ಆರ್‌ಎಸ್‌ಎಸ್‌ ವಿರುದ್ಧ ಕರಪತ್ರ ಹಂಚಿದ ಆರೋಪ: ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆಯ ಮೂವರು ಪೊಲೀಸ್ ವಶ

Haveri
  • ಆನಂದ್‌ ತೇಲ್ತುಂಬ್ಡೆ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕರಪತ್ರ ಹಂಚಿಕೆ
  • ಗಲಾಟೆ ಮಾಡುವವರನ್ನು ಯಾಕೆ ವಶಕ್ಕೆ ಪಡೆದಿಲ್ಲ ಎಂದು ದಲಿತ ಸಂಘಟನೆಯ ರಾಜಾಧ್ಯಕ್ಷರ ಪ್ರಶ್ನೆ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಕರಪತ್ರ ಹಂಚುತ್ತಿದ್ದಾರೆಂದು ಸಂಘಪರಿವಾರದವರು ಆರೋಪಿಸಿದ್ದು, ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.

ಅಂಬೇಡ್ಕರ್ ಪರಿನಿರ್ವಾಣದ ದಿನ ಬಾಬರಿ ಮಸೀದಿಯನ್ನು ಉರುಳಿಸಲಾಯಿತು. ಅಂಬೇಡ್ಕರ್ ಜಯಂತಿಯಂದೇ ಅವರ ಮೊಮ್ಮಗ ಹಾಗೂ ಚಿಂತಕ ಆನಂದ್‌ ತೇಲ್ತುಂಬ್ಡೆ ಜತೆಗೆ ಇನ್ನೂ 15 ಜನ ನೈಜ ದೇಶಭಕ್ತರನ್ನು ಬಂಧಿಸಲಾಗಿದೆ. ಆ ಮೂಲಕ ದೇಶದಲ್ಲಿ ಅಂಬೇಡ್ಕರ್ ಗುರುತುಗಳನ್ನು ನಾಶಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಹೇಳಿಕೆಗಳನ್ನು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಹಿಂದುತ್ವ ಪರ ಸಂಘಟನೆ ಕರಪತ್ರ ಹಂಚಲು ಅಡ್ಡಪಡಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಈ ದಿನ.ಕಾಮ್‌ ಜತೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಎಸ್‌ ಶಿವಲಿಂಗಯ್ಯ “ ಅಂಬೇಡ್ಕರ್ ಮೊಮ್ಮಗ ಆನಂದ್‌ ತೇಲ್ತುಂಬ್ಡೆ ಒಳಗೊಂಡಂತೆ 15 ಜನ ಹೋರಾಟಗಾರರನ್ನು  ಬಂಧಿಸಿರುವುದರ ವಿರುದ್ಧ ಸಂಘಟನೆಯ ಮೂಲಕ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಈ ಬಗ್ಗೆ ಜನತೆಗೆ ಅರಿವು ಮೂಡಿಸುವ ಸಲುವಾಗಿ ಸಂಘಟನೆಯ ಮೂಲಕ ಕರಪತ್ರ ಹಂಚಿದ್ದೇವೆ. ಆರ್‌ಎಸ್‌ಎಸ್‌ ವಿರುದ್ಧ ಕರಪತ್ರ ಹಂಚುತ್ತಿದ್ದಾರೆ ಎಂದು ಆರೋಪಿಸಿ ಬಜರಂಗದಳದವರು ದಾಂಧಲೆ ನಡೆಸಿದ್ದಾರೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಚನ್ನರಾಯಪಟ್ಟಣ ರೈತರ ಮೌನ ಪ್ರತಿಭಟನೆ ಹತ್ತಿಕ್ಕಿದ ಪೊಲೀಸರು | ‘ಭೂಸ್ವಾಧೀನ ಹೋರಾಟ ಸಮಿತಿ’ ಮುಖಂಡರ ಬಂಧನ

“ವಶಕ್ಕೆ ಪಡೆಯುವಾಗ ಎರಡು ಗುಂಪನ್ನು ವಶಕ್ಕೆ ಪಡೆಯಬೇಕಿತ್ತು. ಗಲಾಟೆ ಪ್ರಾರಂಭಿಸಿದವರನ್ನು (ಸಂಘಪರಿವಾರದ ಕಾರ್ಯಕರ್ತರು) ಬಿಟ್ಟು ಪೊಲೀಸರು ಕೇವಲ ದಲಿತ ಸಂಘಟನೆಯವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ಯಾವ ನ್ಯಾಯ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಆರ್‌ಎಸ್‌ಎಸ್ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಎಂದಿಗೂ ಪ್ರಯತ್ನಿಸಿಲ್ಲ. ವಿಶೇಷವಾಗಿ ರಾಣೆಬೆನ್ನೂರಿನಲ್ಲಿ ದಲಿತರು ಮೂಲ ಸೌಕರ್ಯಗಳು ಮತ್ತು ಸರಿಯಾದ ವಸತಿ ಸೌಲಭ್ಯಗಳಿಲ್ಲದೆ ನರಳುತ್ತಿದ್ದಾರೆ. ಕರಪತ್ರದ ಬಗ್ಗೆ ಆರ್‌ಎಸ್‌ಎಸ್ ಇರುವ ಆಸಕ್ತಿ ಇಂತಹ ಸಮಸ್ಯೆಗಳ ಬಗ್ಗೆ ಇಲ್ಲ” ಎಂದು ಶಿವಲಿಂಗಯ್ಯ ಕಿಡಿಕಾರಿದ್ದಾರೆ.

Image
Haveri
ಸ್ವಾಭಿಮಾನಿ ದಲಿತ ಸಂಘಟನೆ ಹಂಚುತ್ತಿರುವ ಕರಪತ್ರದ ಪ್ರತಿ

ಈ ದಿನ.ಕಾಮ್‌ ಜತೆ ಮಾತನಾಡಿದ ರಾಣೆಬೆನ್ನೂರು ಸಬ್‌ಇನ್ಸ್‌ಪೆಕ್ಟರ್‍‌ ಸುನೀಲ್” ‘ನಾವು ಯಾರನ್ನೂ ಬಂಧಿಸಿಲ್ಲ. ಆರ್‌ಎಸ್‌ಎಸ್‌ ವಿರುದ್ಧ ಕರಪತ್ರ ಹಂಚುತ್ತಿದ್ದಾರೆ ಎಂಬ ವಿಷಯಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಕರಪತ್ರ ಹಂಚುತ್ತಿರುವವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದೇವೆ. ಇದುವರೆಗೂ ಯಾರ ಮೇಲೆ ಪ್ರಕರಣ ದಾಖಲಿಸಲಿಲ್ಲ. ಒಂದು ವೇಳೆ ದಾಖಲಿಸಿದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

Image
Haveri
ಕುಟುಂಬಗಳಿಗೆ ಕರಪತ್ರ ಹಂಚುತ್ತಿರುವ ದೃಶ್ಯ

2021 ನವೆಂಬರ್ 27ರಂದು ಹಾವೇರಿ, ಚಿತ್ರದುರ್ಗ, ದಾವಣಗೆರೆ, ಹರಪ್ಪನಹಳ್ಳಿ , ತಮಿಳುನಾಡಿನ ಅರ್ಕಾಡ್‌ ಮುಂತಾದ ಕಡೆಗಳಲ್ಲಿನ ಸುಮಾರು 500 ಹಳ್ಳಿಗಳನ್ನು ತಿರುಗಿ 33 ಸಾವಿರ ಜನರ ಸಹಿ ಸಂಗ್ರಹಿಸಿ ಆನಂದ್‌ ತೇಲ್ತುಂಬ್ಡೆ ಸೇರಿ 15 ಜನ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆ ರಾಷ್ಟ್ರಪತಿಯವರಿಗೆ ಕಳುಹಿಸಿಕೊಟ್ಟಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್