ಬೀದರ್ | ಮುಸ್ಲಿಮರ ಅಲ್ಲಾ - ಹಿಂದೂಗಳ ಪ್ರಭು; ಇಬ್ಬರೂ ಒಬ್ಬರೇ "ಅಲ್ಲಮಪ್ರಭು''

ಅಹಮದ್ ಅಲ್ ವಲಿ ಕಾಲ್ದಾಗ ಎಲ್ಲಾ ಜಾತಿ ಧರ್ಮದವರಿಗಿ ಒಂದೇ ಸಮಾನ್ ನೋಡ್ಕೋತ್ತಿದ್ರು. ಸೂರ್ಯನ ಬೆಳಕ ಹ್ಯಾಂಗ್ ಅದಾ ಪ್ರಕಾರದಾಗ ಎಲ್ಲಾ ಜಾತಿ ಧರ್ಮ ಜನಾಂಗದವರಿಗಿ ಅವರಿದ್ರು.

ಬಹಮನಿ ರಾಜನ ಸಮಾಧಿಯನ್ನು 'ಅಲ್ಲಮಪ್ರಭು' ಎಂದು ಸ್ಮರಿಸುವ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ತಾಣ ಬೀದರ್‌ ಜಿಲ್ಲೆಯ ಅಷ್ಟೂರ್ ಎಂಬ ಗ್ರಾಮ. ಇಲ್ಲಿ 'ಅಹಮದ್ ಶಾ ಅಲ್ ವಾಲಿ' ಬಹಮನಿ ರಾಜನ ಗೋರಿ ಇದೆ. ಆ ಗೋರಿಯನ್ನು ಮುಸ್ಲಿಮರು ಅಲ್ಲಾ ಎಂದು ಸ್ಮರಿಸಿದರೆ, ಹಿಂದುಗಳು 'ಪ್ರಭು' ಎಂದು ಪೂಜಿಸುತ್ತಾರೆ. ಅಲ್ಲಾ ಹಾಗೂ ಪ್ರಭು ಎಂಬುದು ಬೇರೆ ಹೆಸರಲ್ಲ, ಒಂದೇ ಸ್ಥಳ. 

ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಮನಮೋಹಕ ತಾಣ ಅಷ್ಟೂರ್‌ ಗ್ರಾಮ. ಅಲ್ಲಿ ಬಹಮನಿ ಸುಲ್ತಾನರ ಕಾಲದಲ್ಲಿ ಕಟ್ಟಲಾದ ಭವ್ಯ ಗುಮ್ಮಟಗಳು ಕಣ್ಮನ ಸೆಳೆಯುತ್ತವೆ. ವಿಶಿಷ್ಟ ವಾಸ್ತುಶಿಲ್ಪ ಶೈಲಿಯಲ್ಲಿ ರಚನೆಯಾದ ಗುಂಬಜ್‌ಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಸಾಮರಸ್ಯದ ಈ ಸ್ಥಳಕ್ಕೆ ಭೇಟಿ ನೀಡುವುದೇ ಖುಷಿ.... ಸಂತಸ....

ಬೀದರ್‌ ಜಿಲ್ಲೆ ಮೊದಲಿನಿಂದಲೂ ಧಾರ್ಮಿಕ ಸಾಮರಸ್ಯವನ್ನು ಅನುಸರಿಸುತ್ತಾ ಬಂದಿದೆ. ಹಿಂದೂ, ಮುಸ್ಲಿಂ, ಸಿಖ್, ಬಸವಾದಿ ಶರಣರ ಕಾಯಕ ಭೂಮಿ. ಇಲ್ಲಿ ಇಂದಿಗೂ ಜಾತಿ, ಮತ, ಬೇಧಗಳಿಲ್ಲದೆ ಪರಸ್ಪರ ಸಹಬಾಳ್ವೆಯಿಂದ ಹಬ್ಬ, ಉತ್ಸವ, ಜಾತ್ರೆಗಳು ನಡೆಯುತ್ತವೆ. ದರ್ಗಾ, ಸಮಾಧಿ, ಮಂದಿರ, ಮಸೀದಿಗಳಿಗೆ ಜಾತಿ-ಧರ್ಮದ ಎಲ್ಲೆ ಮೀರಿ ಜನರು ಭೇಟಿಕೊಡುತ್ತಾರೆ. ಪೂಜೆ ಸಲ್ಲಿಸುತ್ತಾರೆ.

ಇಂಥ ಹಿಂದೂ-ಮುಸ್ಲಿಂ ಸಾಮರಸ್ಯದ ಸ್ಥಳಗಳಲ್ಲಿ ಅಷ್ಟೂರ್ ಕೂಡ ಒಂದು. ಬಹಮನಿ ಸುಲ್ತಾನ ಅಹಮದ್ ಅಲ್ ವಾಲಿ ಎಂಬ ರಾಜನ ಸಮಾಧಿ ಸ್ಥಳವೇ ಅಷ್ಟೂರ್ ಗುಂಬಜ್. ಅಲ್‌ ವಾಲಿಯು ಸೂಫಿ ಸಂತರ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದನು. ಆತನ ಅನುಯಾಯಿಗಳು ಆತನನ್ನು ಸಂತ ಎಂದೇ ಕರೆಯುತ್ತಿದ್ದರು. ವಾಲಿ ಎಂದರೆ ದೇವರ ಸ್ನೇಹಿತ, ಸಂತ ಎಂದು ಅಲ್ಲಿನ ಜನರು ಬಣ್ಣಿಸುತ್ತಾರೆ.

Image

"ಅಷ್ಟೂರ್ ಗ್ರಾಮವು ಸರ್ವಜನರು ಕೂಡಿದ ಹಳ್ಳಿ. ಇಲ್ಲಿ ಅಲ್ಲಮಪ್ರಭು ಜಾತ್ರಿ ಮಾಡ್ತಾರಾ. ಸುಲ್ತಾನ ಅಹಮದ್ ಅಲ್ ವಾಲಿ ಬಹಮನಿ ಅವರ ಜನ್ಮದಿನದ ನೆನಪಲ್ಲಿ ಈ ಜಾತ್ರಿ ನಡೀತದ. ಪ್ರತಿವರ್ಷ ಹೋಳಿ ಹಬ್ಬ ಆದ್‌ 9 ದಿನಕ್ಕೆ ಈ ಜಾತ್ರಿ ನಡಿತ್ತದ. ಐದು ದಿನ ಜನ ಜಾತ್ರಿ ಮಾಡ್ತಾರಾ" ಎಂದು ಅಷ್ಟೂರ್ 'ಅಲ್ಲಮಪ್ರಭು' (ಉರುಸ್) ಜಾತ್ರೆಯ ಬಗ್ಗೆ ಮುಸ್ಲಿಂ ಪೂಜಾರಿಯೊಬ್ಬರು ಹೇಳುತ್ತಾರೆ. 

"ಈ ಜಾತ್ರಿಗಿ ಧರ್ಮ, ಜಾತಿ ಅನ್ನೋದಿಲ್ಲ. ಇಲ್ಲಿಗ್ ಎಲ್ಲಾ ಜಾತಿ-ಜನಾಂಗ, ಧರ್ಮದವರು ಬರ್ತಾರ. ಅಹಮದ್ ಅಲ್ ವಲಿ ಕಾಲ್ದಾಗ ಎಲ್ಲಾ ಜಾತಿ ಧರ್ಮದವರಿಗಿ ಒಂದೇ ಸಮಾನ್ ನೋಡ್ಕೋತ್ತಿದ್ರು. ಸೂರ್ಯನ ಬೆಳಕ ಹ್ಯಾಂಗ್ ಅದಾ ಪ್ರಕಾರದಾಗ ಎಲ್ಲಾ ಜಾತಿ ಧರ್ಮ ಜನಾಂಗದವರಿಗಿ ಅವರಿದ್ರು. ಅವರ ನೆನಪ್ನಾಗ ಈ ಜಾತ್ರಿ ನಡ್ಕೋಂಡು ಬಂದದ. ಗುಲ್ಬರ್ಗಾ ಜಿಲ್ಲೆ ಆಳಂದ ತಾಲ್ಲೂಕದಾಗ ಮಾಡ್ಯಾಳ ಅಂತ ಊರು ಅದಾ ಅಲ್ಲಿಂದ 'ಹಾರುರ್' ಮಂದಿ ಪಾದಯಾತ್ರೆ ಮುಖಾಂತರ ಈ ಜಾತ್ರಿಗಿ ಬರ್ತಾರ" ಎಂದು ಅವರು ಬೀದರ್ ಭಾಷಾಸೊಗಡಿನಲ್ಲಿ ವಿವರಿಸಿದ್ದಾರೆ.

Image
ಅಹಮದ್ ಅಲ್ ವಾಲಿ ಅವರ ಸಮಾಧಿ ಇರುವ ಗುಂಬಜ್

"ಅಹಮದ್ ಅಲ್ ವಾಲಿ ಒಬ್ಬ ಬಹಮನಿ ರಾಜ. ಆತ ರಾಜ್ಯಭಾರ ನಡೆಸುತ್ತಿದ್ದ ಕಾಲದಲ್ಲಿ ಒಂದು ವರ್ಷ ಮಳೆ ಬಾರದೆ, ಬರಗಾಲ ಉಂಟಾಗಿತ್ತು. ಆಗ ವಾಲಿ ಅವರು ವಿಶೇಷ ಪೂಜೆ ಸಲ್ಲಿಸಿದ ಮೇಲೆ ಮಳೆ ಬಿತ್ತು. ಅಂದಿನಿಂದ ಜನರು ವಾಲಿ ಅವರನ್ನು ದೊಡ್ಡ ಸಂತ ಎಂದು ಕರೆಯಲು ಆರಂಭಿಸಿದರು" ಎಂದು ಅಲ್ಲಿನ ಜನರ ನಂಬಿಕೆಯ ಬಗ್ಗೆ ಅಲ್ಲಮಪ್ರಭು ಸಮಾಧಿಯ ಮುಜಾವಿರ್ ಮಹಮದ್ ಅಬ್ದುಲ್ ಗಫೂರ್ ತಿಳಿಸಿದ್ದಾರೆ.

ಇಲ್ಲಿ ಸಸ್ಯಹಾರ, ಮಾಂಸಹಾರ ಎಂಬ ಭೇದವಿಲ್ಲ. ಮಾಂಸ ತಿನ್ನುವವರು ಮಾಂಸಾಹಾರವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ಅದೇ ರೀತಿಯಲ್ಲಿ ಸಸ್ಯಹಾರಿಗಳು ಮಲೋದಿ, ಸಿಹಿ ತಿಂಡಿ ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ ಹಿಂದುಗಳಿಗೆ ಮುಸ್ಲಿಮರು ಧಟ್ಟಿ ಬುಟ್ಟಿ ಕೊಡುತ್ತಾರೆ. ಮುಸ್ಲಿಮರಿಗೆ ಹಿಂದುಗಳು ಗಂಧ ಹಚ್ಚಿ, ಶಂಕಾ ಊದಿ ನಮಸ್ಕರಿಸುತ್ತಾರೆ.

Image
ಹಿಂದೂ ಪೂಜಾರಿ ಮಹಿಳೆ ಮತ್ತು ಮುಸ್ಲಿಂ ಮೌಲ್ವಿ

ಇಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಮೌಲ್ವಿ ಮತ್ತು ಪೂಜಾರಿಗಳು ಇದ್ದಾರೆ. ಮುಸ್ಲಿಮರು ಬಂದಾಗ ಮುಸ್ಲಿಮರ ಆಚರಣೆಯಮತೆ ಮೌಲ್ವಿ ಪೂಜೆ ಸಲ್ಲಿಸುತ್ತಾರೆ. ಅದೇ ರೀತಿಯಲ್ಲಿ ಹಿಂದುಗಳು ಬಂದಾಗ, ಅಲ್ಲಿರುವ ಮಹಿಳಾ ಪೂಜಾರಿ, ಹಿಂದು ಸಂಸ್ಕೃತಿಯಂತೆ ಪೂಜೆ ಸಲ್ಲಿಸುತ್ತಾರೆ. 

ನಿಮಗೆ ಏನು ಅನ್ನಿಸ್ತು?
7 ವೋಟ್