
- 21ನೇ ದಿನಕ್ಕೆ ಕಾಲಿಟ್ಟ ಭೂಸ್ವಾಧೀನ ವಿರೋಧಿ ಹೋರಾಟ
- ದೇವನಹಳ್ಳಿಯಿಂದ ಚನ್ನರಾಯಪಟ್ಟಣಕ್ಕೆ ಕಾಲ್ನಡಿಗೆ ಜಾಥಾ
ಕೃಷಿ ಭೂಮಿ ರಕ್ಷಣೆಗಾಗಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ದೇವನಹಳ್ಳಿ ತಾಲೂಕಿನ ರೈತರಿಗೆ ಬಳ್ಳಾರಿ ಜಿಲ್ಲೆ ರೈತರು ಬೆಂಬಲ ಸೂಚಿಸಿದ್ದಾರೆ. ರೈತರ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ರೈತರಿಗೆ ನೋಟಿಸ್ ನೀಡಿದೆ. ಅದನ್ನು ವಿರೋಧಿಸಿ ಕಳೆದ 21 ದಿನಗಳಿಂದ ರೈತರು ಚನ್ನರಾಯಪಟ್ಟಣ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹೋರಾಟವನ್ನು ಬೆಂಬಲಿಸಿ ಭಾನುವಾರ ಬಳ್ಳಾರಿಯ ರೈತರು ದೇವನಹಳ್ಳಿಗೆ ಆಗಮಿಸಿದ್ದಾರೆ. ಅಲ್ಲಿಂದ ಪ್ರತಿಭಟನಾ ಸ್ಥಳಕ್ಕೆ ಕಾಲ್ನಡಿಗೆ ಜಾಥಾ ನಡೆಯುತ್ತಿದೆ.
ಜಾಥಾವನ್ನು ರೈತ ಸಂಘದ ರಾಜ್ಯಾಧ್ಯಕ್ಷ ಮಾದವರೆಡ್ಡಿ ಉದ್ಘಾಟಿಸಿದ್ದಾರೆ. "ನಾವು ಎಲ್ಲೇ ಇದ್ದರೂ ರೈತರ ಮಕ್ಕಳು. ರೈತ ಕುಲಕ್ಕೆ ಕುತ್ತು ಬಂದರೆ ನಾವೆಲ್ಲ ಒಂದಾಗಿ ಪ್ರತಿಕ್ರಿಯಿಸುತ್ತೇವೆ. ನಮ್ಮದು ಮತ್ತು ಭೂಮಿ ತಾಯಿಯದ್ದು - ಕರುಳ ಬಳ್ಳಿಯ ಸಂಬಂಧ. ನಮ್ಮ ಕುಲಬಂಧುಗಳು ಬೀದಿಯಲ್ಲಿದ್ದಾಗ ನಾವು ಸುಮ್ಮನಿರಲು ಸಾಧ್ಯವೇ" ಎಂದು ಅವರು ಭಾವುಕರಾಗಿ ಮಾತನಾಡಿದ್ದಾರೆ.
"ಚನ್ನರಾಯಪಟ್ಟಣದ ನಮ್ಮ ಅಣ್ಣ-ತಮ್ಮಂದಿರ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ನಾವೆಲ್ಲರೂ ಅವರೊಂದಿಗೆ ಇರಲು ಸಿದ್ಧರಾಗಿದ್ದೇವೆ. ಅವರು ಯಾವಾಗ ಕರೆದರೂ ಅವರೊಂದಿಗೆ ನಿಲ್ಲುತ್ತೇವೆ" ಎಂದು ಅವರು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ತುಮಕೂರು ದಲಿತ ಯುವಕರ ಹತ್ಯೆ ಪ್ರಕರಣ| ಗೃಹ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ರೈತ ಸಂಘದ ವಕ್ತಾರ ಸಾ ರಘುನಾಥ್ ಮಾತನಾಡಿ, "ರೈತ ಕುಲ ಒಂದೇ, ನಮಗೆ ಯಾವ ಜಾತಿ-ಧರ್ಮವಿಲ್ಲ. ಅನ್ನ ಬೆಳೆಯುವ ಭೂಮಿಯನ್ನು ಕಸಿದುಕೊಳ್ಳುವ ಪ್ರಕ್ರಿಯೆಯನ್ನು ನಾವೆಂದೂ ಸಹಿಸುವುದಿಲ್ಲ. ರೈತರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದ್ದು, ಅದನ್ನು ಖಂಡಿಸುವುದು ನಮ್ಮ ಜವಾಬ್ದಾರಿ" ಎಂದರು.
ಕಾಲ್ನಡಿಗೆ ಜಾಥದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರಾದ ಕಾರಹಳ್ಳಿ ಶ್ರೀನಿವಾಸ್, ಮಾರೇಗೌಡ, ಅಶ್ವತ್ಥಪ್ಪ, ನಲ್ಲಪ್ಪನಹಳ್ಳಿ ಸೇರಿ ನೂರಾರು ರೈತರು ಭಾಗಿಯಾಗಿದ್ದರು.