ಗಡಿ ಕ್ಯಾತೆ ಹಿಂದೆ ಬಿಜೆಪಿ ಕುಮ್ಮಕ್ಕಿದೆ: ಎಚ್‌ ಡಿ ಕುಮಾರಸ್ವಾಮಿ ಗಂಭೀರ ಆರೋಪ

ಎಚ್‌ ಡಿ ಕುಮಾರಸ್ವಾಮಿ
  • ಶಿವಸೇನೆ ಹೋಳಾಗಿ ಬಿಜೆಪಿ ಜೊತೆ ಸೇರಿದ ಗುಂಪು ಗಡಿ ತಗಾದೆ ತೆಗೆದಿದೆ
  • ಎರಡೂ ಕಡೆ ನಿಮ್ಮದೆ ಸರ್ಕಾರ ಇದೆ, ಅಲ್ಲಿ ಮಾತನಾಡಿಕೊಳ್ಳಿ: ಎಚ್‌ಡಿಕೆ

ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯಲ್ಲಿ ನಡೆದ ಪಂಚರತ್ನ ಯಾತ್ರೆ ವೇಳೆ ಅವರು ಮಾತನಾಡಿ, “ಶಿವಸೇನೆ ಹೋಳಾಗಿ ಬಿಜೆಪಿ ಜೊತೆ ಸೇರಿದ ಗುಂಪು ಗಡಿ ತಗಾದೆ ತೆಗೆದಿದೆ. ಎಂಟು ದಿನದ ಕೋಲಾರ, ಚಿಕ್ಕಬಳ್ಳಾಪುರ ಪ್ರವಾಸದಲ್ಲಿ ತೆಲುಗು ಭಾಷಿಕರು, ಆಂಧ್ರ ಪರವಾನಗಿ ವಾಹನಗಳನ್ನ ನೋಡಿದೆ. ಆನೆಕಲ್ ಭಾಗದಲ್ಲಿ ತಮಿಳುನಾಡು, ಮಂಗಳೂರು ಭಾಗದಲ್ಲಿ ಕೇರಳ ಗಡಿ ಇದೆ. ಆದರೆ ಇಲ್ಲೆಲ್ಲೂ ಗಡಿ ವಿವಾದ, ಅಶಾಂತಿ ಇಲ್ಲ. ಬೆಳಗಾವಿಯ ಬಗ್ಗೆ ಮಾತ್ರ ಮಹಾರಾಷ್ಟ್ರ ಕಣ್ಣು ಏಕೆ” ಎಂದು ಪ್ರಶ್ನಿಸಿದರು.

Eedina App

“ಬೆಳಗಾವಿ ಗಡಿ ಭಾಗದ ಅಭಿವೃದ್ಧಿಗೆ ಕರ್ನಾಟಕದ‌ ಕೊಡುಗೆ ಹೆಚ್ಚಿದೆ. ಹೆಚ್ಚು ಸಕ್ಕರೆ ಕಾರ್ಖಾನೆಗಳು, ಸುವರ್ಣಸೌಧ, ನೀರಾವರಿ ಸೌಲಭ್ಯ ಕೊಟ್ಟಿದ್ದೇವೆ. ಶಿಕ್ಷಣ, ಭಾಷಾವಾರು ಸೌಲಭ್ಯದಲ್ಲಿ ಸ್ವಲ್ಪ ಸಮಸ್ಯೆ ಇರೋದು ನಿಜ. ಅಲ್ಲಿನ ಆರ್ಥಿಕ ಚಟುವಟಿಕೆಗಳನ್ನು ತನ್ನತ್ತ ಸೆಳೆಯಲು ಮಹಾರಾಷ್ಟ್ರ ಪ್ರಯತ್ನ ಮಾಡುತ್ತಿದೆ. ಮಹಾರಾಷ್ಟ್ರದ ಆ ಧ್ವನಿಗೆ ಕರ್ನಾಟಕ ಬಿಜೆಪಿಯವರ ಕುಮ್ಮಕ್ಕು ಇದೆ” ಎಂದು ನೇರ ಆರೋಪ ಮಾಡಿದರು.

ಬೊಮ್ಮಾಯಿ ಹೆಬ್ಬೆಟ್ಟಿನ ಮುಖ್ಯಮಂತ್ರಿ

AV Eye Hospital ad

ಶಿವರಾಜ್ ಪಾಟೀಲರನ್ನು ಗಡಿ ಆಯೋಗಕ್ಕೆ ನೇಮಕ ಮಾಡಿದ್ದಾರೆ. ಇವತ್ತು ಶರತ್ ಪವಾರ್ ಹೇಳಿಕೆಯನ್ನೂ ಗಮನಿಸಿದ್ದೇನೆ. ಬೆಳಗಾವಿ ಪಡೆದು ಬೇರೆ ಜಾಗ ಬಿಟ್ಟುಕೊಡ್ತೀವಿ ಎನ್ನುತ್ತಿದ್ದಾರೆ. ಪದೇಪದೆ ಯಾಕೆ ಕೆದಕುತ್ತಿದ್ದೀರಿ. ಬಿಜೆಪಿ ಸರ್ಕಾರ ಬಂದ ವೇಳೆಯೇ ಗಡಿ ವಿವಾದ ಬರುತ್ತೆ. ಬೊಮ್ಮಾಯಿ ಹೆಬ್ಬೆಟ್ಟಿನ ಮುಖ್ಯಮಂತ್ರಿಯಾಗಿದ್ದು, ಹೊರನೋಟಕ್ಕೆ ಕನ್ನಡಿಗರಿಗೆ ಮುಂದೆ ಹೇಳೋದೇ ಬೇರೆ. ಅಂತಿಮವಾಗಿ ದೆಹಲಿ ನಾಯಕರ ಮುಂದೆ ಕೈಕಟ್ಟಿ ನಿಲ್ಲುತ್ತಾರೆ” ಎಂದು ಕುಟುಕಿದರು.

ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ ಗಡಿವಿವಾದ | ಕಾನೂನು ಹೋರಾಟಕ್ಕೆ ಸರ್ಕಾರ ಸಂಪೂರ್ಣ ಸಿದ್ಧ: ಸಿಎಂ ಬೊಮ್ಮಾಯಿ

ಮಹಾರಾಷ್ಟ್ರದವರಿಗೆ ಮುಂದಿನ ಪಾರ್ಲಿಮೆಂಟ್ ಚುನಾವಣೆಗೆ ಈ ವಿಚಾರ ಬೇಕು. ಕರ್ನಾಟಕದಲ್ಲಿ‌ ಮೂರುವರೆ ವರ್ಷ ಅಧಿಕಾರ ನಡೆಸಿದ ಬಿಜೆಪಿಗೆ ಜನರ‌ ಬಳಿ ಹೋಗಲು ಮುಖವಿಲ್ಲ. ಹೀಗಾಗಿ ಗಡಿ ತಗಾದೆ ತೆಗೆಯುತ್ತಿದ್ದಾರೆ. ಯಾರೋ ಮಾಡಿದ ಕೆಲಸಗಳ ಬಗ್ಗೆ ಭಾಷಣ ಮಾಡಬಹುದು. ಜನರ ನೆಮ್ಮದಿ ಕೆಡಿಸಿ ಧರ್ಮದ ವಿಚಾರ ಇಟ್ಕೊಂಡು ಹೋಗ್ತೀರಾ. ಗೋಡಂಬಿ, ಬಾದಮಿ‌ ಕೊಟ್ಟು ಕಳುಹಿಸೋಕೆ ಸರ್ವಪಕ್ಷ ಸಭೆಯನ್ನು ಯಾಕೆ ಕರೆಯುತ್ತೀರಿ. ಎರಡೂ ಕಡೆ ನಿಮ್ಮದೆ ಸರ್ಕಾರ, ಅಲ್ಲಿ ಮಾತನಾಡಿಕೊಳ್ಳಿ ಎಂದು ಸರ್ವಪಕ್ಷ ಸಭೆ ಕರೆಯುವ ಸರ್ಕಾರ ವಿರುದ್ಧ ಹರಿಹಾಯ್ದರು.

ಮಹಾರಾಷ್ಟ್ರ ಗಡಿ ವಿವಾದದ ಕುರಿತು ಪ್ರತಿಪಕ್ಷಗಳು ಬಿಜೆಪಿಯ ವಿರುದ್ಧವೇ ನೇರ ಆರೋಪ ಮಾಡುತ್ತಿದ್ದು, ಶುಕ್ರವಾರವಷ್ಟೇ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರು, ಗಡಿ ತಗಾದೆಯ ಹಿಂದೆ ಬಿಜೆಪಿಯ ರಾಜಕೀಯ ಷಢ್ಯಂತ್ರವಿದೆ. ಅದು ಕರ್ನಾಟಕ ಮತ್ತು ಮಹಾರಾಷ್ಟ್ರ ಬಿಜೆಪಿ ಸರ್ಕಾರಗಳ ಮ್ಯಾಚ್‌ ಫಿಕ್ಸಿಂಗ್‌ ಎಂದು ಆರೋಪಿಸಿದ್ದರು. ಅವರ ಆ ಹೇಳಿಕೆಯ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರ ಸ್ವಾಮಿ ಕೂಡ ಈ ವಿವಾದದ ಹಿಂದೆ ಬಿಜೆಪಿಯ ಕುಮ್ಮಕ್ಕಿದೆ ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app