ಬೆಂಗಳೂರು | ಮಾರ್ಕೊಪೋಲೊ ಕಾರ್ಮಿಕರ ಹೋರಾಟಕ್ಕೆ ಜಯ; ಕೆಲಸ ಮಾಡಲು ಅವಕಾಶ ನೀಡಿದ ಕಂಪನಿ

  • ಕಾರ್ಮಿಕರು-ಕಂಪನಿ ನಡುವಿನ ಸಂಧಾನ ಯಶಸ್ವಿ
  • 80 ದಿನಗಳ ಹೋರಾಟಕ್ಕೆ ಮಣಿದ ಟಾಟಾ ಕಂಪನಿ

ಧಾರವಾಡದ ಟಾಟಾ-ಮಾರ್ಕೊಪೋಲೋ ಕ್ರಾಂತಿಕಾರಿ ಕಾರ್ಮಿಕ ಸಂಘದ (ಟಿಯುಸಿಐ) ನೇತೃತ್ವದಲ್ಲಿ 1,160 ಕಂಪನಿ ಕಾರ್ಮಿಕರು ಕಳೆದ 80 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಬಿಟ್ಟಿದ್ದಾರೆ.

77 ದಿನಗಳ ಹೋರಾಟಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕಾರ್ಮಿಕರು ಹೋರಾಟವನ್ನು ಧಾರವಾಡದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಸೆ.20 ಸ್ಥಳಾಂತರ ಮಾಡಿದ್ದರು. ನಂತರ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ, ಟಾಟಾ ಮೊರ್ಕೊಪೋಲೊ ಕಂಪನಿ ಕಾರ್ಮಿಕರಿಂದ ಮುಚ್ಚಳಿಕೆ ಪತ್ರಕ್ಕೆ ಸಹಿ ಮಾಡಿಸಿಕೊಳ್ಳುವ ತನ್ನ ನಿರ್ಧಾರವನ್ನು ಕೈ ಬಿಟ್ಟಿದ್ದು, ಪ್ರತಿಭಟನಾನಿರತ 1160 ಮಂದಿ ಕಾರ್ಮಿಕರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಒಪ್ಪಿಗೆ ನೀಡಿದೆ.

ಈ ಕುರಿತು ಮಾರ್ಕೊಪೋಲೊ ಕಾರ್ಮಿಕರು ಕೂಡ ಕಂಪನಿಯ ಕ್ಯಾಂಟೀನ್‌ನಲ್ಲಿ ಊಟ ಸೇವಿಸಿ ಕರ್ತವ್ಯ ನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ಆದರೆ ಈ ಹಿಂದಿನ ತಮ್ಮ ಕಾನೂನಾತ್ಮಕ ಹಕ್ಕಿನ ಎಲ್ಲ ವ್ಯಾಜ್ಯಗಳನ್ನು ಜಾರಿಯಲ್ಲಿರಿಸಿಕೊಂಡು ಕರ್ತವ್ಯ ನಿರ್ವಹಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಕಾರ್ಮಿಕ ಸಂಘ ಮತ್ತು ಟಾಟಾ ಮಾರ್ಕೊಪೋಲೊ ಕಂಪನಿ ನಡುವಿನ ಔದ್ಯೋಗಿಕ ಶಾಂತಿಯನ್ನು ಬಯಸಿದ್ದು, ಶಿಸ್ತು ಕಾಪಾಡಿಕೊಂಡು ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದು ಕಾರ್ಮಿಕರು ಹೇಳಿದ್ದಾರೆ.

ಈ ಬಗ್ಗೆ ಟಾಟಾ-ಮಾರ್ಕೊಪೋಲೋ ಕ್ರಾಂತಿಕಾರಿ ಕಾರ್ಮಿಕ ಸಂಘದ (ಟಿಯುಸಿಐ) ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್‌ ಮರಿತಮ್ಮಣ್ಣನವರ್‌ ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿ, "ನಮ್ಮ ಹೋರಾಟ ಬೆಂಗಳೂರಿಗೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕಾರ್ಮಿಕ ಸಚಿವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಶಾಸಕರಾದ ಸಿ ಎಂ ನಿಂಬಣ್ಣ, ಅಮೃತ್‌ ದೇಸಾಯಿ, ಮಾಜಿ ಶಾಸಕರಾದ ಪ್ರಸಾದ್‌ ಅಬ್ಬಯ್ಯ ಅವರುಗಳ ಸ್ಪಂದನೆಯಿಂದ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು" ಎಂದರು.

Image
ಟಾಟಾ ಮಾರ್ಕೊಪೋಲೊ ಕಂಪನಿ ಕಾರ್ಮಿಕರಿಗೆ ಕರ್ತವ್ಯ ನಿರ್ವಹಿಸಲು ಒಪ್ಪಿಗೆ ನೀಡಿರುವ (ಬಲ) ಹಾಗೂ ಕಾರ್ಮಿಕರ ಸಂಘ ಕ್ಯಾಂಟೀನ್‌ ಊಟ ಸೇವಿಸಿ ಕರ್ತವ್ಯ ನಿರ್ವಹಿಸಲು ಒಪ್ಪಿರುವ (ಎಡ) ಪತ್ರ

"ನಮ್ಮ ಪ್ರಮುಖ ಬೇಡಿಕೆ ಕಾರ್ಮಿಕರನ್ನು ಲಾಕ್‌ಔಟ್‌ ಮಾಡಿರುವುದನ್ನು ಹಿಂಪಡೆಯಬೇಕು ಹಾಗೂ ಮುಚ್ಚಳಿಕೆಗೆ ಸಹಿ ಹಾಕುವುದಿಲ್ಲ ಎಂಬುದಾಗಿತ್ತು. ಅದಕ್ಕೆ ಸಚಿವರ ನಿರ್ದೇಶನದಂತೆ ಕಂಪನಿಯೂ ಒಪ್ಪಿಗೆ ನೀಡಿತು ಹಾಗಾಗಿ ಕಾರ್ಮಿಕರೆಲ್ಲ ಮುಚ್ಚಳಿಕೆ ಪತ್ರಕ್ಕೆ ಸಹಿ ಮಾಡದೆ 1160 ಜನ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಕಂಪನಿಯ ಕ್ಯಾಂಟೀನ್‌ನಲ್ಲಿ ಉಪಹಾರ ಮತ್ತು ಊಟ ತಿಂದು ಕೆಲಸ ಮಾಡುತ್ತಿದ್ದೇವೆ. ಉಳಿದಂತೆ, ವೇತನ ಹೆಚ್ಚಳ, ಬಡ್ತಿ ಕುರಿತಂತೆ ಇರುವ ವ್ಯಾಜ್ಯಗಳನ್ನು ಕಾನೂನಾತ್ಮಕವಾಗಿ ಮುಂದುವರೆಸುತ್ತೇವೆ" ಎಂದರು.

ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ | 170ನೇ ದಿನಕ್ಕೆ ಕಾಲಿಟ್ಟ ಧರಣಿ; ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ

ಹೋರಾಟದ ಹಿನ್ನೆಲೆ 

ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಮಾರ್ಕೊಪೋಲೊ ಕಂಪನಿಯ ಕಾರ್ಮಿಕರ ವೇತನ ಹೆಚ್ಚಳ, ಬಡ್ತಿ ಕುರಿತಂತಹ ಬೇಡಿಕೆಗಳ ಈಡೇರಿಕೆ ವಿರೋಧ ವ್ಯಕ್ತಪಡಿಸಿದ್ದ ಕಂಪನಿ ಕಾರ್ಮಿಕರು ಸಂಘಟನೆ ಮಾಡುವುದನ್ನ ನಿಲ್ಲಿಸಬೇಕು. ಕಂಪನಿ ನೀಡಿರುವ ವೇತನ ನಿಯಮವನ್ನು ಒಪ್ಪಿ ಕಾರ್ಯನಿರ್ವಹಿಸುವುದಾಗಿ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಬೇಕು. ಒಪ್ಪದಿದ್ದವರಿಗೆ ಕಾರ್ಖಾನೆಯೊಳಗೆ ಪ್ರವೇಶ ನಿರಾಕರಿಸಿ ಕಂಪನಿ ಲಾಕ್‌ಔಟ್‌ ಮಾಡಲಾಗಿತ್ತು. ಇದನ್ನು ಖಂಡಿಸಿ 1160 ಮಂದಿ ಕಾರ್ಮಿಕರು 80 ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್