ಬೆಂಗಳೂರು | ಸೈಬರ್ ಸೆಕ್ಯೂರಿಟಿ ಒಡಂಬಡಿಕೆಗೆ 'ಡೆಲ್ ಟೆಕ್ನಾಲಜೀಸ್-ಸರ್ಕಾರ' ಸಹಿ

  • ರಾಜ್ಯವು 2025ರ ವೇಳೆಗೆ 300 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆ ಬೆಳೆಸುವ ಗುರಿ 
  • ಡೆಲ್ ಟೆಕ್ನಾಲಜೀಸ್ ಹಲವು ಕ್ಷೇತ್ರಗಳಿಗೆ ತನ್ನ ಇಂಟರ್- ಆಕ್ಟೀವ್ ಕೋರ್ಸ್‌ ಒದಗಿಸಲಿದೆ

“ಶಾಲಾ ವಿದ್ಯಾರ್ಥಿಗಳಿಗೆ ನವೋದ್ಯಮ ವಲಯ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸೈಬರ್ ಸೆಕ್ಯುರಿಟಿ ಕುರಿತು ಅರಿವು ಮೂಡಿಸುವ ಉದ್ದೇಶದ ಒಡಂಬಡಿಕೆಗೆ ಡೆಲ್ ಟೆಕ್ನಾಲಜೀಸ್ ಮತ್ತು ರಾಜ್ಯ ಸರ್ಕಾರದ ‘ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತಾ ಕೇಂದ್ರ’  (ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸೈಬರ್ ಸೆಕ್ಯುರಿಟಿ)ಗಳು ಐಟಿ-ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಸೋಮವಾರ ಒಡಂಬಡಿಕೆಗೆ ಸಹಿ ಮಾಡಲಾಯಿತು.

ಬಳಿಕ ಮಾತನಾಡಿದ ಸಚಿವ ಸಿ ಎನ್ ಅಶ್ವತ್ಥ ನಾರಾಯಣ್, “ಈ ಒಡಂಬಡಿಕೆಯಿಂದ ಶಾಲಾ ವಿದ್ಯಾರ್ಥಿಗಳು, ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳು, ನವೋದ್ಯಮಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಸೈಬರ್ ಸೆಕ್ಯೂರಿಟಿಗೆ ಸಂಬಂಧಿಸಿದ ಕಲಿಕೆ ಸಾಧ್ಯವಾಗಲಿದೆ. ಡೆಲ್ ಟೆಕ್ನಾಲಜೀಸ್ ಸಂಸ್ಥೆಯು ಇಷ್ಟೂ ಕ್ಷೇತ್ರಗಳಿಗೆ ತನ್ನ ಇಂಟರ್- ಆಕ್ಟೀವ್ ಕೋರ್ಸುಗಳನ್ನು ಒದಗಿಸಲಿದೆ. ವಿದ್ಯಾರ್ಥಿಗಳ ಪ್ರಯೋಜನಕ್ಕೆ ರೂಪಿಸಿರುವ ಸೈಬರ್ ಸೆಕ್ಯೂರಿಟಿಗೆ ಸಂಬಂಧಿಸಿದ ವಸ್ತು ವಿಷಯಗಳು ಇಂಗ್ಲಿಷಿನ ಜತೆಗೆ ಕನ್ನಡದಲ್ಲೂ ಇರಲಿವೆ” ಎಂದು ಹೇಳಿದರು.

“ಸಂಸ್ಥೆಯು ತನ್ನ ಅಸೆಂಡ್ ವ್ಯವಸ್ಥೆಯ ಮೂಲಕ ರಾಜ್ಯದ ನವೋದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸಲಿದ್ದು, ಅಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಮರ್ಥ ಪರಿಹಾರಗಳನ್ನು ನೀಡಲಿದೆ. ಇದರಿಂದಾಗಿ ನವೋದ್ಯಮಗಳ ಮಾರುಕಟ್ಟೆ ಹಿಗ್ಗಲಿದ್ದು, ಇವುಗಳ ಉತ್ಪನ್ನಗಳು ಮತ್ತು ಸೇವೆಗಳ ಮೌಲ್ಯವರ್ಧನೆಯೂ ಆಗಲಿದೆ” ಎಂದು ತಿಳಿಸಿದ್ದಾರೆ.

“ರಾಜ್ಯವು 2025ರ ಹೊತ್ತಿಗೆ 300 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ಗುರಿ ಹೊಂದಿದೆ. ಇಂಥ ಡಿಜಿಟಲೀಕರಣ ಸಾಧ್ಯವಾಗಬೇಕು ಎಂದರೆ ಅತ್ಯಂತ ದಕ್ಷವಾದ ಸೈಬರ್ ಸೆಕ್ಯೂರಿಟಿ ವ್ಯವಸ್ಥೆ ಇರಬೇಕಾಗುತ್ತದೆ. ಇದನ್ನು ಮುಖ್ಯವಾಗಿಟ್ಟುಕೊಂಡೇ ಸರ್ಕಾರವು ಐದು ವರ್ಷಗಳ ಹಿಂದೆಯೇ ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಿದೆ. ಡಿಜಿಟಲ್ ಆರ್ಥಿಕತೆಯ ಈ ಕಾಲಘಟ್ಟದಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ” ಎಂದು ಪ್ರತಿಪಾದಿಸಿದ್ದಾರೆ.

“ಡೆಲ್ ಸಂಸ್ಥೆಯು ತಾನು ಅಭಿವೃದ್ಧಿಪಡಿಸಿರುವ ಟೆಕ್ ಟಿಯರ್ಡೌನ್ ವ್ಯವಸ್ಥೆಯಡಿ ಆಯ್ದ ನವೋದ್ಯಮಗಳಿಗೆ ನಿರ್ದಿಷ್ಟವಾಗಿ ತಂತ್ರಜ್ಞಾನ ಮತ್ತು ಸೈಬರ್ ಸೆಕ್ಯೂರಿಟಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಿದ್ದು, ಅವುಗಳ ಆರ್ಥಿಕ ಬೆಳವಣಿಗೆಗೆ ಮಾರ್ಗದರ್ಶನ ಮಾಡಲಿದೆ. ಇದಲ್ಲದೆ, ಕಂಪನಿಯು ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳ ಜತೆಗೂಡಿ ಸೈಬರ್ ರಿಕವರಿ ಕುರಿತಂತೆ ತಿಳಿವಳಿಕೆ ಮೂಡಿಸಲಿವೆ” ಎಂದು ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಅತಿಕ್ರಮಣ ತೆರವು ಕಾರ್ಯಾಚರಣೆ: ಭೇದಭಾವದ ಪ್ರಶ್ನೆಯೇ ಇಲ್ಲ : ಸಿಎಂ ಬೊಮ್ಮಾಯಿ

“ಸೈಬರ್ ಸೆಕ್ಯೂರಿಟಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಹತ್ವದ ಕ್ಷೇತ್ರವಾಗಿದೆ. ನಮ್ಮ ಸಾರ್ವಜನಿಕ ವಲಯವು ಇದಕ್ಕೆ ಸಂಬಂಧಿಸಿದಂತೆ ಐಟಿ ಕಂಪೆನಿಗಳೊಂದಿಗೆ ಸಹಭಾಗಿತ್ವ ಹೊಂದುವುದು ಮುಂಬರುವ ದಿನಗಳಲ್ಲಿ ಮುಖ್ಯವಾಗಲಿದೆ. ಸೈಬರ್ ಬೆದರಿಕೆಯ ಈ ಯುಗದಲ್ಲಿ ಅಂಕಿಅಂಶ ಮತ್ತು ವಿವರಗಳ ಸುರಕ್ಷಿತ ಸಂರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನಗಳು ಅನಿವಾರ್ಯವಾಗಿವೆ. ಈ ಒಡಂಬಡಿಕೆಯು ಆಡಳಿತದ ಅಪರಿಮಿತ ಶಕ್ತಿಯ ಸಂಕೇತವಾಗಿದೆ” ಎಂದು ತಿಳಿಸಿದ್ದಾರೆ. 

ಡೆಲ್‌ ಟೆಕ್ನಾಲಜೀಸ್ ನ ಸೈಬರ್ ಸೆಕ್ಯೂರಿಟಿ ಉತ್ಕೃಷ್ಟತಾ ಕೇಂದ್ರದ ಮುಖ್ಯಸ್ಥ ಡಾ. ಕಾರ್ತಿಕ್ ರಾವ್ ಬಪ್ಪನಾಡು ಮಾತನಾಡಿ, “ಕರ್ನಾಟಕವು ಯಾವುದೇ ಬಗೆಯ ಸೈಬರ್ ದಾಳಿಯನ್ನು ಎದುರಿಸುವಷ್ಟು ಸಮರ್ಥವಾಗಿದೆ.  ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೂಡ ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಉತ್ಕೃಷ್ಟತಾ ಕೇಂದ್ರವು ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್