
- ಜಮೀನಿನಲ್ಲಿ ಗುಡಿಸಲು ನಿರ್ಮಿಸಿ ಗ್ರಾಮಸ್ಥರಿಂದ ಪ್ರತಿಭಟನೆ
- ಸೋಮವಾರ ಸಂಬಂಧಪಟ್ಟವರ ಸಭೆ ಕರೆದ ತಹಶೀಲ್ದಾರ್
“ನಿವೇಶನ ರಹಿತ ದಲಿತರಿಗೆ ಮತ್ತು ಸಾರ್ವಜನಿಕರ ನಿವೇಶನಗಳಿಗಾಗಿ ಮಂಜೂರಾಗಿದ್ದ ಭೂಮಿಯನ್ನು ಕೆಲವು ಖಾಸಗಿ ವ್ಯಕ್ತಿಗಳು ಕಬಳಿಕೆ ಮಾಡಲು ಮುಂದಾಗಿದ್ದಾರೆ” ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ನೇತೃತ್ವದಲ್ಲಿ ನಿವೇಶನ ರಹಿತರು ಪ್ರತಿಭಟನೆ ಆರಂಭಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕು ಕಾನಗ ಮಾಕಳಪಲ್ಲಿ ಪಂಚಾಯಿತಿ ವ್ಯಾಪ್ತಿಯ ಕೊತ್ತಕೋಟೆ ಗ್ರಾಮದಲ್ಲಿ ಮಂಜೂರಾತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಪಲಾನುಭವಿಗಳಿಗೆ ಭೂ ನಿವೇಶನವನ್ನು ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ತಮಗೆ ಮಂಜೂರಾಗಿದ್ದ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ.
ಈ ಕುರಿತು ಕೆಪಿಆರ್ಎಸ್ ಮುಖಂಡರಾದ ಮಂಜುನಾಥ್ ರೆಡ್ಡಿ, ಈ ದಿನ.ಕಾಮ್ ಜೊತೆಗೆ ಮಾತನಾಡಿ, ”2012ರಲ್ಲಿ ಕೊತ್ತಕೋಟೆ ಗ್ರಾಮದ ನಿವೇಶನ ರಹಿತರಿಗಾಗಿ ಸರ್ಕಾರ 1.20 ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿತ್ತು. ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಮಾಡಿ ನಿವೇಶನ ರಹಿತ ಬಡವರಿಗೆ ಹಂಚಿ ಎಂದು ರಾಜೀವ್ ಗಾಧಿ ಹೌಸಿಂಗ್ ಕಾರ್ಪೋರೆಷನ್ನಿಂದ ಹಣ ಕೂಡ ಬಿಡುಗಡೆಯಾಗಿತ್ತು” ಎಂದು ತಿಳಿಸಿದರು.
“ನಿವೇಶನಗಳನ್ನು ಅಭಿವೃದ್ಧಿಪಡಿಸಿ ಇನ್ನೇನು ಹಂಚಿಕೆ ಮಾಡಬೇಕು ಎನ್ನುವಷ್ಟರಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಕೊತ್ತಕೋಟೆ ಗ್ರಾಮಸ್ಥರೇ “ನಮಗೆ ಈ ಜಾಗ ಬೇಡ, ಇಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಹೋಗಿದೆ. ಆದ್ದರಿಂದ ಪರ್ಯಾಯ ಜಾಗ ಕೊಡಿ” ಎನ್ನುವ ರೀತಿಯಲ್ಲಿ ನಕಲಿ ಸಹಿ ಇರುವ ಸುಳ್ಳು ಪತ್ರವನ್ನು ಸಲ್ಲಿಸಿದ್ದಾರೆ” ಎಂದು ವಿವರಿಸಿದರು.
“ಬಳಿಕ ಈ ರೀತಿ ತಕರಾರು ಅರ್ಜಿ ಬಂದಿದೆ ಎಂದು ಜಿಲ್ಲಾಧಿಕಾರಿಯು, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ಗೆ ಪರಿಶೀಲಿಸಿ ವರದಿ ನೀಡುವಂತೆ ಬರೆದಿದ್ದರು. ಆದರೆ, ಅವರು ಕೂಡ ಸುಳ್ಳು ವರದಿ ನೀಡಿದ್ದಾರೆ” ಎಂದರು.
“ಬಳಿಕ ಗ್ರಾಮಸ್ಥರೆಲ್ಲರೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಭೇಟಿ ಮಾಡಿ. ವಿಷಯ ಮನವರಿಕೆ ಮಾಡಿದ್ದಾರೆ. ಸ್ಥಳ ಪರಿಶೀಲನೆಗೆ ಬಂದಾಗ ನಮ್ಮ ಗಮನಕ್ಕೆ ತಂದಿಲ್ಲ ಎಂದು ಪ್ರತಿಭಟನೆ ಮಾಡಿದ್ದರು. ಬಳಿಕವೂ ಏನು ಬದಲಾವಣೆ ಆಗಲಿಲ್ಲ” ಎಂದು ಹೇಳಿದರು.

“ನವೆಂಬರ್ 25ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ನಿವೇಶನ ರಹಿತ, ದಲಿತರು, ಅಲೆಮಾರಿ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದರು. ನಮ್ಮ ಊರಿಗೆ ಮೀಸಲಿಟ್ಟಿರುವ ಜಮೀನನ್ನು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ, ನಮ್ಮ ಸಹಿ ನಕಲಿ ಮಾಡಿ ಜಮೀನನ್ನು ರದ್ದು ಮಾಡಿದ್ದಾರೆ. ಅದನ್ನು ಪುನರ್ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದರು” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಡಿಸೆಂಬರ್ ವೇಳೆಗೆ ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಬದ್ಧ: ಸಿಎಂ ಬೊಮ್ಮಾಯಿ ಭರವಸೆ
“ಮನವಿ ಸ್ವೀಕರಿಸಿದ್ದ ಜಿಲ್ಲಾಧಿಕಾರಿಯು, ಇದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ನಂತರ ಖಾಸಗಿ ವ್ಯಕ್ತಿಗಳು ಟ್ರ್ಯಾಕ್ಟರ್ಗಳನ್ನು ಉಳುಮೆ ಮಾಡಲು ಮುಂದಾಗುತ್ತಾರೆ. ಆದ್ದರಿಂದ ಊರಿನ ಜನರೆಲ್ಲ ನಿವೇಶನಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಪ್ರತಿಭಟನೆ ಮಾಡಿ, ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಈ ವೇಳೆ ಖಾಸಗಿ ವ್ಯಕ್ತಿಗಳು ಬೆದರಿಕೆ ಹಾಕಿ, ಹಲ್ಲೆ ಮಾಡಲು ಕೂಡ ಬಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ತಹಶೀಲ್ದಾರ್ ಸಭೆ ಕರೆದಿದ್ದಾರೆ” ಎಂದು ಮಾಹಿತಿ ನೀಡಿದರು.