ಬೀದರ್‌ | ಹಳೇ ಪಠ್ಯವನ್ನು ಮುಂದುವರಿಸಲು ದಸಂಸ ಒಕ್ಕೂಟ ಆಗ್ರಹ

  • "ಕೋಮು ಸೌಹಾರ್ದತೆ ಕದಡುತ್ತಿರುವ ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ"
  • "ಗೊಂದಲಗಳಿಗೆ ಕಾರಣರಾದ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ"

ಪಠ್ಯ ಪುಸ್ತಕದಲ್ಲಿ ಕೋಮುವಾದ ಸೃಷ್ಟಿಸಿ, ಮುಗ್ಧ ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಆರ್‌ಎಸ್‌ಎಸ್‌ ಹಿನ್ನೆಲೆಯ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ದಲಿತ ಸಂಘರ್ಷ ಸಮಿತಿಯ (ದಸಂಸ) ಬೀದರ್‌ ಜಿಲ್ಲಾ ಸಂಚಾಲಕ ಬಾಬುರಾವ್ ಪಾಸ್ವಾನ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೀದರ್‌ನಲ್ಲಿ ದಸಂಸ ಒಕ್ಕೂಟ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು. "ಬುದ್ಧ, ಬಸವ, ಅಂಬೇಡ್ಕರ್, ಟಿಪ್ಪು ಸುಲ್ತಾನ್, ನಾರಾಯಣ ಗುರು, ಸೇರಿದಂತೆ ಅನೇಕ ಮಹನೀಯರ ಇತಿಹಾಸವನ್ನು ಪಠ್ಯದಿಂದ ಕೈಬಿಟ್ಟಿರುವುದು ಮತ್ತು ತಿರುಚಿರುವುದು ಮಹಾತ್ಮರಿಗೆ ಮಾಡಿದ ಅವಮಾನ" ಎಂದಿದ್ದಾರೆ. 

"ಕೋಮುವಾದ ಬಿತ್ತಲು ಹೊರಟಿರುವ ಪಠ್ಯಪುಸ್ತಕ ಮರಪರಿಷ್ಕರಣಾ ಸಮಿತಿಯ ಪಠ್ಯವನ್ನು ವಜಾಗೊಳಿಸಿ, ಹಳೆಯ ಪಠ್ಯವನ್ನೇ ಮುಂದುವರಿಸಬೇಕು. ಪಠ್ಯ ಪುಸ್ತಕ ಪರಿಷ್ಕರಣೆಗೆ ವೆಚ್ಚವಾಗಿರುವ ಹಣವನ್ನು ಸಮಿತಿಯಿಂದಲೇ ಸರ್ಕಾರ ವಸೂಲಿ ಮಾಡಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

ಬಿವಿಎಸ್ ಜಿಲ್ಲಾಧ್ಯಕ್ಷ ಪ್ರದೀಪ್ ನಾಟೇಕರ್ ಮಾತನಾಡಿ, "ಶಿಕ್ಷಣ ತಜ್ಞನಲ್ಲದ ರೋಹಿತ್ ಚಕ್ರತೀರ್ಥನೆಂಬ ಆರ್‌ಎಸ್‌ಎಸ್‌ ಏಜೆಂಟ್‌ನನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷನಾಗಿ ನೇಮಿಸಿ ಸರ್ಕಾರ ತಪ್ಪು ಮಾಡಿದೆ. ಪಠ್ಯ ಪರಿಷ್ಕರಣೆ ಸಮಿತಿಯಲ್ಲಿರುವ ಏಳು ಜನರೂ ಬ್ರಾಹ್ಮಣ ಸಮುದಾಯದವರೇ ಆಗಿದ್ದಾರೆ. ಅವರಾರು ಶಿಕ್ಷಣ ತಜ್ಞರಲ್ಲ, ಜಾತಿ ವಿಷಬೀಜ ಬಿತ್ತುವ ತಜ್ಞರು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ, ಮರುಪರಿಷ್ಕರಣಾ ಸಮಿತಿಯ ಪಠ್ಯಗಳನ್ನು ಕೈಬಿಟ್ಟು, ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಣೆ ಮಾಡಿದ್ದ ಪಠ್ಯವನ್ನು ಮಕ್ಕಳಿಗೆ ಒದಸಿಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸಂವಿಧಾನ ಸಮಿತಿಯ ಅಧ್ಯಕ್ಷ ಅಬ್ದುಲ್ ಮನ್ನಾಸೇಟ್ ಮಾತನಾಡಿ, "ಸ್ವಾತಂತ್ರ್ಯ ಭಾರತಕ್ಕೆ ಯಾವುದೇ ಕೊಡುಗೆ ನೀಡದ ಆರ್‌ಎಸ್‌ಎಸ್‌ ಹಿನ್ನೆಲೆಯವರ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿ ಮಕ್ಕಳಿಗೆ ಕೋಮುವಾದ ಕಲಿಸಲು ಹೊರಟಿದ್ದಾರೆ. ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನಾಡಿನ ಸಾಹಿತಿಗಳ ಇತಿಹಾಸವನ್ನು ತಿರುಚಲಾಗಿದೆ. ಆ ಪಠ್ಯಗಳನ್ನು ಕೈಬಿಡಬೇಕು. ಕೋಮು ಸೌಹಾರ್ದತೆ, ಸಾಮಾಜಿಕ ನ್ಯಾಯ ಒದಗಿಸುವ ಹಳೆಯ ಪಠ್ಯವನ್ನೇ ಮುಂದುವರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

"ಶಾಲಾ ಶಿಕ್ಷಣವನ್ನು ಸಂಪೂರ್ಣವಾಗಿ ಅವೈಜ್ಞಾನಿಕ, ಅಸಂವಿಧಾನಿಕ ಹಾಗೂ ಅನೈತಿಕಗೊಳಿಸಲು ಹೊರಟಿರುವ ಪಠ್ಯ ಪುಸ್ತಕ ಮರುಪರಿಷ್ಕರಣೆ ಸಮಿತಿಯ ಪಠ್ಯವನ್ನು ವಾಪಸ್ ಪಡೆಯಬೇಕು, ಕುವೆಂಪು ಅವರ ನಾಡಗೀತೆಗೆ ಅವಮಾನ ಮಾಡಿರುವುದು, ಡಾ. ಅಂಬೇಡ್ಕರ್ ಅವರಿಗಿರುವ 'ಸಂವಿಧಾನ ಶಿಲ್ಪಿ' ಪದ ಕೈಬಿಟ್ಟಿರುವುದು ಸೇರಿದಂತೆ ಅನೇಕ ಮಹಾತ್ಮರ ಚರಿತ್ರೆಯನ್ನು ತಿರುಚಿ ಮಕ್ಕಳ ಪಠ್ಯದ ವಿಚಾರದಲ್ಲಿ ಆತಂಕ ಮೂಡಿಸಿದೆ" ಎಂದು ಪ್ರತಿಭಟನಾಕಾರರು ಕಿಡಿಕಾರಿದರು. 

"ಅನಗತ್ಯ ಗೊಂದಲಗಳಿಗೆ ಕಾರಣಕರ್ತರಾದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು" ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾಕರರು ಬೀದರ್‌ನ ಡಾ ಬಿ ಆರ್ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದರು.

ಈ ಸುದ್ದಿ ಓದಿದ್ದೀರಾ? ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ತಪ್ಪಾಗಿದೆ, ತಿದ್ದಿಕೊಳ್ಳುತ್ತೇವೆ: ಸಚಿವ ಬಿ.ಸಿ ನಾಗೇಶ್‌

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ರಾಜಕುಮಾರ್ ಮೂಲಭಾರತಿ, ಶಿವಕುಮಾರ್ ನೀಲಕಟ್ಟಿ, ಕಲ್ಯಾಣರಾವ ಭೋಸ್ಲೆ, ಶ್ರೀಪಾದರಾಯ ದೀನೆ, ಉಮೇಶ್ ಸೋರಳ್ಳಿಕರ್, ಸುಭಾಷ್ ಜ್ಯೋತಿ, ಸಂದೀಪ್ ಕಾಟೆ, ಅಂಬ್ರೀಷ್ ಕುದುರೆ, ಬಾಬುರಾವ್ ಮಿಠಾರೆ, ಶಾಲಿವಾನ್ ಬಡಗೇರ್, ಪವನ ಮಿಠಾರೆ, ಸೂರ್ಯಕಾಂತ ಸಾಧುರೆ, ಸಾಯಿ ಸಿಂಧೆ, ಅವಿನಾಶ್ ದೀನೆ, ಸುಧಾಕರ ಮಾಳಗೆ, ಬಸವರಾಜ ಅಲಿಯಂಬರ್, ದಶರಥ ಇಸ್ಲಾಂಪೂರ್ , ತುಕಾರಾಮ ಕುದುರೆ, ಸುರೇಶ್ ಕುಮಾರ್ ಜೋಜನಾಕರ್, ಕಂಟೆಪ್ಪ ಬಡಗೇರ್, ರಾಜಕುಮಾರ್ ಶೇರಿಕಾರ್, ಸುಭಾಷ್ ಲಾಧಾ, ಮೌಲಪ್ಪ ಮಾಳಗೆ, ಭರತ್ ಚಕ್ರವರ್ತಿ ಸೇರಿದಂತೆ ದಸಂಸ ಒಕ್ಕೂಟದ ಕಾರ್ಯಕರ್ತರು ಪಾಲ್ಗೊಂಡಿದ್ದರು.
 

ಮಾಸ್‌ ಮೀಡಿಯಾ ವಲಯ ಸಂಯೋಜಕ ಬಾಲಾಜಿ ಕುಂಬಾರ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್