ಬೆಂಗಳೂರು | ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಉಳಿವಿಗಾಗಿ ಪ್ರತಿಭಟನೆ

  • ಭ್ರಷ್ಟಾಚಾರ ತಡೆದು ಕಾರ್ಮಿಕ ಮಂಡಳಿ ಉಳಿಸಿ
  • ಅನಗತ್ಯ ಯೋಜನೆಗೆ ಹಣ ಕೊಡುವುದನ್ನು ನಿಲ್ಲಿಸಿ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಮಂಡಳಿ ದಿವಾಳಿಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್‌ ಸಂಘ ಪ್ರತಿಭಟನೆ ನಡೆಸಿದೆ.

ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಇಂದು (ಸೆ.21) ಬೃಹತ್‌ ಪ್ರತಿಭಟನೆ ನಡೆದಿದ್ದು, "ಮಂಡಳಿ ಅನಾವಶ್ಯಕ ಯೋಜನೆಗಳನ್ನು ಜಾರಿಮಾಡುತ್ತಿರುವುದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮಂಡಳಿ ಖಜಾನೆ ಖಾಲಿಯಾಗಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ ಸಂಘ ಅಧ್ಯಕ್ಷ ಚಿಂತಾಮಣಿ ಜೋ ಕೊಡಳ್ಳಿ ಮಾತನಾಡಿ, "ಮಂಡಳಿಯಲ್ಲಿ ವಾರ್ಷಿಕ ಕ್ಯಾಲೆಂಡರ್, ಕರಪತ್ರ ಮುದ್ರಣ, ಕಳಪೆ ದರ್ಜೆ ಟೂಲ್‌ಕಿಟ್‍ಗಳು, ಸುರಕ್ಷಾ ಕಿಟ್‌ಗಳು, ಐಇಆರ್‌ ಸ್ಕ್ರೀನ್ ಟಿವಿಗಳು, ತರಬೇತಿ ಶಿಬಿರಗಳು, ಅನಗತ್ಯ ಯೋಜನೆಗಳಿಂದ ಭಾರಿ ಅಕ್ರಮ ನಡೆಯುತ್ತಿದೆ. ಮಂಡಳಿಯಿಂದ ಸರ್ಕಾರದ ಇತರೆ ಅಂಗಸಂಸ್ಥೆಗಳಾದ ಇಂದಿರಾ ಕ್ಯಾಟೀನ್, ಅಂಬೇಡ್ಕರ್ ನಿಗಮಕ್ಕೆ ಸಹಾಯ ಹಸ್ತ, ನರೇಗಾ ಕಾರ್ಮಿಕರಿಗೆ ನೆರವು ನೀಡಲಾಗುತ್ತಿದೆ. ಇದನ್ನೆಲ್ಲ ನಿಲ್ಲಿಸಬೇಕು" ಎಂದು ಆಗ್ರಹಿಸಿದರು.

"ಇತರೆ ಸಂಸ್ಥೆಗಳಿಗೆ ಮುಂಗಡವಾಗಿ ಕೋಟ್ಯಾಂತರ ರೂ ಹಣ ನೀಡಬಾರದು. ಕೋವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ಕಾರ್ಮಿಕರಿಗೆ ಧನ ಸಹಾಯ ದೊರೆತಿಲ್ಲ. ಯೋಜನೆಗಳಲ್ಲಿ, ಕಾರ್ಮಿಕ ಇಲಾಖೆ ಕೆಲಸಕಾರ್ಯಗಳಲ್ಲಿ ಜನಪ್ರತಿನಿಧಿಗಳ ಹಸ್ತಕ್ಷೇಪ ಹೆಚ್ಚಿದ್ದು, ಮಂಡಳಿ ರೇಷನ್ ಕಿಟ್‍ಗಳು ಜನಪ್ರತಿನಿಧಿಗಳ ಗೋದಾಮಿನಿಂದ ಹಂಚಿಕೆಯಾಗಿವೆ. ಇದಕ್ಕೆಲ್ಲ ತಕ್ಷಣವೇ ಕಡಿವಾಣ ಹಾಕಬೇಕು" ಎಂದು ಅವರು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ಎಸ್ ನಾಡಿಗೇರ ಮಾತನಾಡಿ, "ಬೆಂಗಳೂರಿನಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಬಸ್ ಪಾಸ್ ಕೊಡುತ್ತಿದ್ದು, ಇದನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು. ಕೇಂದ್ರದಿಂದ ರಾಜ್ಯದ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಇದುವರೆಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಕುರಿತು ಮಂಡಳಿ ಗಮನಹರಿಸಬೇಕು" ಎಂದರು.

"ಮಂಡಳಿ ಅವೈಜ್ಞಾನಿಕ ನಿಯಮಗಳನ್ನು ಜಾರಿಗೆ ತರುವುದನ್ನು ನಿಲ್ಲಿಸಿ, ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲ ಗುತ್ತಿಗೆ ನೌಕರರಿಗೆ ಸೇವೆಯ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ ಮಾಡಿ, ನೌಕಕರರನ್ನು ಖಾಯಂಗೊಳಿಸಬೇಕು" ಎಂದು ಅವರು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಗ್ರಾಕೂಸ ಕಾರ್ಮಿಕರ ಪ್ರತಿಭಟನೆ | ಕೂಲಿ ದಿನಗಳ ಹೆಚ್ಚಳಕ್ಕೆ ಆಗ್ರಹ

ಮಜ್ದೂರ ಸಂಘದ ಬೇಡಿಕೆಗಳು

  1. ಅನಗತ್ಯ ಯೋಜನೆಗಳಿಗೆ ಅನುಮೋದನೆ, ಸರ್ಕಾರದ ಅಂಗಸಂಸ್ಥೆಗಳಿಗೆ ಅನುದಾನ ಹಾಗೂ ಮುಂಗಡ ಹಣ ನೀಡುವಿಕೆ ನಿಲ್ಲಬೇಕು.
  2. ಕಟ್ಟಡ ಕಾರ್ಮಿಕರಲ್ಲದವರನ್ನು ನೋಂದಣಿ ಮಾಡಿ, ಕಾರ್ಡ್ ವಿತರಿಸುವುದನ್ನು ನಿಲ್ಲಿಸಬೇಕು.
  3. ಬೇರೆ ರಾಜ್ಯಗಳಲ್ಲಿ ಕಾರ್ಮಿಕರ ನೋಂದಣಿಗೆ ಮಂಡಳಿ ಶುಲ್ಕ ತೆಗೆದುಕೊಳ್ಳುತ್ತದೆ. ಅದೇ ಮಾದರಿಯಲ್ಲಿ ಕನಿಷ್ಟ ನೋಂದಣಿ ಶುಲ್ಕ ಜಾರಿಯಾಗಬೇಕು.
  4. ಮಂಡಳಿಯಿಂದ ಫಲಾನುಭವಿಗಳಿಗೆ ಕೊಡುವ ಗೃಹ ಸಾಲದ ಮುಂಗಡ ಹಣ ಎರಡು ಲಕ್ಷ ಇದ್ದು, ಇದಕ್ಕೆ 14 ಕಠಿಣ ಷರತ್ತುಗಳನ್ನು ಹಾಕಿರುವುದು ಸರಿಯಲ್ಲ. ಗೃಹ ಕಟ್ಟಡ ನಿರ್ಮಾಣದ ಸಾಮಾಗ್ರಿ ಐದು ಪಟ್ಟು ಹೆಚ್ಚಾಗಿದ್ದು, ಮನೆ, ಜಾಗ ಖರೀದಿಸಲು ಹಾಗೂ ಸೂರು ನಿರ್ಮಿಸಿಕೊಳ್ಳಲು ಹತ್ತು ಲಕ್ಷ ರೂ. ಸಾಲ ಕೊಡಬೇಕು.
  5. ಎಲ್ಲಾ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಶುಲ್ಕರಹಿತ ಆರೋಗ್ಯ ಕಾರ್ಡ್ ಕೊಡಬೇಕು. ಇಲ್ಲವಾದಲ್ಲಿ ಎಲ್ಲಾ ಅಸಂಘಟಿತ ಕಟ್ಟಡ ಕಾರ್ಮಿಕರನ್ನು ಇ.ಎಸ್.ಐ ಹಾಗೂ ಪಿ.ಎಫ್ ವ್ಯಾಪ್ತಿಗೆ ತರಬೇಕು.
  6. ಎಲ್ಲ ಕಟ್ಟಡ ಕಾರ್ಮಿಕರಿಗೆ ನಿವೃತ್ತಿ ಪಿಂಚಣಿ ಪ್ರತಿ ತಿಂಗಳು ನಿಗದಿತ ದಿನಾಂಕದಂದು ದೊರೆಯುವಂತಾಬೇಕು.
  7. ಕಟ್ಟಡ ಕಾರ್ಮಿಕರಿಗಾಗಿ ಹೊಸ ಸಾಫ್ಟ್‌ವೇರ್ ಸೇವೆ ಪ್ರಾರಂಭ ಮಾಡುವುದಾಗಿ ಎರಡು ವರ್ಷದ ಹಿಂದೆಯೇ ಹೇಳಿದ್ದು, ಕೂಡಲೇ ಜಾರಿಯಾಗಬೇಕು.
  8. ಮಂಡಳಿಯಿಂದ ಫಲಾನುಭವಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನೀಡುವ ಧನಸಹಾಯ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು.

ಪ್ರತಿಭಟನೆಯಲ್ಲಿ, ಭಾರತೀಯ ಮಜ್ದೂರ್ ಸಂಘ ರಾಜ್ಯಾಧ್ಯಕ್ಷ ಶಂಕರ್ ಸುಲೆಗಾವ, ಅಖಿಲ ಭಾರತೀಯ ಕನ್‌ಸ್ಟ್ರಕ್ಷನ್ ಮಜ್ದೂರ್ ಸಂಘದ ಹಿರಿಯ ಮುಖಂಡ ಬಸವಂತ್ ಸಾಹು, ಸಿಟಿ ಪಾಟೀಲ್, ಬಿಎಮ್‌ಎಸ್‌, ನಿಕಟಪೂರ್ವ ರಾಜ್ಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ಹಿರಿಯ ನಾಯಕರಾದ ಬಿಎಸ್ ದೇಶಪಾಂಡೆ, ರಾಮಕೃಷ್ಣ ಪೂಂಜಾ, ಪುರುಷೋತ್ತಮ, ಡಿ ವಿ ರಾಮ ಮೂರ್ತಿ ಸೇರಿದಂತೆ ಪ್ರಮುಖರು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್