ಬಿಬಿಎಂಪಿ| ಮಳೆಗಾಲಕ್ಕೆ ಮುನ್ನೆಚ್ಚರಿಕೆ ಕ್ರಮ: ನೂತನ ಆಯುಕ್ತ ತುಷಾರ್ ಗಿರಿನಾಥ್

  • ಪಾಲಿಕೆಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು
  • ನಗರದ ರಸ್ತೆಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಸಮಸ್ಯೆ, ಕಸ ವಿಲೇವಾರಿ ಹಾಗೂ ಮಳೆಯ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಸರಿದಾರಿಗೆ ತರಲು ಆದ್ಯತೆ ನೀಡಲಾಗುವುದು ಎಂದು ಬಿಬಿಎಂಪಿಯ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಮಾಜಿ ಆಯುಕ್ತ(ಬಿಬಿಎಂಪಿ) ಗೌರವ್ ಗುಪ್ತ ಅವರಿಂದ ʼಅಧಿಕಾರ ದಂಡʼ ಪಡೆದು ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ವಹಿಸಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಮಳೆಗಾಲದಲ್ಲಿ ಸಮಯದಲ್ಲಿ ಮಳೆ ನೀರಿನಿಂದ ಪ್ರವಾಹ ಪರಿಸ್ಥಿತಿ ಎದುರಾಗದಂತೆ, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ನಗರದಲ್ಲಿ ಕೋವಿಡ್‌ 4ನೇ ಅಲೆ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು” ಎಂದು ಹೇಳಿದರು.

ಬಿಬಿಎಂಪಿ ಆಡಳಿತ ಯಂತ್ರ ಸಮರ್ಥ

"ನಗರದಲ್ಲಿ ಹಲವು ವರ್ಷಗಳಿಂದ ಬಿಬಿಎಂಪಿ ಆಡಳಿತ ವ್ಯವಸ್ಥೆಯು ಸವಾಲುಗಳನ್ನು ಎದುರಿಸಿಕೊಂಡು ಬಂದಿದೆ. ಆಡಳಿತದ ಸಮಯದಲ್ಲಿ ಬೇರೆ ಬೇರೆ ಸವಾಲುಗಳು ಇದ್ದೆ ಇರುತ್ತವೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ಆಡಳಿತ ಯಂತ್ರ ಸಮರ್ಥವಾಗಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಗೃಹ ಸಚಿವರ ರಾಜೀನಾಮೆಗೆ ಆಗ್ರಹ | ಅರಗ ಜ್ಞಾನೇಂದ್ರ ತವರಿನಿಂದ ಕಾಂಗ್ರೆಸ್‌ ಪಾದಯಾತ್ರೆ

ರಸ್ತೆ ಗುಂಡಿ ಮಚ್ಚಲು ಕ್ರಮ

"ನಗರದ ರಸ್ತೆಗಳಲ್ಲಿ ಗುಂಡಿ ಬೀಳುತ್ತಿದ್ದಂತೆಯೇ ಅದನ್ನು ಮುಚ್ಚಬೇಕು. ಗುಂಡಿ ಮುಚ್ಚುವುದು ತಡವಾದರೆ ಅದು ಹಳ್ಳವಾಗುತ್ತದೆ. ರಸ್ತೆ ಗುಂಡಿಯ ಸಮಸ್ಯೆ ಸಾಮಾನ್ಯವಾಗಿ ಪ್ರತಿವರ್ಷವೂ ಇರುತ್ತದೆ. ಜನರು ಗುಂಡಿಗಳು ಇರದ ರಸ್ತೆಗಳನ್ನು ಬಯಸುತ್ತಾರೆ. ಅದರಂತೆಯೇ ನಗರದಲ್ಲಿ ಇರುವ ರಸ್ತೆಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚುವ ಕಾರ್ಯನಿರ್ವಹಿಸಲಾಗುವುದು" ಎಂದು ಹೇಳಿದರು.

ಜಲಮಂಡಳಿ ಅಧ್ಯಕ್ಷನಾಗಿ ಕಾರ್ಯ

"ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮತ್ತು ಜಲಮಂಡಳಿ ಅಧ್ಯಕ್ಷನಾಗಿ ಕೆಲಸ ಮಾಡಿದ ಅನುಭವ ಇದೆ. ಕೊಳವೆ ಅಳವಡಿಸಲು ಜಲಮಂಡಳಿ ಪಡುವ ಕಷ್ಟ. ಕೊಳವೆಗಾಗಿ ಅಗೆದ ರಸ್ತೆಯನ್ನು ಮುಚ್ಚಲು ಪಾಲಿಕೆ ಪಡುವ ಕಷ್ಟದ ಅರಿವಿದೆ. ಆದ್ದರಿಂದ, ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಲಾಗುವುದು" ಎಂದರು.

ಜನರ ಸಮಸ್ಯೆಗಳಿಗೆ ಪರಿಹಾರ

"ಸಾರ್ವಜನಿಕರ ಸಮಸ್ಯೆಗಳನ್ನು ಗಮನದಲ್ಲಿಟ್ಟಕೊಂಡು ಕಾರ್ಯನಿರ್ವಹಿಸಲಾಗುವುದು. ಜನರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುವ ಹಾಗೇ ಆಡಳಿತದಲ್ಲಿ ಸುಧಾರಣೆ ತರಲಾಗುವುದು. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಳ್ಳಲಾಗುವುದು" ಎಂದು ಹೇಳಿದರು.

ಪಾಲಿಕೆ ತನ್ನ ಜವಾಬ್ದಾರಿ ನಿರ್ವಹಿಸಲಿದೆ

"ಜನರಲ್ಲಿ ಪಾಲಿಕೆ ಏನೂ ಕೆಲಸ ಮಾಡುವುದಿಲ್ಲ ಎಂಬ ನಿರಾಶೆಯ ಭಾವನೆ ಬೇಡ. ಜನರ ಬೇಡಿಕೆಗೆ ತಕ್ಕಂತೆ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡುವುದು ಮತ್ತು ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು" ಎಂದು ಹೇಳಿದರು.

"ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ 30 ವರ್ಷ ಕರ್ತವ್ಯ ನಿರ್ವಹಿಸಿದ ಅನುಭವ ಇದೆ. ಪ್ರತಿ ಹುದ್ದೆಗೂ ತನ್ನದೇ ಆದ ಜವಾಬ್ದಾರಿ ಇದೆ. ಪಾಲಿಕೆಯಲ್ಲಿ ಸ್ವಾಯತ್ತತೆ ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ. ನಮ್ಮ ಕೆಲಸ ಪ್ರಾಮಾಣಿಕವಾಗಿದ್ದರೆ, ಜನರು ನಮ್ಮೊಂದಿಗೆ ಕೈಜೋಡಿಸುತ್ತಾರೆ. ಆಡಳಿತದಲ್ಲಿ ಒಂದೆರಡು ದಿನಗಳಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಶಕ್ತಿ ಮೀರಿ ಕಾರ್ಯನಿರ್ವಹಿಸಬೇಕು" ಎಂದರು.

ಬಳಿಕ ಮಾಜಿ ಆಯುಕ್ತ ಗೌರವ್ ಗುಪ್ತ ಮಾತನಾಡಿ, ''ಬಿಬಿಎಂಪಿಯಲ್ಲಿ ಸುಧಾರಣೆ ಕೆಲಸ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ರಾಜಕಾಲುವೆ, ರಸ್ತೆಗಳ ಅಭಿವೃದ್ಧಿಯಲ್ಲಿ ಸುಧಾರಣೆ ಕಾರ್ಯಗಳಾಗಿವೆ. ಸ್ಮಾರ್ಟ್‌ ಸಿಟಿಯ ರಸ್ತೆಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ" ಎಂದು ಹೇಳಿದರು.

"ಮಳೆಗಾಲದಲ್ಲಿ ಮಳೆಯಾಗುವುದಕ್ಕಿಂತ ಬೇಸಿಗೆ ಸಮಯದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಹಾಗಾಗೀ, ರಾಜಕಾಲುವೆಯಲ್ಲಿ ಮಳೆಯ ನೀರು ಸರಾಗವಾಗಿ ಹೋಗುವಂತೆ ಮಾಡಲಾಗಿದೆ. ಪಾಲಿಕೆಯಲ್ಲಿ ಇನ್ನೂ ಸುಧಾರಣೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ನೂತನ ಮುಖ್ಯ ಆಯುಕ್ತರಿಗೆ ಹೆಚ್ಚಿನ ಆಡಳಿತದ ಅನುಭವವಿದೆ. ಸಮರ್ಥವಾಗಿ ಆಡಳಿತ ನಿಭಾಯಿಸುತ್ತಾರೆ" ಎಂದು ಹೇಳಿದರು.

ಒಂದೂವರೆ ಗಂಟೆ ಕಾದ ಆಯುಕ್ತ ತುಷಾರ್ ಗಿರಿನಾಥ್

ಸಮಾರಂಭದಲ್ಲಿ ನೂತನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರಕ್ಕೆ ಒಂದೂವರೆ ಗಂಟೆ ಕಾದ ಪ್ರಸಂಗ ಕಂಡುಬಂದಿತು.

ಶುಕ್ರವಾರ ಬೆಳಿಗ್ಗೆ 11ಕ್ಕೆ ಅಧಿಕಾರ ಹಸ್ತಾಂತರಕ್ಕೆ ಸಮಯ ಗೊತ್ತುಪಡಿಸಲಾಗಿತ್ತು. ಈ ಸಮಯಕ್ಕೆ ಸರಿಯಾಗಿ ನೂತನ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ನಾನಾ ವಿಭಾಗಗಳ ವಿಶೇಷ ಆಯುಕ್ತರು ಬಂದಿದ್ದರು. ಆದರೆ, ಬಿಬಿಎಂಪಿ ಮಾಜಿ ಆಯುಕ್ತ ಗೌರವ ಗುಪ್ತ ನಿಗದಿ ಪಡಿಸಿದ ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಮಧ್ಯಾಹ್ನ 12.30 ಕ್ಕೆ ಮುಂದೂಡಲಾಯಿತು.

ಸುಮಾರು ಒಂದೂವರೆ ಗಂಟೆಗಳ ಕಾಲ ನೂತನ ಆಯುಕ್ತ ತುಷಾರ್ ಗಿರಿನಾಥ ಮತ್ತು ಬಿಬಿಎಂಪಿ ನಾನಾ ಇಲಾಖೆಗಳ ವಿಶೇಷ ಆಯುಕ್ತರು ಕಾಯಬೇಕಾಯಿತು.

ನಿಗದಿ ಪಡಿಸಿದ ಸಮಯಕ್ಕೆ ಗೌರವ ಗುಪ್ತ ಬಾರದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಅಧಿಕಾರ ಹಸ್ತಾಂತರ ಮಾಡಲು ಗುಪ್ತ ಅವರಿಗೆ ಮನಸ್ಸಿರಲಿಲ್ಲ. ಅಧಿಕಾರದಲ್ಲೇ ಮುಂದುವರಿಯಬೇಕು ಎಂದು ಕೊನೆ ಕ್ಷಣದ ಪ್ರಯತ್ನಗಳಲ್ಲಿ  ನಿರತರಾಗಿದ್ದರು ಎಂಬ ಮಾತುಗಳು ಕೇಳಿ ಬಂದವು.

ನಿಮಗೆ ಏನು ಅನ್ನಿಸ್ತು?
1 ವೋಟ್