ವಿಧಾನಸಭೆ | ಕರ್ನಾಕದ ಏಳು ಜಿಲ್ಲೆಗಳಲ್ಲಿ ಹೊಸ ವಿವಿ ಸ್ಥಾಪನೆಗೆ ಮಸೂದೆ ಅಂಗೀಕಾರ

  • ಮಂಡ್ಯದಲ್ಲಿ ಏಕೀಕೃತ ವಿಶ್ವವಿದ್ಯಾಲಯ ಮೇಲ್ದರ್ಜೆಗೇರಿಸುವ ಮಸೂದೆ ಅಂಗೀಕಾರ
  • ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ(ತಿದ್ದುಪಡಿ) ಮಸೂದೆ, 2022 ಸದನದಲ್ಲಿ ಚರ್ಚೆ 

ರಾಜ್ಯದ ಏಳು ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾನಿಲಯಗಳ ಸ್ಥಾಪನೆ ಮತ್ತು ಮಂಡ್ಯದಲ್ಲಿ ಏಕೀಕೃತ ವಿಶ್ವವಿದ್ಯಾಲಯವನ್ನು ಮೇಲ್ದರ್ಜೆಗೇರಿಸುವ ಮಸೂದೆಯನ್ನು ವಿಧಾನಸಭೆ ಬುಧವಾರ (ಸೆಪ್ಟೆಂಬರ್ 21) ಅಂಗೀಕರಿಸಿದೆ.

ರಾಜ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಸುಧಾರಣೆಗಳನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನು ತರುವುದಾಗಿ ಉನ್ನತ ಶಿಕ್ಷಣ ಸಚಿವ ಸಿ. ಎನ್ ಅಶ್ವಥ್ ನಾರಾಯಣ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ, 2022 ಅನ್ನು ಸದನವು ಕೂಲಂಕಷವಾಗಿ ಚರ್ಚಿಸಿದ ನಂತರ ಅಂಗೀಕರಿಸಲಾಗಿದೆ. ಈ ಸಂದರ್ಭದಲ್ಲಿ ಸಭಾಧ್ಯಕ್ಷರು ಸೇರಿದಂತೆ ಪಕ್ಷಾತೀತವಾಗಿ ಶಾಸಕರು ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಗುಣಮಟ್ಟ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.   

ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರತಿ ವಿಶ್ವವಿದ್ಯಾಲಯಕ್ಕೆ ವಾರ್ಷಿಕ ₹2 ಕೋಟಿಯಂತೆ ಅಂದಾಜು ₹14 ಕೋಟಿ ವೆಚ್ಚವಾಗಲಿದೆ ಎಂದು ಹಣಕಾಸು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.

ವಿಧೇಯಕವನ್ನು ಅಧಿಕೃತವಾಗಿ ಮಂಡಿಸಿದ ಉನ್ನತ ಶಿಕ್ಷಣ ಸಚಿವ ಅಶ್ವಥ್‌ ನಾರಾಯಣ ಮಾತನಾಡಿ, "ಎಲ್ಲ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಇರಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ.  ಈ ನಿಟ್ಟಿನಲ್ಲಿ ಸರ್ಕಾರವು ಕೊಡಗು, ಚಾಮರಾಜನಗರ, ಹಾಸನ, ಹಾವೇರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ತೆರೆಯುತ್ತಿದೆ. ಬೀದರ್, ಕೊಪ್ಪಳ, ಬಾಗಲಕೋಟೆ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಈಗಿರುವ ವಿಶ್ವವಿದ್ಯಾಲಯವನ್ನು ಮೇಲ್ದರ್ಜೆಗೇರಿಸುತ್ತೇವೆ” ಎಂದು ತಿಳಿಸಿದ್ದಾರೆ.

“ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವಿಶ್ವವಿದ್ಯಾಲಯವಿದ್ದು ಅಲ್ಲಿನ ಯುವಕರ ಶೈಕ್ಷಣಿಕ ಮತ್ತು ಕೌಶಲ್ಯ ಅಗತ್ಯಗಳನ್ನು ಪೂರೈಸಬೇಕು. ಜ್ಞಾನ ಆಯೋಗ, ಯುಜಿಸಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಒಂದು ವಿಶ್ವವಿದ್ಯಾಲಯದ ಅಡಿಯಲ್ಲಿ 100ಕ್ಕಿಂತ ಹೆಚ್ಚು ಕಾಲೇಜುಗಳು ಇರಬಾರದು. 2035ರ ಹೊತ್ತಿಗೆ ಪ್ರತಿ ಕಾಲೇಜು ಪದವಿ ನೀಡುವ ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಬೇಕೆಂಬುದು ನಮ್ಮ ಗುರಿಯಾಗಿದೆ" ಎಂದು ಸಚಿವರು ಹೇಳಿದ್ದಾರೆ. 

ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಈಗಿರುವ ವಿಶ್ವವಿದ್ಯಾಲಯಗಳ ಗುಣಮಟ್ಟ ಹಾಗೂ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. "ವಿಶ್ವವಿದ್ಯಾಲಯಗಳ ಗುಣಮಟ್ಟ ಮತ್ತು ಮೂಲಸೌಕರ್ಯ ಸುಧಾರಿಸುವತ್ತ ಸರ್ಕಾರವೂ ಗಮನಹರಿಸಬೇಕು. ರಾಜ್ಯದಿಂದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಕೆನಡಾದಂತಹ ದೇಶಗಳಿಗೆ ಹೋಗುತ್ತಾರೆ. ನಮ್ಮ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಸುಧಾರಿಸಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು" ಎಂದು ಸಚಿವರಿಗೆ ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಮಳೆಗಾಲ ಅಧಿವೇಶನ | ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳ ಗುಣಮಟ್ಟ ನೋಡಿದರೆ ಭಯವಾಗುತ್ತದೆ; ಸ್ಪೀಕರ್ ಕಾಗೇರಿ ಆತಂಕ

“ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಅಸ್ತಿತ್ವಕ್ಕೆ ಬಂದು ಸುಮಾರು 22 ವರ್ಷಗಳಾಗಿವೆ. ಪ್ರಸ್ತುತ ಸವಾಲುಗಳನ್ನು ಎದುರಿಸಲು ಹೊಣೆಗಾರಿಕೆ ಮತ್ತು ಸುಧಾರಣೆಗಳನ್ನು ತರಲು ಹೊಸ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ” ಎಂದು ಸಚಿವ ಅಶ್ವಥ್‌ ನಾರಾಯಣ ಹೇಳಿದರು. 

“ನಾವು ಹೊಸ ಶಾಸನವನ್ನು ತರಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇದಕ್ಕಾಗಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ವರದಿ ಸಲ್ಲಿಸಿದ್ದು ಸಾರ್ವಜನಿಕ ಅಭಿಪ್ರಾಯ ಕೇಳಿದೆ. ನೇಮಕಾತಿ, ಆಡಳಿತ, ಪಾರದರ್ಶಕತೆ, ಹೊಣೆಗಾರಿಕೆ, ಗುಣಮಟ್ಟದ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಏಕೀಕರಣಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಪ್ರತ್ಯೇಕ ಕಾನೂನು ಮಾಡಲಾಗುತ್ತವೆ" ಎಂದು ಸಚಿವ ಅಶ್ವಥ್‌ ನಾರಾಯಣ ವಿವರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯು. ಟಿ ಖಾದರ್,  “ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸರ್ಕಾರ ನಿಯಮಾವಳಿ ರೂಪಿಸಬೇಕು. ಈಗ ಮಂಗಳೂರು ವಿಶ್ವವಿದ್ಯಾಲಯ ಎ-ದರ್ಜೆಯಿಂದ ಬಿ-ದರ್ಜೆಗೆ ಇಳಿದಿದ್ದು, ಮುಂದೆ ಸಿ ದರ್ಜೆಗೆ ಇಳಿಯಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.

ಅಸ್ತಿತ್ವದಲ್ಲಿರುವ ನಾನಾ ವಿಶ್ವವಿದ್ಯಾಲಯಗಳಲ್ಲಿ ಮೂಲ ಸೌಕರ್ಯ, ಸೌಲಭ್ಯಗಳು ಮತ್ತು ಅಧ್ಯಾಪಕರ ಕೊರತೆಯನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕರಾದ ಈಶ್ವರ್ ಖಂಡ್ರೆ ಮತ್ತು ಪಿ.ಟಿ ಪರಮೇಶ್ವರ್ ನಾಯ್ಕ್, “ರಾಜ್ಯ ಹೀಗಿರುವಾಗ, ಹೊಸ ವಿಶ್ವವಿದ್ಯಾಲಯಗಳನ್ನು ಘೋಷಿಸುವುದು ಮೂಗಿಗೆ ತುಪ್ಪ ಸವರಿದಂತೆ” ಎಂದು ಟೀಕಿಸಿದರು. 

ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ಅವರು ಮಾತನಾಡಿ, “ಪ್ರತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ₹100-150 ಕೋಟಿ ವೆಚ್ಚವಾಗುತ್ತದೆ. ಆದ್ದರಿಂದ ಎಂಟು ಹೊಸ ವಿಶ್ವವಿದ್ಯಾಲಯಗಳಿಗೆ ನೂರಾರು ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ. ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಕಾಪಾಡದೆ ಹೊಸದನ್ನು ಸ್ಥಾಪಿಸುವುದರ ಬಗ್ಗೆ ಪ್ರಸ್ತಾಪಿಸುವ ಮೂಲಕ ತಪ್ಪುಗಳಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವಂತೆ ತೋರುತ್ತಿದೆ" ಎಂದು ದೂರಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180