ಹಾಸನ | ಔಷಧಿ ಮಾರಾಟಕ್ಕೆ ಆಯುಷ್ ಇಲಾಖೆ ಅನುಮತಿ ಪಡೆಯಲು ಹಕ್ಕಿಪಿಕ್ಕಿ ಸಮುದಾಯಕ್ಕೆ ಸಲಹೆ

  • ಅಂಗಡಿಹಳ್ಳಿ ಗ್ರಾಮಕ್ಕೆ ಅಧಿಕಾರಿಗಳೇ ಬಂದು ಅನುಮತಿ ನೀಡಲಿ
  • ಹಕ್ಕಿಪಿಕ್ಕಿ, ಶಿಳ್ಳೆಖ್ಯಾತ ಬುಡಕಟ್ಟು ಸಮುದಾಯದ ಜನಸಂಪರ್ಕ ಸಭೆ

“ಅಂಗಡಿಹಳ್ಳಿ ಗ್ರಾಮದ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಜನರು ಹೆದ್ದಾರಿಯ ಮಧ್ಯಭಾಗದಿಂದ 40 ಮೀಟರ್ ಅಂತರದಲ್ಲಿ ಔಷಧಿಯ ತೈಲ ಮಾರಾಟ ಮಾಡಬಹುದು. ಅಪಘಾತ ಸಾಧ್ಯತೆ ಇರುವುದರಿಂದ ರಸ್ತೆ ಪಕ್ಕದಲ್ಲಿ ಮಾರಾಟ ಮಾಡಲು ಅವಕಾಶ ಇಲ್ಲ” ಎಂದು ಹಳೇಬೀಡು ಸರ್ಕಲ್ ಇನ್ಸ್‌ಪೆಕ್ಟರ್ ಎಸ್ ಎನ್ ಶ್ರೀಕಾಂತ್ ಹೇಳಿದರು.

ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಅಂಗಡಿಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿರ್ದೇಶನದಂತೆ ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿ, “ನೀವು ಮಾರಾಟ ಮಾಡುವ ಔಷಧಗಳ ಗುಣಮಟ್ಟದ ಬಗ್ಗೆ ಮತ್ತು ಕಾನೂನು ಪ್ರಕಾರ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮಾರಾಟ ಮಾಡಲು ನಾವು ತೊಂದರೆ ಮಾಡುವುದಿಲ್ಲ. ಆದರೆ, ಆಯುಷ್ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ” ಎಂದು ತಿಳಿಸಿದರು.

“ಬುಡಕಟ್ಟು ಜನಾಂಗದವರಿಗೆ ಸರ್ಕಾರ ನೀಡುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವುದರೊಂದಿಗೆ ಬಾಲ್ಯವಿವಾಹದಂತಹ ಕಾನೂನು ಬಾಹಿರ ಕೃತ್ಯದಿಂದ ಹೊರಬರಬರಬೇಕು. ತುರ್ತು ಪರಿಸ್ಥಿತಿಗಳು ಎದುರಾದಾಗ ತುರ್ತು ಸೇವೆಯ 112 ಸಂಖ್ಯೆಗೆ ಕರೆ ಮಾಡಿ” ಎಂದು ಸಲಹೆ ನೀಡಿದರು.

40 ಕುಟುಂಬಗಳಿಗೆ ಜಾಗ ಮಂಜೂರು

ಉಪತಹಶೀಲ್ದಾರ್ ಗಂಗಾದರ್ ಮಾತನಾಡಿ, “ಅಂಗಡಿಹಳ್ಳಿಯ 40 ಕುಟುಂಬಗಳಿಗೆ ಸರ್ವೆ ನಂಬರ್ 42, 43, 44ರಲ್ಲಿ 10 ಎಕರೆ ಜಾಗ ಮಂಜೂರಾಗಿದೆ. ಕಡತ ವಿಲೇವಾರಿ ಸಂದರ್ಭದಲ್ಲಿ ಗಮನಿಸಿ, ಅಮ್ಮನಗುಡಿ ಪ್ರದೇಶದಲ್ಲಿರುವ ಜಾಗವನ್ನು ಪತ್ತೆಹಚ್ಚಲಾಗಿದೆ. ಸರ್ವೆ ಮಾಡಿಸಲಾಗಿದ್ದು, ಶೀರ್ಘವೇ ಸಾಗುವಳಿ ಮಾಡಲು ಅವಕಾಶ ಕಲ್ಪಿಸಲಾಗುವುದು. ಅಂಗಡಿಹಳ್ಳಿ ಗ್ರಾಮದ 400 ಮನೆ ಸರ್ಕಾರಿ ಗೋಮಾಳದಲ್ಲಿವೆ. ಗ್ರಾಮಠಾಣಾ ವ್ಯಾಪ್ತಿಗೆ ಸೇರಿಸಲು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು” ಎಂದರು.

ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಹತ್ತು ಲಕ್ಷ ಮಕ್ಕಳು ಅಂಗನವಾಡಿ-ಶಾಲೆಯಿಂದ ಹೊರಗೆ!

ಆಯುಷ್ ಅಧಿಕಾರಿಗಳು ಗ್ರಾಮಕ್ಕೆ ಬರಲಿ

ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಜಿಲ್ಲಾಧ್ಯಕ್ಷ ಅನಿಲ್ ಮಾತನಾಡಿ, “ಸರ್ಕಾರದ ಮಲತಾಯಿ ಧೋರಣೆಯಿಂದ ನಮ್ಮ ಬದುಕು ಕಷ್ಟವಾಗಿದೆ. ನಮ್ಮ ಔಷಧಿಗಳಿಂದ ಅಡ್ಡಪರಿಣಾಮಗಳಿಲ್ಲ. ಹಕ್ಕಿಪಿಕ್ಕಿಗಳಲ್ಲಿ ಅವಿದ್ಯಾವಂತರು ಹೆಚ್ಚಾಗಿರುವುದರಿಂದ ಕಚೇರಿಗೆ ಅಲೆದಾಡುವುದು ಕಷ್ಟವಾಗುತ್ತದೆ. ಆಯುಷ್ ಇಲಾಖೆ ಅಧಿಕಾರಿಗಳು ಅಂಗಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಔಷಧಿ ಪರೀಕ್ಷಿಸಿ ಅನುಮತಿ ಕೊಡುವ ವ್ಯವಸ್ಥೆ ಆಗಬೇಕು” ಎಂದು ಮನವಿ ಮಾಡಿದರು.

ಹಳೇಬೀಡು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಕೆ ದೇವರಾಜು, ಬೇಲೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್, ರಾಷ್ಟ್ರೀಯ ಪ್ರಾಧಿಕಾರದ ಎಂಜಿನಿಯರ್ ರೇಷ್ಮಾ, ವೈಧ್ಯಾಧಿಕಾರಿಗಳಾದ ಚೇತನ್, ಸುಮನ್ ಹಾಗೂ ಇತರರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180