ಮಗುವನ್ನು ಪೋಷಕರಿಂದ ನೇರವಾಗಿ ದತ್ತು ಪಡೆಯುವುದು ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್

High Court
  • ದತ್ತು ಪಡೆದ ಮತ್ತು ನೀಡಿದ ಪೋಷಕರಿಗೆ ಸಮನ್ಸ್‌ ನೀಡಿದ್ದ ಮ್ಯಾಜಿಸ್ಟ್ರೇಟ್‌ ಕೋರ್ಟ್‌
  • ನಾಲ್ವರ ವಿರುದ್ದ ವಿಚಾರಣೆಯನ್ನು ರದ್ದುಗೊಳಿಸಿದ ಹೈಕೋರ್ಟ್‌

ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 80ರ ಅಡಿಯಲ್ಲಿ ಪೋಷಕರಿಂದ ದೂರವಾಗಿರದ, ಅನಾಥವಾಗಿರದ ಮಗುವನ್ನು ನೇರವಾಗಿ ಪೋಷಕರಿಂದ ದತ್ತು ಪಡೆಯುವುದು ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ದತ್ತು ಸ್ವೀಕಾರ ಮತ್ತು ನೀಡಿದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಾಲ್ವರ ವಿರುದ್ದ ವಿಚಾರಣೆಗೆ ಆದೇಶಿಸಿತ್ತು. ಆ ತೀರ್ಪನ್ನು ಹೈಕೋರ್ಟ್‌ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ರದ್ದುಗೊಳಿಸಿದ್ದಾರೆ. 

"ದತ್ತು ಪಡೆಯಲಾದ ಮಗು, ತನ್ನನ್ನು ಹೆತ್ತ ಪೋಷಕರನ್ನು ತೊರೆದಿತ್ತೆ ಎಂಬುದರ ಬಗ್ಗೆ ದಾಖಲೆಗಳಿಲ್ಲದೆ, ಚಾರ್ಜ್‌ಶೀಟ್‌ ಸಲ್ಲಿಸುವುದರಲ್ಲಿ ಯಾವುದೇ ಹುರುಳಿಲ್ಲದೆ" ಎಂದು ನ್ಯಾಯಮೂರ್ತಿ ಹೇಳಿದ್ದಾರೆ. 

ಕೊಪ್ಪಳದ ನಿವಾಸಿ ಬಾನು ಬೇಗಂ ಅವರು 2018ರಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಈ ಪೈಕಿ ಒಂದು ಮಗುವನ್ನು ಪತಿ ಮಹಿಬೂಬಸಾಬ್ ನಬಿಸಾಬ್ ಅವರು ಜರೀನಾ ಬೇಗಂ ಮತ್ತು ಶಾಕ್ಷವಲಿ ಅಬ್ದುಲ್ಸಾಬ್ ಹುಡೇದಮನಿ ದಂಪತಿಗೆ ದತ್ತು ನೀಡಿದ್ದರು.

ಇಬ್ಬರು ದಂಪತಿಗಳು 20 ರೂಪಾಯಿ 'ಸ್ಟಾಂಪ್ ಪೇಪರ್‌'ನಲ್ಲಿ ದತ್ತು ಒಪ್ಪಂದಕ್ಕೆ ಸಹಿಹಾಕಿದ್ದರು. ಇದನ್ನು ಗಮನಿಸಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು, ಬಾಲಾಪರಾಧಿ ಕಾಯಿದೆಯ ಸೆಕ್ಷನ್ 80ರ ಅಡಿಯಲ್ಲಿ ನಾಲ್ವರಿಗೂ ಸಮನ್ಸ್ ನೀಡಿತ್ತು. ಇದನ್ನು ವಿರೋಧಿಸಿ ದಂಪತಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ದತ್ತು ಪ್ರಕ್ರಿಯೆಯ ವಿರುದ್ದ ನ್ಯಾಯಾಲಯದಲ್ಲಿ ವಾದಿಸಿದ್ದ ಸರ್ಕಾರಿ ಅರ್ಜಿದಾರರು, "ದತ್ತು ಪಡೆಯುವ ಕಾರ್ಯವಿಧಾನದ ನಿಬಂಧನೆಗಳನ್ನು ದಂಪತಿಗಳು ಅನುಸರಿಸಿಲ್ಲ. ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಪ್ರಕ್ರಿಯೆಯು ಕಾಯಿದೆಯ ಸೆಕ್ಷನ್ 80ರ ಅಡಿಯಲ್ಲಿ ಅಪರಾಧವಾಗಿದೆ" ಎಂದು ಹೇಳಿದ್ದರು. 

ಈ ಸುದ್ದಿ ಓದಿದ್ದೀರಾ?: ಕೈವಾರ ತಾತಯ್ಯನ ನೆಲದಲ್ಲಿ ಕೋಮುವಾದಕ್ಕೆ ನೆಲೆಯಿಲ್ಲ

ದತ್ತು ಪ್ರಕ್ರಿಯೆ ನಿಬಂಧನೆಯ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಅನಾಥ, ಪೊಷಕರಿಂದ ಕೈಬಿಡಲ್ಪಟ್ಟ ಅಥವಾ ಅನಾಥಾಲಯದಲ್ಲಿರುವ ಮಗುವನ್ನು ದತ್ತು ತೆಗೆದುಕೊಂಡರೆ, ಕಾಯಿದೆಯ ಅಡಿಯಲ್ಲಿ ಒದಗಿಸಲಾದ ನಿಬಂಧನೆಗಳಿಗೆ ಅನುಗುಣವಾಗಿ ದತ್ತು ಪಡೆಯಬೇಕು. ಇಲ್ಲದಿದ್ದರೆ, ಅಪರಾಧವಾಗುತ್ತದೆ ಎಂದು ಹೇಳಲಾಗುತ್ತದೆ.

ನಿಮಗೆ ಏನು ಅನ್ನಿಸ್ತು?
1 ವೋಟ್