
- ಬೆಂಗಳೂರು ಟೆಕ್ ಸಮ್ಮಿಟ್-2022 ಸಮಾವೇಶಕ್ಕೆ ತೆರೆ
- ಯೂನಿಕಾರ್ನ್ ಅಭಿನಂದನೆ, ಪ್ರಶಸ್ತಿ ಪ್ರದಾನ ಮಾಡಿದ ಸಿಎಂ
ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಾಗಿರದೇ, ಮುಂದಿನ 5 ವರ್ಷಗಳಲ್ಲಿ ದೇಶದ ಆರ್ಥಿಕತೆಯ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ಟೆಕ್ ಸಮ್ಮಿಟ್ 2022 ರ ಸಮಾರೋಪ ಸಮಾರಂಭದಲ್ಲಿ ಯೂನಿಕಾರ್ನ್ಗಳ ಅಭಿನಂದನಾ ಪತ್ರ ಮತ್ತು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
“ಕರ್ನಾಟಕ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸ್ಟಾರ್ಟ್ ಅಪ್ ಗಳಲ್ಲಿ ಉತ್ತಮ ಸ್ಥಾನದಲ್ಲಿದೆ. ಬಿಯಾಂಡ್ ಬೆಂಗಳೂರು ಅಭಿವೃದ್ಧಿಯಾಗಬೇಕು. ಕೃಷಿ, ತಂತ್ರಜ್ಞಾನ, ಆರ್ಥಿಕತೆ ಹೀಗೆ ಎಲ್ಲ ರಂಗಗಳಲ್ಲಿಯೂ ಕರ್ನಾಟಕ ಹಾಗೂ ಬೆಂಗಳೂರು ಅತ್ಯುತ್ತಮ ಶ್ರೇಯಾಂಕ ಹೊಂದಿದೆ. ಇದರಿಂದಾಗಿ ನಮ್ಮ ಜವಾಬ್ದಾರಿಯೂ ಹೆಚ್ಚಿದೆ” ಎಂದರು.
“ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವುದರ ಜೊತೆಗೆ ಪ್ರಥಮ ಸ್ಥಾನವನ್ನು ಕಾಯ್ದಿರಿಸಿಕೊಂಡಿರುವುದು ಸವಾಲಿನ ಕೆಲಸ. ಇದಕ್ಕಾಗಿ ದೊಡ್ಡ ಪ್ರಮಾಣದ ಪರಿಶ್ರಮ ಬೇಕಾಗಿದೆ. ಈ ನಿಟ್ಟಿನಲ್ಲಿ ನಾಡಿನ ಇಂಜಿನಿಯರ್ಸ್, ವಿಜ್ಞಾನಿಗಳು ಹಾಗೂ ಅವರ ಪರಿಶ್ರಮದ ಮೇಲೆ ನನಗೆ ನಂಬಿಕೆಯಿದೆ” ಎಂದರು.
“ಬೆಂಗಳೂರಿನಲ್ಲಿ ಎಲ್ಲರೂ ಒಟ್ಟುಗೂಡಿ ಟೆಕ್ ಸಮ್ಮಿಟ್ನ್ನು ಯಶಸ್ವಿಗೊಳಿಸಿದ್ದೇವೆ. ಇದನ್ನು ಮುಂದಕ್ಕೆ ಕೊಂಡೊಯ್ಯಬೇಕು. ಮೂರು ದಿನದ ಈ ಉತ್ಸವದ ಪಾಲ್ಗೊಂಡವರ ಭಾವನೆಗಳೇನು ಎನ್ನುವುದು ಬಹಳ ಮುಖ್ಯ. ಚಿಂತನೆಗಳು ತಂತ್ರಜ್ಞಾನದ ಜೊತೆಗೂಡಿದೆ. ಕ್ರಿಯೆಗೆ ಗುರಿಯನ್ನು, ಅಭಿವೃದ್ಧಿಗೆ ಶ್ರಮ, ನಾಯಕತ್ವ, ಸುಸ್ಥಿರತೆ, ಸ್ನೇಹಕ್ಕೆ ಸಂಬಂಧ ಹಾಗೂ ಬೆಂಗಳೂರನ್ನು ಬೆಂಗಳೂರು ಭೇಟಿಯಾಗಿದೆ. ಬೆಂಗಳೂರು ಎಂದರೆ ಬಂಗಾರದ ಊರು. ಬಂಗಾರದಂಥ ಹೃದಯವುಳ್ಳ ಜನರ ನಗರವಿದು” ಎಂದು ಬಣ್ಣಿಸಿದರು.
ಈ ಸುದ್ದಿ ಓದಿದ್ದೀರಾ? ಮತದಾರರ ಮಾಹಿತಿಗೆ ಕನ್ನ | ಚಿಲುಮೆ ಸಂಸ್ಥೆ ಮೇಲೆ ಪೊಲೀಸರ ದಾಳಿ, ನಾಲ್ವರ ಬಂಧನ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್, ಐಟಿಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸ್ಟಾರ್ಟ್ ಅಪ್ ವಿಷನ್ ಗುಂಪಿನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಐಟಿಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣ ರೆಡ್ಡಿ, ಐಟಿಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಇತರರು ಉಪಸ್ಥಿತರಿದ್ದರು.