ಮೈಸೂರು | ಅಂಬೇಡ್ಕರ್ ಫ್ಲೆಕ್ಸ್‌ ವಿವಾದ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

  • ಅಂಬೇಡ್ಕರ್‌ ಫ್ಲೆಕ್ಸ್ ಹಾಕಿದ್ದಕ್ಕೆ ಏಳು ವರ್ಷಗಳ ಹಿಂದೆ ಗಲಾಟೆ
  • ಇಬ್ಬರು ಆರೋಪಿಗಳ ಬಂಧನ, ಉಳಿದವರಿಗಾಗಿ ಶೋಧ

ದಲಿತ ಯುವಕನ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಾಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ನಡೆದಿದೆ. 

ಹಲ್ಲೆಗೊಳಗಾದ ಯುವಕ ಬನ್ನೂರಿನ ಜೈಭೀಮ್ ನಗರದ ದಲಿತ ನಿವಾಸಿ ದಯಾನಂದ್ ಮೂರ್ತಿ(29) ಎಂದು ಗುರುತಿಸಲಾಗಿದೆ. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. 

ಮೂರ್ತಿ ಅವರು ಏಳು ವರ್ಷಗಳ ಹಿಂದೆ ಬನ್ನೂರಿನ ಹೇಮಾದ್ರಮ್ಮ ದೇವಿಯ ಜಾತ್ರೋತ್ಸವ ಸಮಯದಲ್ಲಿ ಅಂಬೇಡ್ಕರ್‌ ಫ್ಲೆಕ್ಸ್ ಹಾಕಿದ್ದರು. ಇದರ ವಿಚಾರವಾಗಿ ಬಲಿಷ್ಠ ಜಾತಿಯ ಯುವಕರು ಇವರೊಂದಿಗೆ ಗಲಾಟೆ ಮಾಡಿದ್ದರು. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದಾಗಿನಿಂದ, ಮೂರ್ತಿ ಅವರೊಂದಿಗೆ ನಾಯಕ ಸಮುದಾಯದ ಗುರು, ದಿಂಬ, ಚಂದ್ರು, ರಕ್ಷಿತ್ ಹಾಗೂ ಇನ್ನಿತರರು ವೈಮನಸ್ಸು ಬೆಳೆಸಿಕೊಂಡಿದ್ದರು.

ಈ ವೈಷಮ್ಯವೇ ಹಲ್ಲೆಗೆ ಕಾರಣ ಎಂದು ಹೇಳಲಾಗಿದೆ. ಶುಕ್ರವಾರ ರಾತ್ರಿ, ಬನ್ನೂರಿನ ಬಾಲಾಜಿ ರೆಸ್ಟೋರೆಂಟ್‌ನಲ್ಲಿ ಮೂರ್ತಿ ಮತ್ತು ಗುರು ಹಾಗೂ ಸ್ನೇಹಿತರ ಗುಂಪು ವಾಗ್ವಾದ ನಡೆಸಿದೆ. ಮಾತಿಗೆ ಮಾತು ಬೆಳೆದು, ಗಾಜಿನ ಬಾಟಲ್‌ಗಳು ಸೇರಿದಂತೆ ಮಾರಕಾಸ್ತ್ರಗಳಿಂದ ಮೂರ್ತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. 

ಘಟನೆಯು ರೆಸ್ಟೋರೆಂಟ್‌ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಆರೋಪಿ ಗುರು, ದಿಂಬ, ಚಂದ್ರು, ರಕ್ಷಿತ್ ಹಾಗೂ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 149, 324, 307, 148, 323, 144, 147 ಅಡಿಯಲ್ಲಿ  ಪ್ರಕರಣ ದಾಖಲಿಸಿದ್ದಾರೆ. 

ಅಲ್ಲದೆ, ಆರೋಪಿ ದಿಂಬ (29), ಗುರು(30) ಎಂಬುವವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ತಲೆ ಮಾರೆಸಿಕೊಂಡಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಸಬ್ ಇನ್ಸ್‌ಪೆಕ್ಟರ್‌ ಕುಸುಮ ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ?: 'ದೊಡ್ಡವರು' ದಯೆ ತೋರಿದರೆ ಮಾತ್ರ ದಲಿತರಿಗೆ ಕುಡಿಯುವ ನೀರು!

ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಸಂಚಾಲಕ ಅಲಗೂಡು ಶಿವಕುಮಾರ್, ದಸಂಸ ಮುಖಂಡ ನಾಗರಾಜ್ ಮೂರ್ತಿ, ಸಿದ್ದರಾಜು ಹಾಗೂ ಇನ್ನಿತರ ಮುಖಂಡರು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಯೊಂದಿಗೆ ಸಭೆ ನಡೆಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
11 ವೋಟ್