ಮರ್ಯಾದಾಗೇಡು ದೌರ್ಜನ್ಯ | ಪ್ರೇಮ ವಿವಾಹವಾದ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ

  • "ತೊಟ್ಟಿಲು ಕಾರ್ಯಕಮ್ರಕ್ಕೆ ಊರಿಗೆ ತೆರಳಿದ್ದ ದಂಪತಿ"
  • "ಜೀವ ಬೆದರಿಕೆಯಿದೆ ಎಂದರೂ ದೂರು ದಾಖಲಿಸದ ಪೊಲೀಸರು"

ಕಲಬುರಗಿಯಲ್ಲಿ ಅನ್ಯಕೋಮಿನ ಯುವತಿಯನ್ನ ಪ್ರೀತಿಸಿದ್ದ ಯುವಕನ ಬರ್ಬರ ಹತ್ಯೆಯ ದುರ್ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಮರ್ಯಾದಾಗೇಡು ದೌರ್ಜನ್ಯ ನಡೆದಿದೆ. 

ಜಾತಿಯ ಎಲ್ಲೆಯನ್ನು ಮೀರಿ, ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಯುವತಿಯ ಮನೆಯವರು ಯುವಕನ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತಳಸಮುದಾಯಕ್ಕೆ ಸೇರಿದ ಸೂರ್ಯಕಾಂತ ಮತ್ತು ಬಲಿಷ್ಠ ಜಾತಿಯ ಸಂಗೀತಾ ಪ್ರೀತಿಸಿ, ಕಳೆದ ವರ್ಷ ವಿವಾಹವಾಗಿದ್ದರು. ಇಬ್ಬರೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಕುಟುಂಬದ ಜೊತೆ ತಮ್ಮ ಮಗುವಿನ ತೊಟ್ಟಿಲು ಕಾರ್ಯಕ್ರಮ ನಡೆಸಬೇಕೆಂದು ದಂಪತಿಗಳು ಗ್ರಾಮಕ್ಕೆ ಬಂದಿದ್ದಾರೆ. ಕಾರ್ಯಕ್ರಮ ಮುಗಿಸಿ, ಬೆಂಗಳೂರಿಗೆ ಮರಳಲು ಸಿದ್ದತೆ ನಡಸುತ್ತಿದ್ದರು.

ಈ ವೇಳೆ, ಯುವತಿಯ ತಂದೆ ದ್ಯಾವಪ್ಪ ಮಾಲಗತ್ತಿ ಹಾಗೂ ಸಹೋದರರು ಕೊಡಲಿ, ಕಟ್ಟಿಗೆ ಸೇರಿದಂತೆ ಮಾರಕಾಸ್ತ್ರಗಳೊಂದಿಗೆ ಯುವಕನ ಮನೆಗೆ ನುಗ್ಗಿ, ದಂಪತಿಗಳು ಮತ್ತವರ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. 

ಘಟನೆಯಲ್ಲಿ ದಂಪತಿಗಳು ಮತ್ತು ಸೂರ್ಯಕಾಂತ ಅವರ ತಂದೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ಸುದ್ದಿ ಓದಿದ್ದೀರಾ?: ಮರ್ಯಾದಾಗೇಡು ಹತ್ಯೆ | ದಲಿತ ಯುವಕನ ಕೊಲೆ: ಇಬ್ಬರು ಆರೋಪಿಗಳ ಬಂಧನ

"ಗುರುವಾರವಷ್ಟೇ ದಂಪತಿಗಳು ಜೀವ ಬೆದರಿಕೆ ಇದೆಯೆಂದು ದೂರು ದಾಖಲಿಸಲು  ಪೊಲೀಸ್‌ ಠಾಣೆಗೆ ತೆರಳಿದ್ದರು. ಆದರೆ, ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಆ ಕಾರಣದಿಂಗಾಗಿ ದುರ್ಘಟನೆ ನಡೆದಿದೆ" ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್