
- ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ದರೈಸ್ತ್ರೀ ಪ್ರಶಸ್ತಿ
- ಏಪ್ರಿಲ್ 10ರಂದು ತುಮಕೂರಿನಲ್ಲಿ ಪ್ರಶಸ್ತಿ ಪ್ರದಾನ
ತುಮಕೂರಿನ ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಪ್ರತಿವರ್ಷ ನೀಡುವ ರಾಜ್ಯಮಟ್ಟದ ದರೈಸ್ತ್ರೀ ಪ್ರಶಸ್ತಿ ಈ ಬಾರಿ ಸಾಹಿತಿ, ನಾಡೋಜ ಡಾ ಬರಗೂರು ರಾಮಚಂದ್ರಪ್ಪ ಅವರ ಮುಡಿಗೇರಲಿದೆ. ಈ ಕುರಿತು ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ರಾಮಚಂದ್ರಪ್ಪ ಮತ್ತು ಕಾರ್ಯದರ್ಶಿ ಡಾ ಶಿವಣ್ಣ ತಿಮ್ಲಾಪುರ ಅವರು ತಿಳಿಸಿದ್ದಾರೆ.
ಕವಿ ಕೆ ಬಿ ಸಿದ್ದಯ್ಯ ಅವರಿಂದ ಸ್ಥಾಪಿತವಾಗಿರುವ ದರೈಸ್ತ್ರೀ ಪ್ರಶಸ್ತಿಯನ್ನು ದಲಿತರು, ರೈತರು ಮತ್ತು ಸ್ತ್ರೀಯರನ್ನು ಪ್ರತಿನಿಧಿಸಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಪ್ರತಿ ವರ್ಷ ಕೊಡಲಾಗುತ್ತಿದೆ. ಈವರೆಗೂ ಮೂವರಿಗೆ ದರೈಸ್ತ್ರೀ ಪ್ರಶಸ್ತಿ ನೀಡಲಾಗಿದೆ. 2021-22ನೇ ಸಾಲಿನ ವರ್ಷದ ದರೈಸ್ತ್ರೀ ಪ್ರಶಸ್ತಿ ಬರಗೂರು ರಾಮಚಂದ್ರಪ್ಪರಿಗೆ ಸಂದಿದೆ.
ಮೂಲತಃ ತುಮಕೂರು ಜಿಲ್ಲೆಯ ಬರಗೂರು ಗ್ರಾಮದವರಾದ ಬರಗೂರು ರಾಮಚಂದ್ರಪ್ಪ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರ, ಸಿನಿಮಾ ಕ್ಷೇತ್ರ, ಕನ್ನಡ ಚಳವಳಿ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿರುವುದು ಮಾತ್ರವಲ್ಲ, 2018ರಲ್ಲಿ ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
ಸದಾ ತಳಮಟ್ಟದ ಜನರ ನೋವುಗಳಿಗೆ ತುಡಿಯುವ, ಚಿಂತಿಸುವ ಮನಸ್ಸು ಬರಗೂರು ರಾಮಚಂದ್ರಪ್ಪ ಅವರನ್ನು ಜನ ಬಂಡಾಯ ವ್ಯಕ್ತಿತ್ವದ ಸಾಹಿತಿಯಾಗಿ, ಮಾತುಗಾರರಾಗಿ ಗುರುತಿಸುತ್ತಾರೆ.
ಪ್ರಶಸ್ತಿ ಆಯ್ಕೆ ಸಮಿತಿ
ಡಾ. ರಾಜಪ್ಪ ದಳವಾಯಿ, ಬಾ ಹ ರಮಾಕುಮಾರಿ ಮತ್ತು ಟಿ ಎಸ್ ವಿವೇಕಾನಂದ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಬರಗೂರು ರಾಮಚಂದ್ರಪ್ಪ ಅವರನ್ನು ವರ್ಷದ ದರೈಸ್ತ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಟ್ರಸ್ಟ್ ಅಧ್ಯಕ್ಷ ರಾಮಚಂದ್ರಪ್ಪ ಹೇಳಿದ್ದಾರೆ.
ಏಪ್ರಿಲ್ 10ರಂದು ತುಮಕೂರಿನ ಕನ್ನಡ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದರೈಸ್ತ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.