
- ಕೃಷಿ ಇಲಾಖೆಯ ಕೆಲಸಗಳನ್ನು ಡಿಜಿಟಲೀಕರಣಗೊಳಿಸಲು ಯೋಜನೆ
- ವಿಮಾ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೂಚನೆ
ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಬೆಳೆಗೆ ಪರಿಹಾರ ಒದಗಿಸುವ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್, ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಬೆಳೆಹಾನಿ ಪರಿಹಾರ ವಿಷಯವಾಗಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, "ರೈತರಿಗೆ ಬೆಳೆ ಪರಿಹಾರ ವಿತರಣೆ ಪ್ರಕ್ರಿಯೆ ತಡವಾಗಬಾರದು. ರೈತರು ಬೆಳೆ ವಿಮೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ವಿಮಾ ಕಂಪನಿಗಳ ಜೊತೆಗೆ ಅಧಿಕಾರಿಗಳು ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿರಬೇಕು" ಎಂದು ಸೂಚಿಸಿದ್ದಾರೆ.
"ವಿಮೆ ಪರಿಹಾರ ಪಡೆಯಲು ರೈತರ ಖಾತೆಗೆ ಆಧಾರ್ ಕಡ್ಡಾಯ. ಆದರೆ ಬಹುತೇಕ ರೈತರ ಖಾತೆಗೆ ಆಧಾರ್ ಲಿಂಕ್ ಆಗದಿರುವುದರಿಂದ ಪರಿಹಾರ ಪಡೆಯಲು ತಡವಾಗುತ್ತದೆ. ಹಾಗಾಗಿ ಕೃಷಿ ಇಲಾಖೆ ಅಧಿಕಾರಿಗಳು ರೈತರ ಬೆಳೆ ವಿಮೆ ಹಣ ಬರುವ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು" ಎಂದು ಸಚಿವರು ಹೇಳಿದ್ದಾರೆ.
ಅಲ್ಲದೆ, ಕೃಷಿ ಇಲಾಖೆಯ ಎಲ್ಲ ಕೆಲಸಗಳನ್ನು ಡಿಜಿಟಲೀಕರಣ ಮಾಡುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಿದ್ದು, ಈ ಬಗ್ಗೆ ಸಚಿವ ಬಿ ಸಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಇಂದು ಬೆಂಗಳೂರಿನ ವಿಕಾಸಸೌಧದ ಕಚೇರಿಯಲ್ಲಿ ಕಚೇರಿಯಲ್ಲಿ ಕೃಷಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಆಡಳಿತ ಸುಧಾರಣೆ ಮತ್ತು ಕೃಷಿ ಇಲಾಖೆಯಲ್ಲಿ ಡಿಜಿಟಲೀಕರಣದ ಬಗ್ಗೆ ಚರ್ಚಿಸಲಾಯಿತು.
— Kourava B.C.Patil (@bcpatilkourava) November 10, 2022
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. pic.twitter.com/LzqzNO14DU
ಸಭೆಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ, ಆಯುಕ್ತ ಶರತ್ ಪಿ, ಬೆಳೆವಿಮೆ ಜಂಟಿ ನಿರ್ದೇಶಕ ಜಯಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.