದರಾಮಯ್ಯ ಸರ್ಕಾರ ಜನದ್ರೋಹಿ ಕೆಲಸ ಮಾಡಿತ್ತು. ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತವನ್ನು ಸರ್ವನಾಶ ಮಾಡುತ್ತದೆ ಎಂದು ಅರಿವಿಗೆ ಬರುತ್ತಿದ್ದಂತೆ ನಾವು ಎಂಟು ದಿನಗಳ ಕಾಲ ಅಹೋರಾತ್ರಿ ಧರಣಿ ಮತ್ತು ಉಪವಾಸ ಸತ್ಯಾಗ್ರಹ ಮಾಡಿದ್ದೆವು. ನಮಗೆ ಸಾಕಷ್ಟು ಜನರ ಬೆಂಬಲ ಸಿಕ್ಕಿತ್ತು. ನಮಗೆ ಸಿಕ್ಕ ಜನಬೆಂಬಲ ನೋಡಿ ಅಂದಿನ ಪ್ರತಿಪಕ್ಷವಾದ ಬಿಜೆಪಿ ಕೂಡ ಯಡಿಯೂರಪ್ಪನವರ ನೇತೃತ್ವದಲ್ಲಿ ಮೌರ್ಯ ವೃತ್ತದಲ್ಲಿ ಧರಣಿ ನಡೆಸಿತ್ತು” ಎಂದರು.

“ನಮ್ಮ ಉಪವಾಸ ಸತ್ಯಾಗ್ರಹ ಕಾರಣಕ್ಕಾಗಿ ಬಿಜೆಪಿಯವರೂ ಬೀದಿಗೆ ಇಳಿಯಬೇಕಾಗಿ ಬಂತು. 'ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತವನ್ನು ಬಲಡಿಸಿ' ಎಂಬ ಮಾತನ್ನು ಅವರೂ ಹೇಳಿದರು. ಅದೇ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ಜೆಡಿಎಸ್ ಪಕ್ಷ ದೇವೇಗೌಡರ ನೇತೃತ್ವದಲ್ಲಿ ರಾಜಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡ ಧರಣಿ ಸ್ಥಳಕ್ಕೆ ಬಂದು ನಮ್ಮ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿದ್ದರು” ಎಂದು ಅವರು ಹೇಳಿದರು.

“ಸಿದ್ದರಾಮಯ್ಯರ ಭ್ರಷ್ಟ ಸರ್ಕಾರ ಲೋಕಾಯುಕ್ತವನ್ನು ಬಲಡಿಸುವ ಕೆಲಸ ಮಾಡಲಿಲ್ಲ. ಎಸಿಬಿ ಎನ್ನುವ ದಂಡಪಿಂಡ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು, ಇಡೀ ರಾಜ್ಯದ ಎಲ್ಲ ಭ್ರಷ್ಟ ಸರ್ಕಾರಿ ನೌಕರರಿಗೆ ಭ್ರಷ್ಟಾಚಾರ ನಡೆಸಲು ಅಭಯ  ಹಸ್ತ ನೀಡಿತು” ಎಂದು ಅವರು ಆರೋಪಿಸಿದರು. 

“ಆಪರೇಷನ್ ಕಮಲದ ನಂತರ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೂಡ ಎಸಿಬಿ ರದ್ದುಪಡಿಸುವುದಾಗಿ ಹೇಳಿತ್ತು. ಅಧಿಕಾರಕ್ಕೆ ಬಂದರೆ ಮೊದಲನೇ ಸಚಿವ ಸಂಪುಟದಲ್ಲೇ ಎಸಿಬಿ ರದ್ದು ನಿರ್ಧಾರ ಪ್ರಕಟಿಸುವುದಾಗಿ ಹೇಳಿತ್ತು. ಆದರೆ, ಈ ಶೇ.40 ಭ್ರಷ್ಟ ಸರ್ಕಾರದಿಂದ ಈತನಕ ಎಸಿಬಿ ರದ್ದುಪಡಿಸಿ ಲೋಕಾಯುಕ್ತ ಬಲಗೊಳಿಸುವ ಕೆಲಸ ಮಾಡಿಲ್ಲ” ಎಂದು ಹೇಳಿದರು. 

“ಏಕೆಂದರೆ, ಇದು ಪರಮ ಭ್ರಷ್ಟ ಸರ್ಕಾರ. ಅಧಿಕಾರಿಗಳನ್ನು ಇಟ್ಟುಕೊಂಡು ಮಾಡಬಾರದ ಕೆಲಸ ಮಾಡುತ್ತಿದೆ. ಅದೂ ಕೂಡ ತನ್ನ ಮಾತಿನ ಮೇಲೆ ನಿಲ್ಲಲಿಲ್ಲ. ಆದರೆ, ಕಾನೂನಿನ ಚಕ್ರ ನಿಲ್ಲದೆ ತಿರುಗುತ್ತದೆ. ಇಂದು ಕರ್ನಾಟಕ ಹೈಕೋರ್ಟ್ ದ್ವಿಸದಸ್ಯ ಪೀಠ ಎಸಿಬಿಯನ್ನು ರದ್ದುಪಡಿಸಿ, ಲೋಕಾಯುಕ್ತವನ್ನು ಬಲಪಡಿಸುವಂತೆ ತೀರ್ಪು ನೀಡಿದೆ. ಇದಕ್ಕೆ ಮೂಲ ಕಾರಣ ಎಸ್ ಆರ್ ಹೀರೇಮಠ್ ಅವರು. ಅವರ ಸುದೀರ್ಘ ನ್ಯಾಯಾಂಗದ ಹೋರಾಟಗಳಲ್ಲಿ ಹಲವಾರು ಗೆಲುವು ಸಾಧಿಸಿದ್ದಾರೆ. ಅವರ ಕಾರಣಕ್ಕಾಗಿ ರಾಜ್ಯದಲ್ಲಿ ಹಲವಾರು ಒಳ್ಳೆ ವಿಚಾರಗಳು ಘಟಿಸುತ್ತಿವೆ. ಎಸ್ ಆರ್ ಹಿರೇಮಠ್ ಅವರಿಗೆ ಧನ್ಯವಾದ ಮತ್ತು ಕೃತಜ್ಞತೆ ಸಲ್ಲಿಸುತ್ತೇವೆ” ಎಂದು ಹೇಳಿದರು.

ಕರ್ನಾಟಕ ಲೋಕಾಯುಕ್ತ ಇನ್ನು ಮುಂದೆ ಜನರ ವಿಶ್ವಾಸ ಉಳಿಸಿಕೊಳ್ಳುವಂತೆ ಕೆಲಸ ಮಾಡಬೇಕು. ಜನರಿಗೆ ಹೆಚ್ಚಿನ ನಿರೀಕ್ಷೆ ಇದೆ. ಲೋಕಾಯುಕ್ತರಾಗಿದ್ದ ವೆಂಕಟಾಚಲ ಮತ್ತು ಸಂತೋಷ್ ಹೆಗ್ಡೆ ಒಳ್ಳೆ ಕೆಲಸ ಮಾಡಿದ್ದರು. ಕಾನೂನುಬಾಹಿರ, ಅಕ್ರಮ ಮತ್ತು ಜನದ್ರೋಹಿ ಕೃತ್ಯ ಮಾಡಿದ ಸಿದ್ದರಾಮಯ್ಯನವರು ಈ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೇಳಬೇಕು” ಎಂದು ರವಿಕೃಷ್ಣಾರೆಡ್ಡಿ ಆಗ್ರಹಿಸಿದರು.

ನಿಮಗೆ ಏನು ಅನ್ನಿಸ್ತು?
2 ವೋಟ್