ಹಾಸನ| ಭಜರಂಗದಳದಿಂದ ಅಂಬೇಡ್ಕರ್ ಅವಹೇಳನ; ಸೆ.15ಕ್ಕೆ ಬೃಹತ್ ಪ್ರತಿಭಟನೆ

  • ಹೇಮಾವತಿ ಪ್ರತಿಮೆಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆ
  • ಡಿವೈಎಸ್‌ಪಿ ಉದಯ ಭಾಸ್ಕರ್ ವರ್ಗಾವಣೆಗೆ ಒತ್ತಾಯ

“ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ ಮತ್ತು ಭಜರಂಗದಳದ ವಾಟ್ಸ್ ಆಪ್ ಗ್ರೂಪ್‌ಗಳಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳಿಂದ ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೆ. 15ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ದರ್ಮೇಶ್ ಮತ್ತು ದಸಂಸ ಜಿಲ್ಲಾ ಸಂಚಾಲಕ ಎಚ್ ಕೆ ಸಂದೇಶ್ ಹೇಳಿದ್ದಾರೆ. 

ನಗರದಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮೆರವಣಿಗೆಯ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಅಂಬೇಡ್ಕರ್ ಪ್ರತಿಮೆ ಬಳಿ ಬಹಿರಂಗ ಸಭೆ ನಡೆಸಲಾಗುವುದು.  ಜಿಲ್ಲೆಯಾದ್ಯಂತ ದಲಿತರ ಮೇಲೆ ದೌರ್ಜನ್ಯಗಳಾದಾಗ ದೂರು ನೀಡಿದರೆ ಪ್ರತಿಯಾಗಿ ದೌರ್ಜನ್ಯಕೋರರಿಂದ ದಲಿತರ ಮೇಲೆಯೇ ಸುಳ್ಳು ದೂರು ಪಡೆದು ಪ್ರತಿದೂರು ದಾಖಲಿಸಿ ಎಸ್‌ಸಿ-ಎಸ್‌ಟಿ ಮೇಲಿನ ದರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುತ್ತಿರುವುದನ್ನು ಪೊಲೀಸರು ನಿಲ್ಲಿಸಬೇಕು. ಸರ್ಕಾರವು ಎಸ್‌ಸಿ- ಎಸ್‌ಟಿ ಕಾಯ್ದೆ ಬಲಪಡಿಸಲು 2018ರಲ್ಲಿ ತಿದ್ದುಪಡಿ ಮಾಡಿರುವ ಕಲಂ 18ನ್ನು ಎಲ್ಲ ದೌರ್ಜನ್ಯ ಪ್ರಕರಣಗಳ ಎಫ್ಐಆರ್‍‌ಗಳಲ್ಲಿ ದಾಖಲಿಸಬೇಕು” ಎಂದು ಆಗ್ರಹಿಸಿದರು.

“ಭಜರಂಗ ದಳದ ವಾಟ್ಸಪ್ ಗ್ರೂಪ್‌ಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಶ್ಲೀಲ ಮತ್ತು ಅವಹೇಳನಕಾರಿಯಾಗಿ ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವ ಗ್ರೂಪ್ ಅಡ್ಮಿನ್‌ಗಳ ವಿರುದ್ಧ ದೇಶದ್ರೋಹಿ ಹಾಗೂ ರಾಷ್ಟ್ರೀಯ ನಾಯಕರ ನಿಂದನೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

“ಸಕಲೇಶಪುರ ಮತ್ತು ಹಾಸನ ಜಿಲ್ಲೆಯ ಕೆಲ ಭಾಗಗಳಲ್ಲಿ ಹಿಂದುತ್ವದ ಹೆಸರಿನಲ್ಲಿ ಭಜರಂಗದಳ ಕಾರ್ಯಕರ್ತರ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಬೇಕು. ಭಜರಂಗದಳದವರಿಗೆ ಬೆಂಬಲ ನೀಡುತ್ತಿರುವ ಡಿವೈಎಸ್‌ಪಿ ಉದಯಭಾಸ್ಕರ್ ಅವರನ್ನು ಹಾಗೂ ಸಕಲೇಶಪುರ ತಾಲೂಕು ಪೊಲೀಸ್ ಠಾಣೆಗಳಲ್ಲಿ ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೇಡಿಕೆ ಈಡೇರಿಕೆಗಾಗಿ ಅಹೋರಾತ್ರಿ ಧರಣಿಗೆ ಮುಂದಾದ ಮಾಜಿ ಸೈನಿಕರು

“ರೈತ ವಿರೋಧಿ ಹಾಗೂ ಜನರ ಆಹಾರದ ಹಕ್ಕು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಮಾರಕವಾಗಿರುವ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ರದ್ದುಪಡಿಸಬೇಕು. ದಲಿತರು, ಮಹಿಳೆಯರು, ಹಿಂದುಳಿದವರ ಮೇಲೆ ದಾಳಿಗೆ ಕಾರಣವಾಗಿರುವ ಹಾಗೂ ಜನರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಹಕ್ಕನ್ನು ಉಲ್ಲಂಘಿಸುವ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು” ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮಶೇಖರ್, ವಂದೇ ಮಾತರಂ ಜನಪರ ರಾಷ್ಟ್ರೀಯ ಸಂಘಟನೆಯ ಅಧ್ಯಕ್ಷ ಧರ್ಮರಾಜ್ ಕಡಗ, ರೈತರ ಸಂಘದ ಜಿಲ್ಲಾಧ್ಯಕ್ಷ ಬಾಬು, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್ ಹಾಗೂ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180