ಬೆಳಗಾವಿ | ಎರಡೂವರೆ ವರ್ಷದಲ್ಲಿ 41 ಬಾಲ್ಯವಿವಾಹ ಪ್ರಕರಣ ದಾಖಲು

  • ಜಿಲ್ಲೆಯಲ್ಲಿ 387 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ
  • ರಹಸ್ಯವಾಗಿ ಮದುವೆ ಮಾಡುತ್ತಿರುವ ಪೋಷಕರು

ಬಾಲ್ಯವಿವಾಹ ತಡೆಗಟ್ಟಲು ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಕಾನೂನುಗಳು ಜಾರಿಯಲ್ಲಿವೆ. ಆದರೂ, ಬಾಲ್ಯವಿವಾಹದ ಪಿಡುಗನ್ನು ಸಂಪೂರ್ಣವಾಗಿ ತಡೆಯಲಾಗಿಲ್ಲ. ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನು ನಿರಾಸೆಗೊಳಿಸಿದೆ.

ದೇಶದಲ್ಲಿ ಕೊರೊನಾ ಕಾಣಿಸಿಕೊಂಡ 2020ರ ಏಪ್ರಿಲ್‌ನಿಂದ 2022ರ ಆಗಸ್ಟ್‌ವರೆಗೆ ಬೆಳಗಾವಿ ಜಿಲ್ಲೆಯಲ್ಲಿ 41 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಎಂಟು ಘಟನೆಗಳೊಂದಿಗೆ ಚಿಕ್ಕೋಡಿ ತಾಲ್ಲೂಕು ಅಗ್ರಸ್ಥಾನದಲ್ಲಿದೆ. ಖಾನಾಪುರ, ಮೂಡಲಗಿ, ನಂತರದ ಸ್ಥಾನದಲ್ಲಿದೆ. ರಾಮದುರ್ಗ ಮತ್ತು ಸೌಂದತ್ತಿ ತಾಲೂಕುಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ತಲಾ ಐದು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ.

ಬೈಲಹೊಂಗಲ ಮತ್ತು ರಾಯಬಾಗ ತಾಲೂಕುಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದರೆ, ಬೆಳಗಾವಿ ಮತ್ತು ಅಥಣಿಯಲ್ಲಿ ತಲಾ ಎರಡು ಘಟನೆಗಳು ವರದಿಯಾಗಿವೆ. ಕಾಗವಾಡ, ಗೋಕಾಕ, ಹುಕ್ಕೇರಿ ತಾಲೂಕುಗಳಲ್ಲಿ ತಲಾ ಒಂದೊಂದು ಬಾಲ್ಯ ವಿವಾಹದ ಘಟನೆ ವರದಿಯಾಗಿದೆ.

"ಬಾಲ್ಯವಿವಾಹದ ಎಲ್ಲ ಘಟನೆಗಳಿಗೂ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ನಿರ್ದೇಶನದ ಮೇರೆಗೆ, ಬಾಲ್ಯವಿವಾಹ ಮುಗಿದರೆ ಮಾತ್ರವಲ್ಲ, ಬಾಲ್ಯವಿವಾಹವನ್ನು ನಿಗದಿ ಮಾಡಿದರೂ ಪೋಷಕರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎ.ಎಂ ಬಸವರಾಜ್ ತಿಳಿಸಿದ್ದಾರೆ.

"ಬಾಲ್ಯವಿವಾಹದ ವಿರುದ್ಧ ಮಕ್ಕಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಲು ಇಲಾಖೆಯು ಜಾಗೃತಿ ಅಭಿಯಾನಗಳನ್ನು ಹೆಚ್ಚಿಸಿದೆ" ಎಂದೂ ಅವರು ಹೇಳಿದ್ದಾರೆ.

"ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆಗಳು ನೆರವು ನೀಡುತ್ತಿವೆ. ನಾವು ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಆದರೆ ಪೋಷಕರು ತಮ್ಮ ಮಕ್ಕಳಿಗೆ ರಹಸ್ಯವಾಗಿ ಮದುವೆ ಮಾಡುತ್ತಿದ್ದಾರೆ. ಕೆಲವರು ತಮ್ಮ ಮಕ್ಕಳನ್ನು ಪಕ್ಕದ ಮಹಾರಾಷ್ಟ್ರ ಅಥವಾ ಗೋವಾಕ್ಕೆ ಕೊರೆದೊಯ್ದು ಮದುವೆ ಮಾಡಿಸಿ ಮರಳಿ ಬರುತ್ತಿದ್ದಾರೆ. ಈ ಹಿಂದೆ, ಬೆಳಗಾವಿಯಿಂದ ಬಹಳ ದೂರದಲ್ಲಿರುವ ಮಹಾರಾಷ್ಟ್ರದ ವೈಜನಾಥ ದೇವಸ್ಥಾನದಲ್ಲಿ ಮದುವೆಗಳು ನಡೆದಿವೆ" ಎಂದು ಮಕ್ಕಳ ರಕ್ಷಣಾಧಿಕಾರಿ ಜಿ.ಟಿ ಲೋಕೇಶ್ ತಿಳಿಸಿದ್ದಾರೆ.

ಮತ್ತೊಂದೆಡೆ, ಇದೇ ಅವಧಿಯಲ್ಲಿ 387 ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಯಶಸ್ವಿಯಾಗಿದೆ.

"ಜಿಲ್ಲೆಯಲ್ಲಿ ಅನೇಕ ಹೆತ್ತವರು ತಮ್ಮ ಅಪ್ರಾಪ್ತ ಹೆಣ್ಣುಮಕ್ಕಳಿಗೆ ರಹಸ್ಯವಾಗಿ ಮದುವೆ ಮಾಡುತ್ತಿದ್ದಾರೆ. ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬೆಳಗಾವಿ, ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆಯಲ್ಲೂ ರಾಜ್ಯದ ಗಮನ ಸೆಳೆದಿರುವುದು ವಿಪರ್ಯಾಸ" ಎಂದು ಜಿಲ್ಲೆಯ ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
AV Eye Hospital ad