
- ಸಚಿವರಾದ ಸಿ ಸಿ ಪಾಟೀಲ್, ಗೋವಿಂದ ಕಾರಜೋಳ, ಶಂಕರ ಪಾಟೀಲ್ ಭಾಗಿ
- ರಾಷ್ಟ್ರೀಯ ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು
ರಾಜ್ಯದಲ್ಲಿ ಕಬ್ಬು ಬೆಳೆಗಾರರು, ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರ ನಡುವಿನ ಹಗ್ಗಜಗ್ಗಾಟ ಜೋರಾಗಿದ್ದು, ಬಾಗಲಕೋಟೆಯಲ್ಲಿ ಆಕ್ರೋಶಗೊಂಡ ಕಬ್ಬು ಬೆಳೆಗಾರರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ರೈತರು ಮತ್ತು ಕಬ್ಬು ಕಾರ್ಖಾನೆ ಮಾಲೀಕರ ನಡುವೆ ಸಂಧಾನ ಸಭೆ ನಡೆಸಲಾಗಿತ್ತು.
ಆದರೆ ರೈತರ ಮನವಿಗೆ ಒಪ್ಪದ ಕಾರ್ಖಾನೆ ಮಾಲೀಕರು ಮತ್ತು ರೈತರ ಬೇಡಿಕೆಗೆ ಸ್ಪಂದಿಸದ ಸಚಿವರ ವಿರುದ್ಧ ಕಬ್ಬು ಬೆಳೆಗಾರರು ಆಕ್ರೋಶಗೊಂಡು ಸಭೆಯಿಂದ ಹೊರನಡೆದಿದ್ದರು. ಸರ್ಕಾರ ರೈತರ ಪರವಾಗಿ ಇಲ್ಲ, ಮೂವರು ಸಚಿವರು ಜಿಲ್ಲೆಗೆ ಆಗಮಿಸಿ ಸಭೆ ನಡೆಸಿದರೂ ಕಬ್ಬು ಬೆಳೆಗೆ ಲಾಭದಾಯಕ ದರ ಕೊಡಿಸುವಲ್ಲಿ ಕಾರ್ಖಾನೆ ಮಾಲೀಕರ ಬಿಗಿ ಪಟ್ಟನ್ನು ಸಡಿಲಿಸಲಾಗಲಿಲ್ಲ ಎಂದು ಆರೋಪಿಸಿ ಬುಧವಾರ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಮಖಂಡಿ ಸಿದ್ದಪ್ಪ ಈ ದಿನ.ಕಾಮ್ಗೆ ಪ್ರತಿಕ್ರಿಯೆ ನೀಡಿ, "ಅನಿರ್ದಿಷ್ಟಾವಧಿ ಧರಣಿಯಲ್ಲಿದ್ದ ರೈತರನ್ನು ಸಭೆಗೆ ಕರೆದಿದ್ದರು. ಅರ್ಧ ಸರ್ಕಾರವೇ ಜಿಲ್ಲೆಗೆ ಬಂದಿದೆ. ಹಾಗಾಗಿ ನಮಗೆ ನ್ಯಾಯ ಸಿಗಲಿದೆ ಎಂಬ ಆಶಯದಿಂದ ರೈತರೆಲ್ಲ ಸಭೆಗೆ ಹೋಗಿದ್ದೆವು. ಆದರೆ ಮೂವರು ಸಚಿವರುಗಳು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೇಳುತ್ತೇವೆ ಎಂದು ಜಾರಿಕೊಳ್ಳಲು ಯತ್ನಿಸಿದ್ದು ತೀರಾ ಖಂಡನೀಯ ಎಂದು ಸಭೆಯಿಂದ ಹೊರ ಬಂದೆವು" ಎಂದರು.
ಈ ಸುದ್ದಿ ಓದಿದ್ದೀರಾ? ಕಬ್ಬು ಬೆಳೆಗೆ ದರ ನಿಗದಿ -2 | ಎಸ್ಎಪಿ, ಎಫ್ಆರ್ಪಿ ಎಂದರೇನು? ರೈತರಿಗೆ ಆಗುತ್ತಿರುವ ದ್ರೋಹವೇನು?
"ಪ್ರತಿ ಟನ್ ಕಬ್ಬಿಗೆ ₹3500 ಕೊಡಿ ಎಂದು ಕೇಳಿದ್ದೆವು. ಆದರೆ ಕಾರ್ಖಾನೆ ಮಾಲೀಕರು ಒಪ್ಪಲು ಸಿದ್ಧರಿರಲಿಲ್ಲ. ಸಭೆಯಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಸಚಿವರು ಕೂಡ ರೈತರ ಪರವಾಗಿ ಸೂಕ್ತ ತೀರ್ಮಾನ ಕೈಗೊಳ್ಳಲು ಮುಂದಾಗಲಿಲ್ಲ. ಹಾಗಾಗಿ ಕನಿಷ್ಟ ₹2900 ಕೊಡಿ ಎಂದರೂ ಮಾಲೀಕರು ಮಾತ್ರ ₹2700 ಮೇಲೆ ಒಂದು ರೂಪಾಯಿ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಯಾವ ಸಚಿವರೂ ಈ ಬಗ್ಗೆ ಯಾವುದೇ ಚಕಾರ ಎತ್ತಲಿಲ್ಲ. ಸರ್ಕಾರ ಕಾರ್ಖಾನೆ ಮಾಲೀಕರ ಮೇಲೆ ಒತ್ತಡ ತರದೆ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ, ಮಹಾಲಿಂಗಪುರ, ಜಮಖಂಡಿ, ಮುಧೋಳ ಸೇರಿದಂತೆ ಹಲವೆಡೆ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಕಬ್ಬು ಕಾರ್ಖಾನೆ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಹುತೇಕ ಕಡೆ ಸ್ವಯಂ ಘೋಷಿತವಾಗಿ ನಗರದ ಅಂಗಡಿ ಮಾಲೀಕರು ರೈತರಿಗೆ ಬೆಂಬಲ ನೀಡಿ ಅಂಗಡಿ ಮುಗ್ಗಟ್ಟು ಬಂದ್ ಮಾಡಿದ್ದಾರೆ. ಮುದೋಳ ತಾಲೂಕಿನಾದ್ಯಾಂತ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲೂ ಮುಳ್ಳಿನ ಕಂಟಿಗೆ ಬೆಂಕಿ ಹಚ್ಚಿ ರೈತರು ತಮ್ಮ ಸಂಕಟ ಹೊರ ಹಾಕಿದ್ದಾರೆ.

ಜಿಲ್ಲೆಯಲ್ಲಿ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮುಂದಾಲೋಚನೆಯಿಂದ ಜಮಖಂಡಿಯ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಳ್ಳೊಳ್ಳಿ, ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಕಾರ್ಖಾನೆ ಸುತ್ತ ಮುತ್ತಲಿನ ಒಂದು ಕಿ.ಮೀ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.