ಜಾತಿ ನಿಂದನೆ ಆರೋಪ| ಪಿರಿಯಾಪಟ್ಟಣ ಬಿಇಒ ವಿರುದ್ದ ಪ್ರಕರಣ ದಾಖಲು

  • ಪಿರಿಯಾಪಟ್ಟಣ ಬಿಇಒ ಬಸವರಾಜು ವಿರುದ್ದ ಕ್ರಮಕ್ಕೆ ಮುಂದಾದ ಡಿಡಿಪಿಐ
  • ದೂರು ನೀಡಿದ ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ಸಿ. ಎಂ ಶಿವಯ್ಯ

ಪಿರಿಯಾಪಟ್ಟಣ ತಾಲೂಕಿನ ದೈಹಿಕ ಶಿಕ್ಷಣ ಸಂಯೋಜಕ ಸಿ.ಎಂ. ಶಿವಲಿಂಗಯ್ಯ ಅವರ ಮೇಲೆ ಕ್ಷೇತ್ರಾ ಶಿಕ್ಷಣಾಧಿಕಾರಿಯಾದ (ಬಿಇಒ) ಬಸವರಾಜ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ (ಡಿಡಿಪಿಐ) ರಾಮ ಚಂದ್ರರಾಜೇ ಅರಸ್ ಅವರು ಬಿಇಒ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ಬಗ್ಗೆ ಡಿಡಿಪಿಐ ರಾಮ ಚಂದ್ರರಾಜೇ ಅರಸ್ ಅವರು ಈದಿನ.ಕಾಮ್ ಜತೆ ಮಾತನಾಡಿ, “ಪೋನ್ ಸಂಭಾಷಣೆಯಲ್ಲಿ ಜಾತಿ ಬಗ್ಗೆ ಮಾತನಾಡಿರುವುದನ್ನು ಆಧಾರವಾಗಿಟ್ಟುಕೊಂಡು, ಬಿಇಒ ಬಸವರಾಜ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ದೈಹಿಕ ಶಿಕ್ಷಣ ಸಂಯೋಜಕ ಸಿ. ಎಂ ಶಿವಲಿಂಗಯ್ಯ ನಮಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 20ರಂದು ದೂರು ದಾಖಲಾಗಿದೆ. ಅದರ ಬಗ್ಗೆ ಮಾಹಿತಿ ಪರಿಶೀಲಿಸಿ ನಾನು ಶಿಕ್ಷಣ ಆಯುಕ್ತರಿಗೆ ಪ್ರಾಥಮಿಕ ವರದಿ ಸಲ್ಲಿಸುತ್ತಿದ್ದೇನೆ. ಮೇಲ್ನೋಟಕ್ಕೆ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಪುತ್ತೂರು | ಕೊಳೆಯಾಗಿದ್ದ ರಾಖಿ ತೆಗೆಯಲು ಹೇಳಿದ ಶಿಕ್ಷಕಿ; ಪೋಷಕರು-ಸಂಘಪರಿವಾರದಿಂದ ಅಸಮಾಧಾನ

“ಬಿಇಒ ಬಸವರಾಜು ಮತ್ತು ಅವರ ವಾಹನ ಚಾಲಕ ಷರೀಪ್ ಅವರ ವಿರುದ್ಧ ಪಿರಿಯಾಪಟ್ಟಣ ಪೊಲೀಸರು ಜಾತಿನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದು, ಆಡಿಯೊ ಸಂಭಾಷಣೆಯಲ್ಲಿ ಬಸವರಾಜ ಅವರ ಧ್ವನಿ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಅದು ಬಸವರಾಜ ಅವರ ಧ್ವನಿಯೇ ಎಂಬುದು ತನಿಖೆಯಿಂದ ತಿಳಿಯಲಿದೆ” ಎಂದು ಡಿಡಿಪಿಐ ತಿಳಿಸಿದ್ದಾರೆ. 

ಯಾವುದೇ ಪಕ್ಷಪಾತ ಮಾಡದೆ, ಕ್ರಮ ತೆಗೆದುಕೊಳ್ಳುವಂತೆ ಕೆಲ ಸಂಘಟನೆಯ ಮುಖಂಡರು ಮನವಿ ಮಾಡಿದ್ದಾರೆ. ಈ ಬಗ್ಗೆ ದೂರದಾರ ದೈಹಿಕ ಶಿಕ್ಷಣ ಸಂಯೋಜಕ ಸಿ. ಎಂ ಶಿವಲಿಂಗಯ್ಯ ಅವರನ್ನು ಈದಿನ.ಕಾಮ್ ಸಂಪರ್ಕಿಸಲು ಪ್ರಯತ್ನಿಸಿದ್ದು, ಪ್ರತಿಕ್ರಿಯೆ ದೊರೆತಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್