ಬೆಳಗಾವಿ | ಅಧಿಕಾರ ದುರುಪಯೋಗ : ಐದು ಇಂಜಿನಿಯರ್‍‌ಗಳಿಗೆ ಜೈಲು ಶಿಕ್ಷೆ ವಿಧಿಸಿದ ಜಿಲ್ಲಾ ನ್ಯಾಯಾಲಯ

  • ಪರಿಹಾರ ಹಣ ಹಂಚಿಕೆಯಲ್ಲಿ ಅವ್ಯವಹಾರದ ಆರೋಪ
  • 2012ರಲ್ಲಿ ಲೋಕಾಯುಕ್ತ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ

ಅಧಿಕಾರ ದುರ್ಬಳಕೆ ಮಾಡಿಕೊಂಡು ಭೂ ಸ್ವಾಧೀನ ಕಾಯ್ದೆಗಳ ನಿಯಮಗಳನ್ನು ಉಲ್ಲಂಘಿಸಿ, ತಮಗೆ ಬೇಕಾದವರಿಗೆ ಹೆಚ್ಚಿನ ಪರಿಹಾರ ನೀಡಿದ್ದ ನೀರಾವರಿ ಇಲಾಖೆಯ ಐವರು ಇಂಜಿನಿಯರ್‌ಗಳಿಗೆ, 4ನೇ ಅಧಿಕ ಜಿಲ್ಲಾ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯವು ದಂಡ ಸಹಿತ ಎರಡು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ.

ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿರುವ ಮನೆಗಳು ಜೌಗು ಪ್ರದೇಶದಲ್ಲಿ ಇದ್ದುದ್ದರಿಂದ, ಇವುಗಳು ವಾಸಮಾಡಲು ಯೋಗ್ಯವಿಲ್ಲವೆಂದು ಸರ್ಕಾರವು ನಿರ್ಧರಿಸಿತ್ತು. ಇದರ ಪ್ರಕ್ರಿಯೆಯ ಭಾಗವಾಗಿ ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಲ್ಲರಿಗೂ ಪರಿಹಾರವನ್ನು ನೀಡಬೇಕೆಂಬ ನಿಯಮದ ಆಧಾರವಾಗಿ ತಮಗೆ ಬೇಕಾದ ಕೆಲವರಲ್ಲಿ ಒಳಒಪ್ಪಂದ ಮಾಡಿಕೊಂಡು ಹೆಚ್ಚಿನ ಹಣವನ್ನು ಪರಿಹಾರದ ರೂಪದಲ್ಲಿ ಕೊಡಲಾಗಿತ್ತು.

ಇವರ ಕಾರ್ಯವೈಖರಿಯನ್ನು ಪ್ರಶ್ನಿಸಿ, ಕಗದಾಳ ಗ್ರಾಮದ ಹಣಮಪ್ಪ ಗದಿಗೆಪ್ಪ ಮಾದರ ಎಂಬುವರು 2012 ಜೂನ್ 13 ರಂದು ಬೆಳಗಾವಿ ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿ, ತನಿಖೆಯನ್ನು ಆರಂಭಿಸಿದ್ದ ಅಂದಿನ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಚ್. ಜಿ. ಪಾಟೀಲ ಹಾಗೂ ಜಿ. ಆರ್. ಪಾಟೀಲ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಸುದ್ದಿ ಓದಿದ್ದೀರಾ? : ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: ಆಸ್ತಿ ನಷ್ಟ ಕುರಿತು 2 ತಿಂಗಳಲ್ಲಿ ವರದಿ ಸಲ್ಲಿಸುವ ಸಾಧ್ಯತೆ

ಈ ಪ್ರಕರಣದ ವಿಚಾರಣೆ ನಡೆಸಿದ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಪ್ರಭು ಅವರು, ನೀರಾವರಿ ಇಲಾಖೆಯ ಐವರು ಅಭಿಯಂತರರಿಗೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ 70 ಸಾವಿರ ದಂಡವನ್ನು ವಿಧಿಸಿ, ದಂಡವನ್ನು ಪಾವತಿಸಲು ತಪ್ಪಿದ್ದಲ್ಲಿ ಮತ್ತೆ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್