ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ| ಸರ್ಕಾರದ ನಿರ್ಧಾರಕ್ಕೆ ಚಿಂತಕರ ವಿರೋಧ

  • ಮತಾಂತರಕ್ಕೆ ಆಮಿಷ ಎಂಬುದು ಸತ್ಯಕ್ಕೆ ದೂರವಾದ ಮಾತು: ಫಾದರ್ ರೆವರೆಂಡ್ 
  • ಮತಾಂತರ ಎನ್ನುವುದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ: ಜೆ ಬಿ ರಾಜು
  • ಹೊಸ ಧರ್ಮ ಮತ್ತು ಮತಾಂತರಕ್ಕೆ ಕಾರಣ ತಿಳಿದುಕೊಳ್ಳಬೇಕು: ವಡ್ಡಗೆರೆ 

2021ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಮಸೂದೆ ಮಂಡಿಸಿತ್ತು. ವಿಧಾನಸಭೆಯಲ್ಲಿ ಅನುಮೋದನೆಯೂ ಸಿಕ್ಕಿತ್ತು. ಆದರೆ, ವಿಧಾನಪರಿಷತ್ತಿನಲ್ಲಿ ಆಡಳಿತ ಪಕ್ಷಕ್ಕೆ ಬಹುಮತದ ಕೊರತೆಯಿಂದಾಗಿ ಮಸೂದೆ ಮಂಡನೆ ಬಾಕಿ ಉಳಿದಿದೆ.

ಗುರುವಾರ (ಮೇ 12ರಂದು) ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ ಅಥವಾ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕಾನೂನು ಮತ್ತು ಸಂಸದೀಯ ಸಚಿವ ಜೆ ಸಿ ಮಾಧುಸ್ವಾಮಿ, "ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ವಿಧೇಯಕವನ್ನು ನಾವು ವಿಧಾನಸಭೆಯಲ್ಲಿ ಅಂಗೀಕರಿಸಿದ್ದೇವೆ. ಕೆಲವು ಕಾರಣಗಳಿಂದ ಅದು ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಲಿಲ್ಲ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸಚಿವ ಸಂಪುಟ ನಿರ್ಧರಿಸಿದೆ” ಪ್ರತಿಕ್ರಿಯಿಸಿದ್ದರು.

ಮತಾಂತರ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ರಾಜ್ಯದ ಸಾಮಾಜಿಕ ಚಿಂತಕರು, ಹೋರಾಟಗಾರರು ಹಾಗೂ ಧಾರ್ಮಿಕ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಮತಾಂತರ ಎನ್ನುವುದು ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಾಗಿದ್ದು, ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಈ ದಿನ.ಕಾಮ್ ಗೆ ಪ್ರತಿಕ್ರಿಯಿಸಿದ್ದಾರೆ.

ದಲಿತ ಹೋರಾಟಗಾರ ಜೆ ಬಿ ರಾಜು ಮಾತನಾಡಿ, “ಮತಾಂತರ ನಿಷೇಧ ಕಾಯ್ದೆ ಮಂಡಿಸಿರುವುದು ನೆಪಕ್ಕಷ್ಟೆ. ಮತಾಂತರವನ್ನು ಯಾರಿಂದಲೂ ತಡೆಯುವುದಕ್ಕೆ ಆಗಲ್ಲ. ಸರ್ಕಾರ ತನ್ನ ಕೋಮುವಾದಿ ಸಿದ್ಧಾಂತವನ್ನು ಅಭಿವೃದ್ಧಿಪಡಿಕೊಳ್ಳಲು ಸುಗ್ರೀವಾಜ್ಞೆ ಹೊರಡಿಸಿದ್ದಾರೆ; ಬಿಟ್ಟರೆ, ಈ ವಿಚಾರದಿಂದ ಯಾರನ್ನಾದರೂ ಉದ್ಧಾರ ಮಾಡುತ್ತಾರೆ ಎನ್ನುವುದು ಶುದ್ಧ ಸುಳ್ಳು” ಎಂದರು.

ಈ ಸುದ್ದಿ ಓದಿದ್ದೀರಾ?: ಮೀಸಲಾತಿಗೆ ಸಂಚಕಾರ| ಅಂಗೈಯಲ್ಲೇ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಟ ಯಾಕೆ?

“ಮತಾಂತರ ಎನ್ನುವುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ಯಾರೋ ಬಂದು ಬಲವಂತದಿಂದ ನಮ್ಮ ದೇವರಿಗೆ ಕೈ ಮುಗಿಯಿರಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಇಂದಿನವರೆಗೂ ಆ ರೀತಿ ಆಗಿಲ್ಲ. ಭಾರತವನ್ನು ಮುಸ್ಲಿಮರು 700 ವರ್ಷ ಆಳಿದರೂ ದೇಶ ಮುಸ್ಲಿಂ ರಾಷ್ಟ್ರ ಆಗಿಲ್ಲ. 300 ವರ್ಷ ಬ್ರಿಟಿಷರು ದೇಶವನ್ನು ಆಳಿದ್ದಾರೆ. ಕ್ರಿಶ್ಚಿಯನ್ ಮಿಷನರಿಗಳು ದೇಶದಲ್ಲಿ ವಿದ್ಯಾ ದಾನ ಮಾಡಿದ್ದಾರೆ. ಮಿಷನರಿಗಳು ಋಣ ದೇಶದ ಮೇಲೆ ಸಾಕಷ್ಟಿದ್ದು, ಆ ಋಣ ತೀರಿಸಕ್ಕಾಗಲ್ಲ” ಎಂದರು.

“ಮಿಷನರಿಗಳು ಮಾಡಿದ ಕೆಲಸವನ್ನು ಆಶ್ರಮಗಳು ಮತ್ತು ಗುರುಪೀಠಗಳು ಮಾಡಲಿಲ್ಲ. ದಲಿತರನ್ನು ಒಳಗೆ ಬಿಟ್ಟುಕೊಂಡಿಲ್ಲ. ಇಡೀ ದೇಶವನ್ನು ನಾಶ ಮಾಡುತ್ತಾ ಬಂದಿರುವವರು, ಈಗ ಸಂಪೂರ್ಣವಾಗಿ ಅಪಾಯದ ಸ್ಥಿತಿಗೆ ತಂದಿಟ್ಟಿದ್ದಾರೆ. ಶ್ರೀಲಂಕಾ ರೀತಿಯಲ್ಲಿ ಭಾರತವನ್ನೂ ದಿವಾಳಿ ಮಾಡ್ತಾರೆ” ಎಂದು ಹೇಳಿದರು.

ಮತಾಂತರ ಆಮಿಷಗಳೆಲ್ಲಾ ಸತ್ಯಕ್ಕೆ ದೂರ: ಫಾದರ್ ರೆವರೆಂಡ್ 

ಮತಾಂತರಕ್ಕಾಗಿ ಆಮಿಷ ಒಡ್ಡಲಾಗುತ್ತದೆ ಎಂಬುದೆಲ್ಲಾ ಸತ್ಯಕ್ಕೆ ದೂರವಾದ ಮಾತು. ಅಸ್ಪೃಶ್ಯತೆ ಮತ್ತು ಇತರೆ ಸಾಮಾಜಿಕ ಕಾರಣಗಳಿಂದಾಗಿ ಮತಾಂತರ ನಡೆಯುತ್ತವೆ ಎಂದು ದಲಿತ್ ಕ್ರಿಶ್ಚಿಯನ್ ಫೆಡರೇಷನ್ ಸಂಸ್ಥಾಪಕರಾದ ರೆವರಂಡ್ ಡಿ ಮನೋಹರ್ ಚಂದ್ರ ಪ್ರಸಾದ್ ಹೇಳಿದರು.

ಈ ದಿನ.ಕಾಮ್ ಜತೆಗೆ ಮಾತನಾಡಿದ ಅವರು, “ಮತಾಂತರ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. ಆದರೆ, ಬಿಜೆಪಿ ಸರ್ಕಾರ ಕಾಯ್ದೆಯನ್ನು ಕೋಮು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ. ತನ್ನ ಅಸ್ತಿತ್ವವನ್ನ ಉಳಿಸಿಕೊಳ್ಳುವುದಕ್ಕಾಗಿ ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ” ಎಂದು ಹೇಳಿದರು. 

“ವೈದ್ಯಕೀಯ, ಶಿಕ್ಷಣ ಹಾಗೂ ಪಾಕೃತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಯಾರೇ ಮಾನವೀಯ ಸೇವೆ ಮಾಡಿದರೂ, ಅಂಥವರನ್ನು ಅನುಮಾನಿಸಿ ನೋಡುವುದೇ ಈ ಕಾನೂನಿನ ದುರುದ್ದೇಶವಾಗಿದೆ” ಎಂದರು.

“ಕಳೆದ 30 ವರ್ಷಗಳಿಂದೀಚೆಗೆ ದಲಿತರ ಮತಾಂತರ ಸಂಖ್ಯೆ ಹೆಚ್ಚಾಗಿದೆ ಎಂದು 2018ಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಡೆಸಿದ ಸಾಮಾಜಿಕ ಅಧ್ಯಯನದಿಂದ ತಿಳಿದುಬಂದಿದೆ. ಬೌದ್ಧ ಮತ್ತು ಕ್ರೈಸ್ತ ಧರ್ಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರವಾಗಿದ್ದಾರೆ. ಶೂದ್ರ ಮತ್ತು ಅತಿ ಶೂದ್ರ, ಆದಿವಾಸಿಗಳು ಹೆಚ್ಚಾಗಿ ಮತಾಂತರವಾಗುತ್ತಿದ್ದು, ಆರ್‌ಎಸ್‌ಎಸ್‌ಗೆ ಆತಂಕ ಮೂಡಿಸಿದೆ” ಎಂದು ಹೇಳಿದರು.

“ಸರ್ಕಾರ ಅಭಿವೃದ್ಧಿ ರಾಜಕಾರಣ ಮಾಡದೆ, ಕೋಮು ರಾಜಕಾರಣ ಮಾಡುತ್ತಿದೆ. ಸಮಾಜದಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯ ಹೆಚ್ಚುತ್ತಿದೆ. ಬಡತನ ಮತ್ತು ಅಸ್ಪೃಶ್ಯತೆ ನಿವಾರಣೆಗೆ ಸರ್ಕಾರ ಸೂಕ್ತ ಕಾರ್ಯಕ್ರಮ ರೂಪಿಸಿದಾಗ ಮಾತ್ರ ಪರಿಹಾರ ಸಿಗಬಹುದು” ಎಂದರು.

ಈ ಸುದ್ದಿ ಓದಿದ್ದೀರಾ?: ದೇಶದ ಸಂವಿಧಾನದ ಮೇಲೆ ಬುಲ್ಡೋಝರ್‌ ಹರಿಸಲಾಗುತ್ತಿದೆ: ಉಡುಪಿಯಲ್ಲಿ ಯೋಗೇಂದ್ರ ಯಾದವ್

ಹೊಸ ಧರ್ಮ ಉದಯ ಮತ್ತು ಮತಾಂತರಕ್ಕೆ ಕಾರಣ ತಿಳಿದುಕೊಳ್ಳಬೇಕು

ಸಾಮಾಜಿಕ ಹೋರಾಟಗಾರ ಡಾ. ವಡ್ಡಗೆರೆ ನಾಗರಾಜಯ್ಯ ಮಾತನಾಡಿ, “ಮತಾಂತರ ಮತ್ತು ಹೊಸ ಮತದ ಸ್ಥಾಪನೆ ಇಲ್ಲದೇ ಹೋಗಿದ್ದರೆ, ಭಾರತ ದೇಶದಲ್ಲಿ ಬೌದ್ಧ, ಸಿಖ್, ಜೈನ ಮತ್ತು ಲಿಂಗಾಯತ ಧರ್ಮಗಳಂತಹ ಹೊಸ ಧರ್ಮಗಳ ಉದಯವಾಗುತ್ತಿರಲಿಲ್ಲ. ಹೊಸ ಧರ್ಮಗಳ ಉದಯ ಮತ್ತು ಮತಾಂತರಕ್ಕೆ ನಾವು ಕಾರಣ ತಿಳಿದುಕೊಳ್ಳಬೇಕಿದೆ. ಈ ಹೊಸ ಧರ್ಮಗಳು ಸ್ಥಾಪನೆಯಾಗಲು ಕಾರಣ, ಹಿಂದೂ ದರ್ಮ ಎಂದು ಹೇಳಿಕೊಳ್ಳುವ ವೈದಿಕ ಧರ್ಮ“ ಎಂದರು.

“ಒಂದು ನಿರ್ದಿಷ್ಟ ವಲಯ ಮಾತ್ರ ಧಾರ್ಮಿಕ ಅಧಿಕಾರಗಳನ್ನು ಹುಟ್ಟಿನ ಕಾರಣದಿಂದ ಸ್ಥಾಪಿಸಿಕೊಡಿದೆ. ಅದು ಜಾತಿ ಮತ್ತು ಮೇಲು ಕೀಳಿನ ತಾರತಮ್ಯದ ಜತೆಗೆ ಲಿಂಗ ತಾರತಮ್ಯವನ್ನು ಸೃಷ್ಟಿಸಿದೆ. ಮನುಷ್ಯ-ಮನುಷ್ಯರ ನಡುವೆ ಹಿಂಸೆಯ ಮನಸ್ಥಿತಿ ಸೃಷ್ಟಿ ಮಾಡಿದ್ದಾರೆ. ಜಾತಿ ಹಿಂಸೆಯ ಹೊರಗೆ ಹೋಗಲು ಇರುವ ದಾರಿಯೇ ಹೊಸ ಮತದ ಸ್ಥಾಪನೆ ಮತ್ತು ಮತಾಂತರ” ಎಂದು ಹೇಳಿದರು.

“ಜಾತಿ ಕಾರಣಕ್ಕಾಗಿ ನಡೆಯುತ್ತಿರುವ ಅವಮಾನಗಳು ಇಂದಿಗೂ ನಿಂತಿಲ್ಲ. ಇಂಥ ಅವಮಾನಗಳಿಗೆ ಪ್ರತಿಯಾಗಿ ಹಲವು ಧರ್ಮಗಳಿಂದ, ಧಾರ್ಮಿಕ ಬಿಡುಗಡೆಯನ್ನು ಈ ಸಮುದಾಯಗಳು ಕಂಡುಕೊಂಡಿವೆ. ಜೈನ, ಬುದ್ಧ ಮತ್ತು ಲಿಂಗಾಯಿತರಾಗಿ ಮತಾಂತರವಾದವರು ಘನತೆಯಿಂದ ಬದುಕುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಉಳಿದುಕೊಂಡವರ ಸ್ಥಿತಿ ಇಂದು ಏನಾಗಿದೆ” ಎಂದು ಪ್ರಶ್ನಿಸಿದರು.

“ಮತಾಂತರ ಬೇಡ ಎಂದರೆ, ಇಲ್ಲಿನ ಜಾತಿ ಹಿಂಸೆ, ಅಸ್ಪೃಶ್ಯತೆ ಮತ್ತು ಕೋಮುವಾದದ ಹಿಂಸೆ ತಪ್ಪಿಸಲು ಏನು ಮಾಡಿದ್ದೀರಾ? ದೇವಸ್ಥಾನಗಳಿಗೆ ಹೋದರೆ ಅಟ್ಟಾಡಿಸಿ ಹೊಡೆಯುತ್ತಾರೆ. ನಲ್ಲಿ ನೀರು ಮುಟ್ಟಿದರೆ ಮೇಲ್ಜಾತಿಯವರು ಪ್ರಶ್ನಿಸುತ್ತಾರೆ. ಮತಾಂತರವಾಗದೇ ಇದ್ದಲ್ಲಿ ದೌರ್ಜನ್ಯ ಇನ್ನಷ್ಟು ಹೆಚ್ಚುತ್ತವೆ. ಆದ್ದರಿಂದ ನಾವು ಈ ಸುಗ್ರೀವಾಜ್ಞೆಯನ್ನು ನಿರಾಕರಿಸಬೇಕು. ಏಕೆಂದರೆ, ಸಾಂವಿಧಾನವೇ ನಮಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿರುವಾಗ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು ಸಂವಿಧಾನ ವಿರೋಧಿ ನಡೆಯಾಗಿದೆ” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್