ಬೇಸ್‌ ಕ್ಯಾಂಪಸ್‌ ಉದ್ಘಾಟನೆ: ಹಳೆಯ ಯೋಜನೆಗೆ ಹೊಸ ನಾಮಕರಣ ತಂತ್ರ ಪ್ರಯೋಗಿಸಿದರೆ ಮೋದಿ?

ಬೇಸ್‌ ಸಂಸ್ಥೆಯ ಉದ್ಘಾಟನೆಯ ವಿಷಯದಲ್ಲಿ ಬಿಜೆಪಿ ಮತ್ತು ಬಿಜೆಪಿಯ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮ ಪಟ್ಟಿ, ಆಹ್ವಾನ ಪತ್ರಿಕೆಗಳಲ್ಲಿ ಬೇಸ್ ಸಂಸ್ಥೆಯ ಉದ್ಘಾಟನೆ ಎಂದು ಪ್ರಚುರಪಡಿಸಿದ್ದು, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರ ತೀವ್ರ ಟೀಕೆಗೆ ಗುರಿಯಾಯಿತು.

ಬೆಂಗಳೂರಿಗೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ಡಾ ಬಿ ಆರ್ ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕನಾಮಿಕ್ಸ್ ಸಂಸ್ಥೆ(ಬೇಸ್)ಯನ್ನು ಉದ್ಘಾಟಿಸುತ್ತಿರುವುದು ವಿವಾದಕ್ಕೊಳಗಾಗಿದೆ.

ಈಗಾಗಲೇ ಉದ್ಘಾಟನೆಯಾಗಿ, ವಿದ್ಯಾರ್ಥಿಗಳ ಮೂರು ತಂಡಗಳು ಪದವಿ ಪಡೆದು ಉತ್ತೀರ್ಣರಾಗಿ ಹೊರಹೋದ ಬಳಿಕ ಮತ್ತೆ ಸಂಸ್ಥೆಯನ್ನು ಮರು ಉದ್ಘಾಟಿಸುತ್ತಿರುವುದರ ಔಚಿತ್ಯವೇನು ಎಂಬ ಪ್ರಶ್ನೆ ಪ್ರತಿಪಕ್ಷಗಳು ಮಾತ್ರವಲ್ಲದೆ ಶೈಕ್ಷಣಿಕ ವಲಯದಿಂದಲೂ ಕೇಳಿಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ರಾಜ್ಯ ಭೇಟಿಯ ಮೊದಲ ದಿನ ಬೆಂಗಳೂರಿನ ಜ್ಞಾನ ಭಾರತಿ ಆವರಣದಲ್ಲಿರುವ ಬೆಂಗಳೂರು ಡಾ ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕ್ಯಾಂಪಸ್ ಉದ್ಘಾಟಿಸಿದರು.

ಆದರೆ, ಈ ಉದ್ಘಾಟನೆಯ ವಿಷಯದಲ್ಲಿ ಬಿಜೆಪಿ ಮತ್ತು ಬಿಜೆಪಿಯ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮ ಪಟ್ಟಿ, ಆಹ್ವಾನ ಪತ್ರಿಕೆಗಳಲ್ಲಿ ಬೇಸ್ ಸಂಸ್ಥೆಯ ಉದ್ಘಾಟನೆ ಎಂದು ಪ್ರಚುರಪಡಿಸಿದ್ದು, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರ ತೀವ್ರ ಟೀಕೆಗೆ ಗುರಿಯಾಯಿತು.

ಈ ಬಗ್ಗೆ ಸರಣಿ ಟ್ವೀಟ್ ಮೂಲಕ ತೀವ್ರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, 2016ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸಕ್ತಿಯ ಕಾರಣಕ್ಕೆ ಅಂಬೇಡ್ಕರ್‌ ಅವರ 125ನೇ ಜಯಂತಿಯ ಅಂಗವಾಗಿ ಸ್ಮರಣೀಯವಾದ ಕಾರ್ಯವೊಂದನ್ನು ಕೈಗೆತ್ತಿಕೊಳ್ಳಲು ಅಂದಿನ ಸಚಿವ ಸಂಪುಟ ಚಿಂತನೆ ನಡೆಸಿತ್ತು ಎಂದು ಬೇಸ್ ಸಂಸ್ಥೆಯನ್ನು ಕಟ್ಟಿದ ಹಿಂದಿನ ಇತಿಹಾಸ ಬಿಚ್ಚಿಟ್ಟಿದ್ದಾರೆ.

ಜಾಗತಿಕ ಖ್ಯಾತಿಯ ಲಂಡನ್ ಸ್ಕೂಲ್ ಆಫ್‌ ಎಕಾಮಿಕ್ಸ್ ಸಂಸ್ಥೆಯಲ್ಲಿ ಅರ್ಥಶಾಸ್ತ್ರವನ್ನು ಕಲಿತ ಮೊದಲ ಭಾರತೀಯರಾದ ಬಾಬಾ ಸಾಹೇಬರು ನಂತರ ನೆಹರೂ ಅವರ ಸಚಿವ ಸಂಪುಟದಲ್ಲಿ ಅರ್ಥಶಾಸ್ತ್ರವನ್ನು ಶೈಕ್ಷಣಿಕವಾಗಿ ಅಧ್ಯಯನ ಮಾಡಿದ ಏಕೈಕ ಸಚಿವರಾಗಿಯೂ ಇದ್ದರು. ಆ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರಕ್ಕೆ ಅಂಬೇಡ್ಕರರ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಿಶ್ವದರ್ಜೆಯ ಅರ್ಥಶಾಸ್ತ್ರ ಅಧ್ಯಯನ ವಿವಿಯನ್ನು ಆರಂಭಿಸಲು ಸಚಿವ ಸಂಪುಟ ಹಲವು ಸಭೆಗಳ ಬಳಿಕ ತೀರ್ಮಾನ ಕೈಗೊಂಡಿತು. ಅಂತಹ ನಿರ್ಧಾರವನ್ನು ಶೀಘ್ರಗತಿಯಲ್ಲಿ ತಜ್ಞರ ಸಲಹೆ-ಸಹಕಾರದೊಂದಿಗೆ ವಾಸ್ತವವಾಗಿ ಕಾರ್ಯರೂಪಕ್ಕೆ ತಂದವರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಬದ್ಧತೆ ಮತ್ತು ಇಚ್ಛಾಶಕ್ತಿಯ ಕಾರಣದಿಂದ ಬೆಂಗಳೂರಿನಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯ ಒಂದು ಜಾಗತಿಕ ಅಧ್ಯಯನ ಸಂಸ್ಥೆ ತಲೆ ಎತ್ತಿತು ಎಂದು ಪ್ರಿಯಾಂಕ್ ಟ್ವೀಟ್ ನಲ್ಲಿ ಬೇಸ್ ಸ್ಥಾಪನೆಯ ವಿವರಗಳನ್ನು ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ, ತಮ್ಮ ಅವಧಿಯಲ್ಲಿ ಬೇಸ್ ಸ್ಥಾಪನೆಯ ಕುರಿತು ನಡೆಸಿದ ಪ್ರಯತ್ನಗಳು, ಆ ಬಳಿಕ ಅದರ ಶಂಕುಸ್ಥಾಪನೆ, ಮತ್ತು ತರಗತಿಗಳ ಪ್ರಾರಂಭೋತ್ಸವದಂತಹ ಮಾಹಿತಿಯನ್ನು ಉಲ್ಲೇಖಿಸಿ, ತಮ್ಮ ಕನಸಿನ ಯೋಜನೆಯನ್ನು ಕೇವಲ ಆರು ತಿಂಗಳಲ್ಲೇ ಸಾಕಾರಗೊಳಿಸಿದ್ದೆವು. ಇದೀಗ ಆ ಸಂಸ್ಥೆಯ ನೂತನ ಕ್ಯಾಂಪಸ್ಸನ್ನು ಪ್ರಧಾನಿ ಮೋದಿಯವರು ಉದ್ಘಾಟಿಸುತ್ತಿದ್ದಾರೆ. ಸಮಾರಂಭಕ್ಕೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್ ಆವರಣದಲ್ಲಿ 43.45 ಎಕರೆ ಪ್ರದೇಶದಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಬಾಬಾ ಸಾಹೇಬರ ಗೌರವಾರ್ಥ ಬೇಸ್ ಸಂಸ್ಥೆಯನ್ನು ಸ್ಥಾಪಿಸಿದ್ದು ತಮ್ಮ ಸರ್ಕಾರದ ಹೆಮ್ಮೆಯ ಸಾಧನೆ ಎಂದಿರುವ ಸಿದ್ದರಾಮಯ್ಯ, ಕೇವಲ ಆರು ತಿಂಗಳಲ್ಲಿ ಹಣ ಬಿಡುಗಡೆ ಮಾಡಿ, ಶಂಕುಸ್ಥಾಪನೆ ನೆರವೇರಿಸಿ, ಮೊದಲ ಬ್ಯಾಚ್ ತರಗತಿಗಳನ್ನೂ ಆರಂಭಿಸಿದ್ದು ತಾವು ಎಂಬುದನ್ನು ನೆನಪಿಸಿದ್ದಾರೆ.

2017ರ ಏಪ್ರಿಲ್ 14ರಂದು ಅಂಬೇಡ್ಕರ್ ಅವರ 125ನೇ ಜನ್ಮ ಜಯಂತಿಯಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜ್ಞಾನಭಾರತಿ ಆವರಣದಲ್ಲಿ ಬೇಸ್ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಸಂಸದ ಅನಂತಕುಮಾರ್, ಕೇಂದ್ರ ಸಚಿವ ಸದಾನಂದ ಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಅದಾಗಿ ಆರು ತಿಂಗಳಲ್ಲಿ ಅಕ್ಟೋಬರ್ 4ರಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಬೇಸ್‌ನ ಮೊದಲ ವರ್ಷದ ತರಗತಿಗಳಿಗೆ ಚಾಲನೆ ನೀಡುವ ಮೂಲಕ ಬೆಂಗಳೂರು ಅಂಬೇಡ್ಕರ್‌ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಬ ಉನ್ನತ ಶಿಕ್ಷಣ ಸಂಸ್ಥೆಗೆ ಅಧಿಕೃತ ಚಾಲನೆ ನೀಡಿದ್ದರು.

ಜಾಗತಿಕ ಮಟ್ಟದಲ್ಲಿ ಸರ್ವಶೇಷ್ಠ ಅರ್ಥಶಾಸ್ತ್ರ ಅಧ್ಯಯನ ಕೇಂದ್ರವಾಗಿರುವ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಮಾದರಿಯಲ್ಲಿ ದೇಶದಲ್ಲೇ ಮೊದಲನೆಯದಾಗಿ ಜಾಗತಿಕ ಗುಣಮಟ್ಟದ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆ ಕಟ್ಟುವ ಕನಸು ಹಿಂದಿನ ಸಿದ್ದರಾಮಯ್ಯ ಸರ್ಕಾರದ್ದು. ಆ ಕನಸನ್ನು ನನಸಾಗಿಸಲು ಹಣಕಾಸು ಬೆಂಬಲದೊಂದಿಗೆ ರಾಜಕೀಯ ಇಚ್ಛಾಶಕ್ತಿ ತೋರಿಸಿ, ಅದನ್ನು ಸಾಕಾರಗೊಳಿಸಿದ್ದು ಅದೇ ಸಿದ್ದರಾಮಯ್ಯ ಸರ್ಕಾರ. ಆದರೆ, ಇದೀಗ ಆ ಸಂಸ್ಥೆಯ ಕ್ಯಾಂಪಸ್ ಉದ್ಘಾಟನೆಯ ನೆಪದಲ್ಲಿ ಪ್ರಚಾರ ಪಡೆಯುತ್ತಿರುವುದು ಮಾತ್ರ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷ. ಇದು ಯಾವ ರೀತಿಯ ಪ್ರಚಾರದ ಹಪಾಹಪಿ ಎಂಬುದು ಕಾಂಗ್ರೆಸ್ ನಾಯಕರ ಸರಣಿ ಪ್ರಶ್ನೆಗಳ ಹಿಂದಿನ ವಾದ.

“ಪ್ರಧಾನಮಂತ್ರಿಗಳ ಘನತೆಗೆ ತಕ್ಕಂತಹ ಯಾವುದೇ ಯೋಜನೆಗಳು ಇಲ್ಲದೆ, ಕಾಂಗ್ರೆಸ್ ಸರ್ಕಾರದ ಅವಧಿಯ ಯೋಜನೆ, ಕಾರ್ಯಕ್ರಮಗಳನ್ನು ಮತ್ತೆ ಮರು ಹೊಸ ಹೆಸರಲ್ಲಿ ಉದ್ಘಾಟನೆ ಮಾಡುತ್ತಿರುವುದು ಹಾಸ್ಯಾಸ್ಪದ” ಎಂದು ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದರು.

Image

ವಿವಾದದ ಕುರಿತು ಪ್ರತಿಕ್ರಿಯೆ ಪಡೆಯಲು ಈ ದಿನ.ಕಾಮ್ ಸಂಪರ್ಕಿಸಿದಾಗ, ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2017ರಲ್ಲೇ ಆರಂಭಿಸಿ, ಅಧಿಕೃತವಾಗಿ ಉದ್ಘಾಟನೆಯನ್ನೂ ನೆರವೇರಿಸಿದ ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕನಾಮಿಕ್ಸ್ ಸಂಸ್ಥೆಗೆ ಇದೀಗ ಮೋದಿಯವರು ಮತ್ತೆ ಉದ್ಘಾಟನೆ ಮಾಡುತ್ತಿರುವುದು, ಹೆತ್ತವರು ತಮ್ಮ ಮಗುವಿಗೆ ಹೆಸರಿಟ್ಟು ನಾಮಕರಣ ಮಾಡಿದ ಬಳಿಕ, ಇನ್ಯಾರೋ ಮತ್ತೆ ನಾಮಕರಣ ಮಾಡಿದಂತಾಗಿದೆ” ಎಂದು ಹೇಳಿದರು.

“ನಮ್ಮ ಅವಧಿಯಲ್ಲಿ ನಾವು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯನ್ನು ಸಂಪರ್ಕಿಸಿ, ಬೇಸ್‌ನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಅವರ ಅಧಿಕೃತವಾಗಿ ಸಹಭಾಗಿತ್ವಕ್ಕೆ ಕೋರಿದ್ದೆವು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆದಾಗ್ಯೂ ತಮ್ಮ ಪಠ್ಯಕ್ರಮ ಮತ್ತು ವಿಷಯ ತಜ್ಞರ ಸಹಕಾರ ನೀಡುವುದಾಗಿ ಆ ಸಂಸ್ಥೆ ಹೇಳಿತ್ತು. ಸಂಸ್ಥೆ ಆರಂಭವಾಗಿ ಈ ಐದು ವರ್ಷಗಳಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂತಹ ಹಲವು ನೆರವು, ಸಹಕಾರ ನೀಡಿದೆ. ಆದರೆ, ಅಂತಹ ಶೈಕ್ಷಣಿಕ ಮಹತ್ವದ ಅರಿವಿರದ ಬಿಜೆಪಿ ಸರ್ಕಾರ, ಇದೀಗ ಆ ಘನ ಸಂಸ್ಥೆಯನ್ನು ಕೇವಲ ಒಂದು ಪದವಿ ಕಾಲೇಜು ಎಂಬಂತೆ ಪರಿಗಣಿಸುತ್ತಿರುವುದು ದುರಂತ. ಜಾಗತಿಕ ಮಟ್ಟದಲ್ಲಿ ಸಂಸ್ಥೆ ಬೆಳೆಯಬೇಕು ಎಂಬ ಸದುದ್ದೇಶದಿಂದ ಗವರ್ನಿಂಗ್ ಕೌನ್ಸಿಲ್‌ನಲ್ಲಿ ಸ್ಯಾಮ್ ಪಿತ್ರೊಡಾ, ಸುಧಾ ಮೂರ್ತಿ, ಕಿರಣ್ ಮಜುಂದಾರ್ ಶಾ ಸೇರಿದಂತೆ ಹಲವು ತಜ್ಞರು ಮತ್ತು ಜಾಗತಿಕ ಮಾನ್ಯತೆಯ ಗಣ್ಯರನ್ನು ಒಳಗೊಳ್ಳಲಾಗಿತ್ತು. ಆದರೆ, ಈಗಿನ ಬಿಜೆಪಿ ಬಸವರಾಜ ಹೊರಟ್ಟಿ ಅವರ ಪುತ್ರ ಸೇರಿದಂತೆ ಪಕ್ಷದ ಮುಖಂಡರು, ಪ್ರಮುಖ ಮಕ್ಕಳನ್ನು ತಂದು ಕೂರಿಸಿ ಘನತೆಗೆ ಮಸಿ ಬಳಿದಿದೆ” ಎಂದು ಪ್ರಿಯಾಂಕ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ನರೇಂದ್ರ ಮೋದಿ ರಾಜ್ಯ ಪ್ರವಾಸ| ಬಿಜೆಪಿ ನಾಯಕರಿಂದ ಆತ್ಮೀಯ ಸ್ವಾಗತ, ಮಿದುಳು ಸಂಶೋಧನಾ ಕೇಂದ್ರ ಉದ್ಘಾಟನೆ

“ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿ ಎಂದರೆ ಏನೆಂಬುದು ಈಗಿನ ಸರ್ಕಾರಕ್ಕೆ ಗೊತ್ತಿಲ್ಲ. ಇಡೀ ದೇಶದಲ್ಲಿ ಇಂದಿಗೂ ನಮ್ಮ ಆರ್ಥಿಕ ನೀತಿ ಮತ್ತು ಚಿಂತನೆಗಳನ್ನು ಹೊರಗಿನಿಂದ ಎರವಲು ಪಡೆಯಲಾಗುತ್ತಿದೆ. ನಾವು ಸ್ಥಳೀಯವಾಗಿ, ದೇಶೀಯವಾಗಿ ಆರ್ಥಿಕ ಚಿಂತನೆಗಳನ್ನು, ಯೋಜನೆಗಳನ್ನು ರೂಪಿಸುವ ಪ್ರಯತ್ನವಾಗಿ ಆ ಸಂಸ್ಥೆ ಆರಂಭಿಸಿದ್ದೆವು. ಇದೊಂದು ಇಡೀ ದೇಶದ ಆರ್ಥಿಕ ನೀತಿಗಳನ್ನು ರೂಪಿಸುವ ಚಿಂತನ ಕೇಂದ್ರವಾಗಿ ರೂಪುಗೊಳ್ಳಬೇಕು. ಬಡವರು ಮತ್ತು ಮಧ್ಯಮವರ್ಗದ ಪ್ರತಿಭಾವಂತರಿಗೆ ದೇಶೀಯವಾಗಿಯೇ ಜಾಗತಿಕ ಗುಣಮಟ್ಟದ ಅರ್ಥಶಾಸ್ತ್ರದ ಅರಿವು ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ಈ ಸರ್ಕಾರ ಅಂಬೇಡ್ಕರ್ ಹೆಸರಿನ ಸಂಸ್ಥೆಗೇ ಅವಮಾನ ಮಾಡುತ್ತಿದೆ ಎಂದು ಅವರು ಹೇಳಿದರು.

ವಾಸ್ತವವಾಗಿ ಪ್ರಧಾನಮಂತ್ರಿಯೊಬ್ಬರು ಬಂದು ಉದ್ಘಾಟಿಸುವಂತಹ ಮಹತ್ವದ ಯೋಜನೆಗಳೇ ಈ ಸರ್ಕಾರದ ಮುಂದಿಲ್ಲ. ಆದರೂ ಚುನಾವಣೆ ಮೇಲೆ ಕಣ್ಣಿಟ್ಟು ಜನರಕಣ್ಣಿಗೆ ಮಣ್ಣೆರಚಲು ಇಂತಹ ತಂತ್ರಗಳನ್ನು ಈ ಸರ್ಕಾರ ಹೂಡಿದೆ. ಹಾಗಾಗಿ ಹಿಂದಿನ ಸರ್ಕಾರಗಳ ಕನಸಿನ ಯೋಜನೆ ಬೇಸ್ ಹಾಸ್ಟೆಲ್ ಉದ್ಘಾಟನೆಯನ್ನು ಕ್ಯಾಂಪಸ್ ಉದ್ಘಾಟನೆ ಎಂದು ಬಿಂಬಿಸಲಾಗುತ್ತಿದೆ. ಈಗಾಗಳೇ ಟಾಟಾ ಸಂಸ್ಥೆ ಆರಂಭಿಸಿರುವ ಐಟಿಐ ಉನ್ನತೀಕರಣ ಯೋಜನೆಯನ್ನೇ ತನ್ನದೇ ಯೋಜನೆ ಎಂದು ಬಿಂಬಿಸುತ್ತಿದೆ. ಹಿಂದಿನ ಸರ್ಕಾರಗಳ ಯೋಜನೆ, ಕಾರ್ಯಕ್ರಮಗಳ ಹೆಸರು ಬದಲಾಯಿಸಿ ಪ್ರಚಾರ ಪಡೆಯುವ ಕ್ಷುಲ್ಲಕ ತಂತ್ರ ಇಲ್ಲಿಯೂ ಮುಂದುವರಿದಿದೆ ಎಂದು ಪ್ರಿಯಾಂಕ್ ಅಭಿಪ್ರಾಯಪಟ್ಟರು.

ನಿಮಗೆ ಏನು ಅನ್ನಿಸ್ತು?
0 ವೋಟ್