ಬೆಂಗಳೂರು ಗ್ರಾಮಾಂತರ | ಆಸ್ತಿ ಕಬಳಿಕೆ; ಒಂದೇ ಕುಟುಂಬದ 26 ಮಂದಿಯಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

Bangalore rural-nelmangala family
  • ʼ1981ರಲ್ಲಿ ಭೋಗ್ಯಕ್ಕೆ ಕೊಟ್ಟ ಜಮೀನನ್ನು 2012ರಲ್ಲಿ ಸ್ವಂತಕ್ಕೆ ಮಾಡಿಳ್ಳಲಾಗಿದೆʼ
  • 'ಕಾನೂನನ್ನು ಕೊಂಡುಕೊಂಡಿದ್ದೇನೆ' ಎಂದು ಬೆದರಿಕೆ ಹಾಕಿರುವ ಆರೋಪ

ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ದುರುದ್ದೇಶದಿಂದ ಕಬಳಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಬಳಿಯ ತಡಸೀಘಟ್ಟ ಗ್ರಾಮದ  ಕುಟುಂಬವೊಂದು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದೆ.

ಗ್ರಾಮದ ರಾಜಗೋಪಾಲಯ್ಯ ಎಂಬಾತ ನಕಲಿ ಸಹಿ ಮೂಲಕ ದಾಖಲೆ ಸೃಷ್ಟಿಸಿ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Eedina App

"ಆಸ್ತಿ ಕಳೆದುಕೊಂಡು ಜೀವನ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ನಮಗೆ ದಯಾಮರಣ ನೀಡಿ" ಎಂದು ತಡಸೀಘಟ್ಟ ಗ್ರಾಮದ ಗಂಗಹನುಮಕ್ಕ ಕುಟುಂಬದ 26 ಮಂದಿ ದಯಾಮರಣಕ್ಕೆ ಪತ್ರ ಬರೆದು ಅದನ್ನು ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

ಘಟನೆ ಹಿನ್ನೆಲೆ

AV Eye Hospital ad

ಸುಮಾರು 1981ರಲ್ಲಿ ಗಂಗಹನುಮಕ್ಕನ ತಂದೆ ಮೃತ ಭೈರಣ್ಣ ಅವರು ತಮ್ಮ ಮಗಳ ಮದುವೆ ಸಂದರ್ಭದಲ್ಲಿ ಹಣದ ಅಗತ್ಯದ ಕಾರಣಕ್ಕೆ ತಮ್ಮದೇ ಗ್ರಾಮದ ರಾಜಗೋಪಾಲಯ್ಯ ಎಂಬ ವ್ಯಕ್ತಿಯ ಬಳಿ ತಮ್ಮ 3.22 ಎಕರೆ ಕೃಷಿ ಜಮೀನನ್ನು ₹ 3,500 ಗಳಿಗೆ ಭೋಗ್ಯಕ್ಕೆ ಕೊಟ್ಟಿದ್ದರು.

ಆದರೆ ರಾಜಗೋಪಾಲಯ್ಯ 2012ರ ಸಂದರ್ಭದಲ್ಲಿ ನಕಲಿ ಸಹಿ ಮತ್ತು ದಾಖಲೆಗಳನ್ನ ಸೃಷ್ಟಿಸಿ ಭೋಗ್ಯಕ್ಕಾಗಿ ಕೊಟ್ಟಿದ್ದ ಜಮೀನನ್ನು ತನ್ನ ಹೆಸರಿಗೆ ವರ್ಗಾಹಿಸಿಕೊಳ್ಳುವ ಮೂಲಕ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಿದ್ದಾನೆ ಎಂದು ಗಂಗಹನುಮಕ್ಕನ ಕುಟುಂಬ ಆರೋಪಿಸಿದೆ.

ಈ ಕುರಿತು ಕುಟುಂಬದ ಸದಸ್ಯ ಸಿದ್ದರಾಜು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ಗಂಗಹನುಮಕ್ಕನ ತಂದೆ ಭೈರಣ್ಣ ಅವರು ಬದುಕಿದ್ದಾಗಿಂದಲೂ ಜಮೀನನನ್ನು ಭೋಗ್ಯದಿಂದ ಬಿಟ್ಟು ಕೊಡಿ, ನಮ್ಮ ಜಮೀನನ್ನು ನಮ್ಮಂತೆ ಮಾಡಿಕೊಡಿ ಎಂದು ಕೇಳಿಕೊಂಡರೂ ಬಿಟ್ಟುಕೊಟ್ಟಿಲ್ಲ. ಸೂಕ್ತ ದಾಖಲೆ ಒದಗಿಸಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹಣ ಬಲ, ಜನ ಬಲ ಇರುವವರು ಅವರು. ಹಾಗಾಗಿ ನಮ್ಮ ಆಸ್ತಿ ದೋಚಿ ವಂಚಿಸುತ್ತಿದ್ದಾರೆ. ನಮಗೆ ಕಾನೂನಿನ ಬೆಂಬಲವೂ ಇಲ್ಲ. ಹಾಗಾಗಿ ದಯಾಮರಣ ಕೋರಿದ್ದೇವೆ" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾಪಿ ಮಾಡಿದ್ದಕ್ಕೆ ನಿಂದಿಸಿದ ಶಿಕ್ಷಕಿ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಇನ್ನು ಕುಟುಂಬ ಹಿರಿಯ ಜೀವ ವೃದ್ಧೆ ಗಂಗಹನುಮಕ್ಕ ಮಾತನಾಡಿ, "ಓದಲು ಬರೆಯಲು ಬರಲ್ಲ ಅಂತ ಸಹಿ ಮಾಡಿಸಿಕೊಂಡು ಆಸ್ತಿ ಕದ್ದು ಅನ್ಯಾಯ ಮಾಡಿದ್ದಾರೆ. ರಾಜಗೋಪಾಲಯ್ಯ ಕುಟುಂಬ ನಮ್ಮ ಬಳಿ ಹಣ ಇದೆ ಹಾಗಾಗಿ ಕಾನೂನನ್ನೇ ಕೊಂಡುಕೊಂಡಿದ್ದೇನೆ ಎಂದು ಬೆದರಿಕೆ ಹಾಕುತ್ತಾರೆ. ನನ್ನ ಮಕ್ಕಳೆಲ್ಲ ಕೂಲಿ ಮಾಡುತ್ತಿದ್ದು, ಜೀವನ ಮಾಡಲು ಕಷ್ಟ ಇದೆ. ನಮಗೆ ಎಲ್ಲಿಯೂ ನ್ಯಾಯ ಸಿಕ್ಕದಿದ್ದರಿಂದ ಸಾಯುವುದಕ್ಕಾದರೂ ಅನುಮತಿ ಕೊಡಿ ಎಂದು ಕೇಳುತ್ತಿದ್ದೇವೆ" ಎಂದು ಕಣ್ಣೀರಾದರು.                    

ನಿಮಗೆ ಏನು ಅನ್ನಿಸ್ತು?
0 ವೋಟ್
eedina app