ಬಿಬಿಎಂಪಿ ಚುನಾವಣೆ | ಮೀಸಲಾತಿ ಅನ್ಯಾಯದ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತೇವೆ: ಕಾಂಗ್ರೆಸ್‌ ಎಚ್ಚರಿಕೆ

Ramalingareddi
  • ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ: ರಾಮಲಿಂಗಾ ರೆಡ್ಡಿ
  • ಕಾಂಗ್ರೆಸ್ ಶಾಸಕರು, ಮಾಜಿ ಸದಸ್ಯರು ಗೆಲ್ಲದಂತೆ ಕುತಂತ್ರ: ಬಿಜೆಪಿ ವಿರುದ್ಧ ವಾಗ್ದಾಳಿ

ಬಿಬಿಎಂಪಿ ಚುನಾವಣೆಯಲ್ಲಿ ಎಸ್ಸಿ ಮತ್ತು ಎಸ್ಟಿ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡದೇ ಮನಸ್ಸಿಗೆ ಬಂದಂತೆ ಮಾಡಲಾಗಿದೆ. ಈ ರೀತಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿರುವುದು ಖಂಡನೀಯ. ಮೀಸಲಾತಿ ವಿರುದ್ಧ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನ್ಯಾಯಾಲಯವು 7 ದಿನಗಳ ಗಡುವು ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ. ಮೀಸಲಾತಿಯನ್ನು ಮಾಡಲು ಮಾರ್ಗಸೂಚಿ ಇದೆ. ಆದರೆ, ಈ ಮಾರ್ಗಸೂಚಿ ಪ್ರಕಾರ ಮೀಸಲಾತಿ ಮಾಡಿಲ್ಲ” ಎಂದು ದೂರಿದರು.

“ವಾರ್ಡ್‌ಗಳ ಮರುವಿಂಗಡಣೆಯನ್ನು ಬಿಜೆಪಿ ಶಾಸಕರು ಮತ್ತು ಸಂಸದರ ಅನುಕೂಲಕ್ಕೆ ತಕ್ಕಂತೆ ಮಾಡಿದ್ದರು. ವಾರ್ಡ್‌ಗಳ ಮರುವಿಂಗಡಣೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇರಬೇಕು. ಕಂದಾಯ ಅಧಿಕಾರಿಗಳು ಗಡಿಗಳನ್ನು ಗುರುತಿಸಿ ಮಾರ್ಗಸೂಚಿಯಂತೆ ವಿಂಗಡಣೆ ಮಾಡಬೇಕಿತ್ತು. ಆದರೆ, ಈ ಬಾರಿ ಈ ಸಮಿತಿಯ ಮುಖ್ಯಸ್ಥರಾಗಿದ್ದ ಆಯುಕ್ತರು ಒಂದೇ ಒಂದು ಸಭೆ ಮಾಡದೇ ಬಿಜೆಪಿ ಶಾಸಕರು, ಸಂಸದರ ಕಚೇರಿ, ಕೇಶವಕೃಪದಲ್ಲಿ ಮಾಡಿದ್ದರು” ಎಂದು ಆರೋಪಿಸಿದರು.

“ಇದಕ್ಕೆ ಸಂಬಂಧಿಸಿದಂತೆ 3 ಸಾವಿರಕ್ಕೂ ಹೆಚ್ಚು ಆಕ್ಷೇಪ ಸಲ್ಲಿಕೆಯಾಗಿತ್ತು. ಆದರೆ, ಅವುಗಳನ್ನು ಸರ್ಕಾರ ಪರಿಗಣಿಸದೇ ಬಿಜೆಪಿಯವರು ಮಾಡಿದ್ದಕ್ಕೆ ಒಪ್ಪಿಗೆ ನೀಡಿದರು. ಶಿವಾಜಿನಗರ, ಜಯನಗರ ಹಾಗೂ ಚಾಮಾರಜಪೇಟೆಯಲ್ಲಿ ಸಂಬಂಧವೇ ಇಲ್ಲದಂತೆ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆ ರಬ್ಬರ್ ಸ್ಟಾಂಪ್ ಆಗಿದೆ. ಅದು ಬಿಜೆಪಿ ಹಾಗೂ ಆರ್‌ಎಸ್ಎಸ್ ಕಚೇರಿ ಆಗಿದೆ. ಸಿಎಂ ಕಚೇರಿಯಿಂದ ಬಂದಿದ್ದನ್ನು ನೋಡದೇ ಅನುಮೋದನೆ ನೀಡಿದ್ದಾರೆ. ಈಗ ಮೀಸಲಾತಿ ಪಟ್ಟಿಯನ್ನು ಅದೇ ರೀತಿ ಮಾಡಿದ್ದಾರೆ” ಎಂದರು.

“ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಗಳು ಸ್ಪರ್ಧೆ ಮಾಡಬಾರದು ಎಂದು ಮೀಸಲಾತಿ ಪಟ್ಟಿ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ 9 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳಲ್ಲಿ ಮಹಿಳಾ ಮೀಸಲಾತಿ ನೀಡಿದ್ದಾರೆ. ಜಯನಗರದಲ್ಲಿ 6 ರಲ್ಲಿ 5 ಮಹಿಳೆಯರಿಗೆ ನೀಡಿದ್ದಾರೆ. ಗಾಂಧಿನಗರ ಕ್ಷೇತ್ರದಲ್ಲಿ 7ಕ್ಕೆ 7 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿ 6ರಲ್ಲಿ 5 ಮಹಿಳಾ ಮೀಸಲಾತಿ ನೀಡಿದ್ದಾರೆ. ಹೀಗೆ ಮನಸೋ ಇಚ್ಛೆ ಮಾಡಿದ್ದಾರೆ” ಎಂದು ದೂರಿದರು.

“65 ಸಾಮಾನ್ಯ ಕ್ಷೇತ್ರಗಳ ಪೈಕಿ 49 ಕ್ಷೇತ್ರಗಳು ಬಿಜೆಪಿ ಶಾಸಕರ ಕ್ಷೇತ್ರಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಇದನ್ನು ಸರ್ಕಾರ ಹಿಂಪಡೆಯಬೇಕು. ಕಾಂಗ್ರೆಸ್ ಶಾಸಕರು, ಮಾಜಿ ಸದಸ್ಯರು ಗೆಲ್ಲದಂತೆ ಒಂದು ಕಡೆ ಕುತಂತ್ರ ಮಾಡಿದರೆ, ಮತ್ತೊಂದೆಡೆ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಅವರಿಂದ ಸ್ಪರ್ಧೆ ಎದುರಾಗುತ್ತದೆ ಎಂದು ಅವರನ್ನು ಮುಗಿಸಲು ಸಂಚು ರೂಪಿಸಲಾಗಿದೆ” ಎಂದು ಹರಿಹಾಯ್ದರು.

“ಒಟ್ಟು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ 87 ವಾರ್ಡ್‌ಗಳಿದ್ದು, ಅದರಲ್ಲಿ 67 ವಾರ್ಡ್‌ಗಳು ಮಹಿಳಾ ಮೀಸಲಾತಿ ಮಾಡಲಾಗಿದೆ. ಜೆಡಿಎಸ್‌ನ 1 ವಿಧಾನಸಭಾ ಕ್ಷೇತ್ರದಲ್ಲಿ 12 ವಾರ್ಡ್‌ಗಳಿಂದ 9 ಮಹಿಳಾ ಮೀಸಲಾತಿ ನೀಡಲಾಗಿದೆ. ಬಿಜೆಪಿ ಮಹಿಳಾ ಮೀಸಲಾತಿಗೆ ವಿರೋಧವಿದ್ದು, ಈ ಮೂಲಕ ಅದನ್ನು ವ್ಯಕ್ತಪಡಿಸಿದ್ದಾರೆ” ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದ ಶಾಸಕ ಜಮೀರ್ ಅಹ್ಮದ್ ಖಾನ್, “ನನ್ನ ಕ್ಷೇತ್ರದಲ್ಲಿ 6ಕ್ಕೆ 6 ಮಹಿಳಾ ಮೀಸಲಾತಿ ಮಾಡಿದ್ದಾರೆ. ಆಜಾದ್ ನಗರದಲ್ಲಿ ಎಸ್ಟಿಗಳು 350ರಿಂದ 400 ಜನರಿದ್ದು, ಅಲ್ಲಿ ಎಸ್.ಟಿ ಮೀಸಲಾತಿ ನೀಡಿದ್ದಾರೆ. ವಾರ್ಡ್ ಮರುವಿಂಗಡಣೆಯಲ್ಲಿ ಅಧ್ವಾನ ಮಾಡಿದ್ದಾರೆ. ಚಾಮರಾಜಪೇಟೆ ಭಾಗವನ್ನು ಜಾಲಿ ಮೊಹಲ್ಲಾಗೆ, ಜಾಲಿ ಮೊಹಲ್ಲಾ ಭಾಗವನ್ನು ಸಿಟಿ ಮಾರುಕಟ್ಟೆ ಸೇರಿಸಿದ್ದಾರೆ. ಕಾಂಗ್ರೆಸ್‌ನವರು ಎಲ್ಲೂ ಗೆಲ್ಲದಂತೆ ಮರುವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ ಗೆಲ್ಲಲಿದೆ ಎಂಬ ಭಯಕ್ಕೆ ಈ ರೀತಿ ಮಾಡಿದ್ದಾರೆ” ಎಂದು ಆರೋಪಿಸಿದರು.

“ಇದು ಬೆಂಗಳೂರಿಗೆ ಮಾಡಿರುವ ದ್ರೋಹ. ಮೀಸಲಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾಶಸ್ತ್ಯ ಸಿಗಬಾರದು ಎಂದು ಮಾಡಲಾಗಿದೆ. ಪ್ರಾಮಾಣಿಕವಾಗಿ ಚುನಾವಣೆ ಮಾಡಿದರೆ ಗೆಲ್ಲುವುದಿಲ್ಲ ಎಂದು ಅವರಿಗೆ ಅರಿವಾಗಿದೆ. ಜನರ ನಾಡಿಮಿಡಿತ ಅವರಿಗೆ ತಿಳಿದು ಈ ರೀತಿ ಮಾಡಿದ್ದಾರೆ” ಎಂದು ರಿಜ್ವಾನ್ ಅರ್ಷದ್ ಆರೋಪಿಸಿದರು. 

ಈ ಸುದ್ದಿ ಓದಿದ್ದೀರಾ? ತೆವಳುತ್ತಿದ್ದ ಕಾಂಗ್ರೆಸ್ಸಿಗೆ ʼಬೂಸ್ಟರ್ ಡೋಸ್ʼ ಕೊಟ್ಟ ʼಸಿದ್ದರಾಮೋತ್ಸವʼ: ಅಸಲಿ ಆಟ ಈಗ ಶುರು!

 “ಬಿಜೆಪಿಯು ಸೋಲಿನ ಭೀತಿಯಿಂದ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಮೀಸಲಾತಿ ಪಟ್ಟಿ ಮಾಡಿದೆ. ಆ ಮೂಲಕ ಇಡೀ ಬೆಂಗಳೂರು ನಗರದ ಜನರ ಅವಕಾಶ ವಂಚನೆ ಮಾಡಲು ತೀರ್ಮಾನಿಸಿದೆ. ಇದನ್ನು ಉಗ್ರವಾಗಿ ವಿರೋಧಿಸುತ್ತೇವೆ. ಬೆಂಗಳೂರಿನ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗಳ ಕೈವಾಡ ಇದರಲ್ಲಿ ನೇರವಾಗಿದೆ. ಬೆಂಗಳೂರು ಬಿಜೆಪಿ ಶಾಸಕರ ಕೈಗೊಂಬೆಯಾಗಿ ಮುಖ್ಯಮಂತ್ರಿಗಳು ಕಾನೂನು ಉಲ್ಲಂಘಿಸಿ ಮೀಸಲಾತಿ ಆದೇಶ ಹೊರಡಿಸಿದ್ದಾರೆ. 7 ದಿನದಲ್ಲಿ ಗಡುವು ನೀಡಿದ್ದರೂ ಇವರು ಕಾಂಗ್ರೆಸ್ ಪ್ರಬಲ ಕ್ಷೇತ್ರಗಳಲ್ಲಿ ಸೋಲಿಸಲು ರಾಜಕೀಯ ಉದ್ದೇಶದಿಂದ ಮೀಸಲಾತಿ ಘೋಷಿಸಿಸಿದ್ದಾರೆ” ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದರು.

“ಸ್ವತಂತ್ರ ಭಾರತದ ಇತಿಹಾಸದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ದಾಖಲೆಯ ಮಟ್ಟಕ್ಕೆ ಹೆಚ್ಚಿದೆ. ಇದೆಲ್ಲ ಕಾರಣಕ್ಕೆ ಬಿಜೆಪಿ ನೇರ ಮಾರ್ಗದಲ್ಲಿ ಚುನಾವಣೆ ಮಾಡಿದರೆ ಗೆಲ್ಲುವುದಿಲ್ಲ ಎಂದು ಕಾನೂನು ಬಾಹಿರವಾಗಿ ತಮಗೆ ಇಚ್ಛಿಸಿದಂತೆ ವಾರ್ಡ್ ಮೀಸಲಾತಿ ಮಾಡಲಾಗಿದೆ. ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಸಿದ್ದಾರೆ. ಇದು ಬಿಜೆಪಿಯ ಹತಾಶೆಯನ್ನು ತೋರಿಸುತ್ತದೆ” ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಟೀಕಿಸಿದರು.

“ಬೆಂಗಳೂರು ನಗರಕ್ಕೆ ಬದಲಾವಣೆ ತರದೇ ಕಾಯ್ದೆ ತಂದರು. ಕಾಯ್ದೆ ಬಂದು ಒಂದು ವರ್ಷ ಆಗಿದ್ದರೂ ಮೀಸಲಾತಿ, ವಾರ್ಡ್ ಮರುವಿಂಗಡಣೆ ವಿಚಾರದಲ್ಲಿ ಗೊಂದಲ ಮೂಡಿಸಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಅವರ ಅಭ್ಯರ್ಥಿಗಳಿಗೆ ಅನುಕೂಲ ಮಾಡಲು ಈ ರೀತಿ ಮಾಡಿದ್ದಾರೆ. ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳು ಗೆಲ್ಲಬಾರದು ಎಂಬ ಕಾರಣಕ್ಕೆ ಮಾಡಿದ್ದಾರೆ. ಎಲ್ಲ ವರ್ಗದ ಜನರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ನೀಡಲಾಗುವುದು. ಬಿಜೆಪಿ ಕ್ಷೇತ್ರದಲ್ಲಿ ಬಿ ಸಿ ಬಿ ಇದೆ. ಎಲ್ಲಿ ಸಾಮಾನ್ಯ ವರ್ಗ ಹೆಚ್ಚಿದೆ ಅಲ್ಲಿ ಬಿ ಸಿ ಬಿ ನೀಡಿದ್ದಾರೆ. ಬಿಜೆಪಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಚಿಕ್ಕಪೇಟೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಇಲ್ಲ, ಗಾಂಧಿ ನಗರದಲ್ಲಿ ಎಲ್ಲ ವಾರ್ಡ್‌ಗಳ ಮೀಸಲಾತಿ ಮಹಿಳೆಯರಿಗೆ ನೀಡಿದ್ದಾರೆ” ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

“ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ಪಡೆಯುತ್ತಿದೆ. ಹಿಂದುಳಿದವರಿಗೆ ಮೀಸಲಾತಿ ನೀಡಿದ್ದೇವೆ. ಇಷ್ಟೆಲ್ಲಾ ಮಾಡಿದ ನಂತರ ಜನಪ್ರತಿನಿಧಿಗಳು ನೇರವಾಗಿ ಆಯ್ಕೆಯಾಗಬೇಕೇ ಹೊರತು, ವಾಮಮಾರ್ಗದ ಮೂಲಕ ಅಲ್ಲ. ಇದನ್ನು ನಾವು ಖಂಡಿಸುತ್ತೇವೆ. ಮೀಸಲಾತಿಗಳನ್ನು ಒಂದೇ ಕ್ಷೇತ್ರಗಳಿಗೆ ನೀಡಲಾಗಿದೆ. ಎಸ್ ಸಿ ಮೀಸಲಾತಿಗೆ ಅದರದೇ ಆದ ಮಾನದಂಡಗಳಿವೆ. ಜನಸಂಖ್ಯೆ ಇಲ್ಲದಿದ್ದರೂ ಅಲ್ಲಿ ಮೀಸಲಾತಿ ನೀಡಲಾಗಿದೆ” ಎಂದು ಎಚ್ ಎಂ ರೇವಣ್ಣ ವಿವರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್