ರಾಯಚೂರು | ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ: ಕಾನೂನು ಕ್ರಮಕ್ಕೆ ಆಗ್ರಹ

Rayachur
  •    ಖಾಸಗಿ ಮಿಲ್ ಮಾಲೀಕನಿಂದ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ
  •    ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತಪಡಿಸಿದ ಸಂಘಟನೆ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಖಾಸಗಿ ಮಿಲ್‌ನಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಸಿ ಮಾರಟ ಮಾಡಲಾಗುತ್ತಿದೆ. ಮಿಲ್‌ನ ಮಾಲೀಕ ವೀರಭದ್ರಪ್ಪ ಆಲ್ದಾಳ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.

ಅಕ್ರಮದ ಬಗ್ಗೆ ಹಲವಾರು ದಿನಗಳಿಂದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಅಧಿಕಾರಿ ಕ್ರಮ ಕೈಗೊಂಡಿಲ್ಲ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ವಿಜಯ್‌ ಕುಮಾರ್‍‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಕ್ರಮ ಅಕ್ಕಿ ಸಂಗ್ರಹದ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ವಿಜಯ್ ಕುಮಾರ್, ”ಅಧಿಕಾರಿಗಳಿಗೆ ಮಾಹಿತಿ ನೀಡಿ ತಪಾಸಣೆ ನಡೆಸುವಂತೆ ಹೇಳಿದರೆ, ‘ಸಂಗ್ರಹವಾಗಿರುವ ಅಕ್ಕಿಯನ್ನು ಖಾಲಿ ಮಾಡುವಂತೆ’ ಮುಂಚಿತವಾಗಿ ಮಿಲ್ ಮಾಲೀಕರಿಗೆ ತಿಳಿಸಿ ನಂತರ ತಪಾಸಣೆ ಮಾಡಲು ಬರುತ್ತಾರೆ. ಅಧಿಕಾರಿಗಳು ಅಕ್ಕಿ ಮಿಲ್ ಮಾಲೀಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದರಿಂದ ಅಕ್ರಮವನ್ನು ಬಯಲಿಗೆಳೆಯಲು ಸಾಧ್ಯವಾಗುತ್ತಿಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ?: ರಾಯಚೂರು | ಲೊಯೋಲ ಶಿಕ್ಷಣ ಸಂಸ್ಥೆಯ ಪರಿಸರ ಕಾಳಜಿ ಶ್ಲಾಘನೀಯ: ರಾಮಚಂದ್ರ ನಾಯಕ

“ಪೊಲೀಸ್ ಠಾಣೆಯಲ್ಲಿ ಹಲವಾರು ಬಾರಿ ಪ್ರಕರಣ ದಾಖಲಿಸಿದರೂ ದಂಧೆ ತಡೆಗಟ್ಟಲೂ ಸಾಧ್ಯವಾಗಲಿಲ್ಲ. ಅಧಿಕಾರಿಗಳು ಸೇರಿ ಎಲ್ಲರೂ ಮಿಲ್ ಮಾಲೀಕರ ಪರ ಇರುವುದರಿಂದ ಈ ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ” ಎಂದರು.

“ವೀರಭದ್ರಪ್ಪ ಆಲ್ದಾಳ ಅವರು ಮಾನ್ವಿ ತಾಲೂಕಿನಲ್ಲಿ ಎರಡು ಅಕ್ಕಿ ಮಿಲ್‌ಗಳನ್ನು ನಡೆಸುತ್ತಿದ್ದಾರೆ. ತಿಂಗಳಿಗೆ ಸುಮಾರು 16 ಸಾವಿರ ಕೆಜಿ ಅನ್ನಭಾಗ್ಯ ಅಕ್ಕಿಯು ಮಾನ್ವಿ ತಾಲೂಕಿಗೆ ಸರಬರಾಜಾಗುತ್ತದೆ. ಇದರಲ್ಲಿ 10 ಸಾವಿರ ಕೆಜಿ ಅಕ್ಕಿ ನ್ಯಾಯಬೆಲೆ ಅಂಗಡಿಗೆ ಸರಬರಾಜಾದರೆ, ಉಳಿದ 6 ಸಾವಿರ ಕೆಜಿ ಅಕ್ಕಿ ಮಿಲ್‌ಗೆ ಹೋಗುತ್ತದೆ. ಹೀಗೆ ಜನರಿಗೆ ಸರ್ಕಾರ ಕೊಡುತ್ತಿರುವ ಅಕ್ಕಿಯನ್ನು ತಮ್ಮ ಸ್ವಾರ್ಥಕ್ಕಾಗಿ ಮಾರಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

“ಜೆಡಿಒ, ಐಜಿಐ ಹಾಗೂ ಆಹಾರ ಇಲಾಖೆ ಆಯುಕ್ತ ರಾಯಚೂರು, ಪ್ರಾದೇಶಿಕ ಆಯುಕ್ತರು ಸೇರಿದಂತೆ ಎಲ್ಲ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ತನಿಖೆ ನಡೆಸುತ್ತೇವೆ, ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆಂದು ಅವರು ಹೇಳುತ್ತಾರೆ. ಆದರೆ, ಅಕ್ರಮದ ಹಿಂದೆ ಸ್ಥಳೀಯ ಅಧಿಕಾರಿಗಳೇ ಇರುವ ಅನುಮಾನವಿದೆ. ಈ ಅಕ್ರಮಕ್ಕೆ ಕಡಿವಾಣ ಹಾಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಹೋರಾಟ ಮಾಡುತ್ತೇವೆ” ಎಂದು ಹೇಳಿದರು.

ಮಾಸ್‌ ಮೀಡಿಯಾ ರಾಯಚೂರು ವಲಯ ಸಂಯೋಜಕ ಮೊಹಮ್ಮದ್‌ ರಫಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್