ಬೆಂಗಳೂರು | ರೈತ ಸಂಪರ್ಕ ಕೇಂದ್ರದಲ್ಲಿ ವಿಮೆ ಪ್ರತಿನಿಧಿ ಹಾಜರಿ ಕಡ್ಡಾಯ ; ಸಚಿವ ಬಿ ಸಿ ಪಾಟೀಲ್‌

  • ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಬಗ್ಗೆ ಪ್ರಸ್ತಾಪ
  • ಬೆಳೆ ವಿಮೆ ಬಗ್ಗೆ ರೈತರಲ್ಲಿ ಜಾಗೃತಿ ಅಗತ್ಯ- ಕೆ ಹರೀಶ್‌ ಕುಮಾರ್‌

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆವಿಮೆ ಮಾಡಿಸುವ ಕುರಿತು ರೈತರಿಗೆ ಸರಿಯಾದ ಮಾಹಿತಿ ತಿಳಿಯಬೇಕೆಂಬ ಉದ್ದೇಶದಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪನಿ ಪ್ರತಿನಿಧಿ ಹಾಜರಿರುವುದು ಕಡ್ಡಾಯ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್‌ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಮಾತನಾಡಿರುವ ಅವರು, "ಯಾವ ಕಂಪನಿಯಲ್ಲಿ ಬೆಳೆವಿಮೆ (ಫಸಲ್‌ ಬಿಮಾ ವಿಮೆ) ಮಾಡಿಸಲಾಗುತ್ತದೆ ಎಂಬುದು ರೈತರಿಗೂ ತಿಳಿಯಬೇಕು. ಈ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಮಾ ಕಂಪನಿ ಪ್ರತಿನಿಧಿ ಕಡ್ಡಾಯವಾಗಿ ಹಾಜರಾಗಿರಬೇಕು ಎಂದು ಆದೇಶಿಸಿರುವುದಾಗಿ" ಹೇಳಿದ್ದಾರೆ.

ಸದನದಲ್ಲಿ ಕೆ ಹರೀಶ್‌ ಕುಮಾರ್‌ ಮಾತನಾಡಿ, "ರೈತರು ಬೆಳೆ ವಿಮೆ ಹಣವನ್ನು ಸೊಸೈಟಿಯಲ್ಲಿ ಕಟ್ಟುತ್ತಿದ್ದಾರೆ. ಆದರೆ, ಯಾವ ಕಂಪನಿಯಲ್ಲಿ ತಮ್ಮ ವಿಮೆ ಇದೆ ಎನ್ನುವುದು ಅವರಿಗೆ ತಿಳಿಯುತ್ತಿಲ್ಲ. ಅಲ್ಲದೇ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳ ರೈತರು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ. ಅದಕ್ಕೆ ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಮಾಹಿತಿ ಕೊರತೆಯೇ ಕಾರಣ ಎಂದು ಆರೋಪಿಸಿದರು.

ಇದಕ್ಕೆ ಕೃಷಿ ಸಚಿವ ಬಿ ಸಿ ಪಾಟೀಲ್‌ ಪ್ರತಿಕ್ರಿಯಿಸಿ, "ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿಯೂ ವಿವಿಧ ಬೆಳೆಗಳನ್ನು ವಿಮಾ ಘಟಕವಾರು ನೋಂದಣಿ ಮಾಡಲು ಸೂಚಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಬೆಳೆಯ ವಿಸ್ತೀರ್ಣದ ಆಧಾರದಲ್ಲಿ ನೋಂದಣಿ ಮಾಡಲಾಗುವುದು. ಆದರೆ ಇದರಲ್ಲಿ ಕೊಡಗು, ದಕ್ಷಿಣ ಕನ್ನಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ನೋಂದಾಯಿಸಲಾಗುವುದಿಲ್ಲ" ಎಂಬುದನ್ನು ಬಿ ಸಿ ಪಾಟೀಲ್‌ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಶಿರಸಿ | ಗಾಂಧಿ ಜಯಂತಿಯಂದು ಸ್ಪೀಕರ್ ಮನೆ ಮುಂದೆ ಅರಣ್ಯ ವಾಸಿಗಳ ಧರಣಿಯ ಎಚ್ಚರಿಕೆ

"ಬೇಸಿಗೆ ಹಂಗಾಮಿನಲ್ಲಿ 26 ಜಿಲ್ಲೆಗಳಲ್ಲಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಆದರೆ ಉಡುಪಿ, ಕೊಡಗು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಬೀದರ್‌ ಜಿಲ್ಲೆಗಳನ್ನು ಹೊರತುಪಡಿಸಿ ನೋಂದಣಿ ಮಾಡಲು ಅಧಿಸೂಚಿಸಲಾಗಿದೆ" ಎಂದು ಸಚಿವರು ಸ್ಪಷ್ಟನೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180