
- ತಿರುವಣ್ಣಾಮಲೈನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಘಟನೆ
- ನಾಗೇಶನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ
ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಯುವತಿಯ ಮೇಲೆ ಆ್ಯಸಿಡ್ ಎರಚಿ ನಾಪತ್ತೆಯಾಗಿದ್ದ ಆರೋಪಿ ನಾಗೇಶನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಏಪ್ರಿಲ್ 28ರಂದು ಯುವತಿಯ ಮೇಲೆ ಆ್ಯಸಿಡ್ ಎರಚಿ ನಾಪತ್ತೆಯಾಗಿದ್ದ ಆರೋಪಿ ನಾಗೇಶ, ತಮಿಳುನಾಡಿನ ತಿರುವಣ್ಣಾಮಲೈ ಆಶ್ರಮದಲ್ಲಿ ತಲೆಮರೆಸಿಕೊಂಡಿದ್ದ. 16 ದಿನಗಳ ಹುಡುಕಾಟದ ಬಳಿಕ ಶುಕ್ರವಾರ ಆತನನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯದ ಪೊಲೀಸರು ಯಶಸ್ವಿಯಾಗಿದ್ದರು.
ಶುಕ್ರವಾರ ರಾತ್ರಿಯೇ ಆತನನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಆದರೆ, ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ಕಾರನ್ನು ನಿಲ್ಲಿಸಲು ಕೇಳಿಕೊಂಡಿದ್ದ ಆರೋಪಿ ನಾಗೇಶ ಪೊಲೀಸ್ ಪೇದೆಯ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಮತ್ತೆ ಬಂಧಿಸಿದ್ದಾರೆ. ಇದೀಗ ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನು ಓದಿದ್ದೀರಾ?: ಆ್ಯಸಿಡ್ ದಾಳಿ ಪ್ರಕರಣ | 16 ದಿನಗಳ ಬಳಿಕ ಆರೋಪಿ ನಾಗೇಶ್ ತಮಿಳುನಾಡಿನಲ್ಲಿ ಬಂಧನ
16 ದಿನಗಳ ನಂತರ ಬಂಧನ
ತಮಿಳುನಾಡು ಮೂಲದ ಆರೋಪಿ ನಾಗೇಶ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಂತರ ತಲೆಮರೆಸಿಕೊಂಡಿದ್ದ. ಆತನನ್ನು ಹುಡುಕುವುದೇ ಪೊಲೀಸರಿಗೆ ತಲೆನೋವಿನ ಸಂಗತಿಯಾಗಿತ್ತು. ಆದರೆ, ಆರೋಪಿ ವಿಪರೀತ ದೈವಭಕ್ತ. ಹೀಗಾಗಿ ಆತ ಪುಣ್ಯಕ್ಷೇತ್ರಗಳಲ್ಲಿ ಉಳಿದುಕೊಂಡಿರಬಹುದು ಎಂಬುದು ತನಿಖಾ ತಂಡದ ಎಣಿಕೆಯಾಗಿತ್ತು.
ಹೀಗಾಗಿ ಆತನ ಪತ್ತೆಗೆ ಬೆಂಗಳೂರು ಪೊಲೀಸರು 10 ತಂಡಗಳನ್ನು ರಚಿಸಿ ದಕ್ಷಿಣ ಭಾರತದ ಎಲ್ಲ ಪುಣ್ಯಕ್ಷೇತ್ರಗಳಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೂ 16 ದಿನಗಳ ನಂತರ ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ರಮಣ ಮಹರ್ಷಿ ಆಶ್ರಮದಲ್ಲಿ ನಾಗೇಶನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ.