
- ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲಕರ ನಡುವೆ ಮುಗಿಯದ ಜಟಾಪಟಿ
- ಬಾಗಲಕೋಟೆ ಜಿಲ್ಲೆಯ ಮುಧೋಳ ಬಂದ್, ರೈತರಿಂದ ಅಹೋರಾತ್ರಿ ಧರಣಿ
ಕಬ್ಬಿನ ಬೆಲೆ ಏರಿಕೆ ಸಂಬಂಧ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ನಡುವೆ ನಡೆಯುತ್ತಿರುವ ಜಟಾಪಟಿಯನ್ನು ನಿಲ್ಲಿಸಲು ಪ್ರತಿ ಟನ್ ಕಬ್ಬಿಗೆ 2,850 ರೂ. ನಿಗದಿ ಮಾಡಬೇಕೆಂದು ಬಾಗಲಕೋಟೆ ಜಿಲ್ಲಾಧಿಕಾರಿ ಸೂಚಿಸಿರುವುದಾಗಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ತಿಳಿಸಿದ್ದಾರೆ.
"ಬಾಗಲಕೋಟೆ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸಕ್ಕರೆ ನಿರ್ದೇಶಕರು ಪತ್ರ ಬರೆದಿದ್ದು, "ಕಾರ್ಖಾನೆಗಳು ಕಬ್ಬು ಅರೆಯುವಿಕೆಯನ್ನು ನಿಲ್ಲಿಸಿರುವುದರಿಂದ ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗುತ್ತಿದೆ. ರೈತರಿಗೆ ನ್ಯಾಯಯುತ ಮತ್ತು ಕಾನೂನಾತ್ಮಕ ಬೆಲೆ ನಿಗದಿ ಮಾಡಿ, ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು" ಎಂದು ಹೇಳಿದ್ದಾರೆ.
"ಜಿಲ್ಲೆಯ ಸುತ್ತಮುತ್ತಲಿನ ಹಲವು ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 2,850 ರೂ. ನಿಗದಿ ಮಾಡಿವೆ. ಈಗಾಗಲೇ ಕಬ್ಬು ಅರೆಯುವ ಕೆಲಸವನ್ನು ಆರಂಭಿಸಿವೆ. ಅಂತೆಯೇ, ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಯ ಹಿತದೃಷ್ಟಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರೈತರು ಮತ್ತು ಕಾರ್ಖಾನೆ ಮಾಲೀಕರೊಂದಿಗೆ ಸಭೆಯ ನಡೆಸಲಾಗಿದೆ. ಎಥನಾಲ್ ಉತ್ಪಾದಿಸುವ ಕಾರ್ಖಾನೆಗಳಲ್ಲಿ ಪ್ರತಿ ಟನ್ ಕಬ್ಬಿಗೆ 2,850 ರೂ. ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ" ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3,000 ರೂ. ನಿಗದಿ ಮಾಡಬೇಕೆಂದು ಒತ್ತಾಯಿಸಿ ಜಿಲ್ಲೆಯ ಮಹಾಲಿಂಗಪುರದಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಆ ವೇಳೆ, ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ನಡೆದ ಸಭೆ ವಿಫಲವಾಗಿತ್ತು. ಸಭೆಯ ಬಳಿಕ ರೈತರು ಮತ್ತೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಗಲಾಟೆಗಳೂ ನಡೆದು, ಪೊಲೀಸರನ್ನು ನಿಯೋಚನೆ ಮಾಡಲಾಗಿತ್ತು.
ಬಳಿಕ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನ.15ರಂದು ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆ ನಡೆದು, ಆ ಸಭೆಯೂ ವಿಫಲವಾಗಿತ್ತು. ಕಾರ್ಖಾನೆಗಳ ವಿರುದ್ಧ ಆಕ್ರೋಶಗೊಂಡಿದ್ದ ರೈತರು ನ.16ರಂದು ಮುಧೋಳ ಬಂದ್ಗೆ ಕರೆಕೊಟ್ಟಿದ್ದರು. ಬಂದ್ ಯಶಸ್ವಿಯಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರತಿ ಟನ್ ಕಬ್ಬಿಗೆ 2,850 ರೂ. ನಿಗದಿ ಮಾಡಿರುವ ಜಿಲ್ಲಾಧಿಕಾರಿ, ರೈತರು ಮತ್ತು ಕಾರ್ಖಾನೆ ಮಾಲೀಕರು ಶಾಂತಿ ಸಭೆ ನಡೆಸಿ, ಇತ್ಯರ್ಥ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.