
- ಜೆಡಿಎಸ್ ಪರಾಜಿತ ಅಭ್ಯರ್ಥಿ ಪರ ಅಶೋಕ್ ಪಟ್ಟಣ ಲಾಭಿ
- ನನಗೆ ಟಿಕೆಟ್ ತಪ್ಪಿಸಿದ್ರೆ ಸುಮ್ಮನಿರಲ್ಲ ಎಂದ ದಳವಾಯಿ
ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರವು ರಾಮದುರ್ಗದ ಮಾಜಿ ಕೈ ಶಾಸಕ ಅಶೋಕ ಪಟ್ಟಣ ಮತ್ತು ಗೋಕಾಕದ ಅರವಿಂದ ದಳವಾಯಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಈ ಇಬ್ಬರೂ ಕೈ ನಾಯಕರ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಕ್ಷೇತ್ರವಾರು ಟಿಕೆಟ್ ಹಂಚಿಕೆ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅರಬಾವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕುರಿತ ಚರ್ಚೆಯಲ್ಲಿ ಜೆಡಿಎಸ್ ಪರಾಜಿತ ಅಭ್ಯರ್ಥಿ ಭೀಮಪ್ಪ ಗಡಾದ್ ಪಕ್ಷಕ್ಕೆ ಕರೆತರಲು ಮಾಜಿ ಶಾಸಕ ಅಶೋಕ ಪಟ್ಟಣ ಪ್ರಸ್ತಾಪ ಮಾಡಿದರು. ಅವರಿಗೆ ಟಿಕೆಟ್ ನೀಡಬಹುದೆಂದೂ ಹೇಳಿದ್ದರು.
ಅವರ ಪ್ರಸ್ತಾಪದ ಕುರಿತು ಕಿಡಿಕಾರಿರುವ ಅರವಿಂದ ದಳವಾಯಿ ಅವರು ಅಶೋಕ ಪಟ್ಟಣ ಅವರೊಂದಿಗೆ ಚರ್ಚೆ ನಡೆಸಿದ್ದು, ಮುಂದಿನ ಚುನಾವಣೆಯಲ್ಲಿ ಒಬ್ಬರನ್ನೊಬ್ಬರು ಸೋಲಿಸುವುದಾಗಿ ಸವಾಲು ಹಾಕಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ; ವಿಡಿಯೋ ಬಿಡುಗಡೆ ಮಾಹಿತಿ ಹಂಚಿಕೊಂಡ ಡಿಕೆಶಿ
ವೈರಲ್ ಆಗಿರುವ ಆಡಿಯೋದಲ್ಲಿ, “ನನ್ನ ಟಿಕೆಟ್ ತಪ್ಪಿಸಿದ್ರೆ ನಾನು ಸುಮ್ಮನೆ ಕುಳಿತುಕೊಳ್ಳಲ್ಲ. ನಾನು ರಾಮದುರ್ಗಕ್ಕೆ ಬಂದು ನನ್ನ ತಾಕತ್ತು ತೋರಿಸುತ್ತೇನೆ” ಎಂದು ದಳವಾಯಿ ಸವಾಲೆಸೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಶೋಕ ಪಟ್ಟಣ, "ನಿಮ್ಮ ತಾಕತ್ತು ನೀವು, ನಮ್ಮ ತಾಕತ್ತು ನಾವು ಮಾಡುತ್ತೇವೆ” ಎಂದು ಉತ್ತರಿಸಿದ್ದಾರೆ.
ಇದೇ ವಿಷಯವಾಗಿ ರಾಮದುರ್ಗ ತಾಲೂಕಿನ ಕುರುಬರ ರಾಜಕೀಯ ಹಿತರಕ್ಷಣಾ ಸಮಿತಿಯು ಸಾಮಾಜಿಕ ಜಾಲಾ ತಾಣದಲ್ಲಿ ಪೋಸ್ಟ್ರ್ ಹಾಕಿದ್ದು, “ಕುರುಬರು, ಅಹಿಂದ ವರ್ಗದವರು ರಾಜಕೀಯ ಮಾಡಬಾರದೆ” ಎಂದು ಅಶೋಕ ಪಟ್ಟಣ್ಣ ಅವರನ್ನು ಪ್ರಶ್ನಿಸಿದ್ದಾರೆ.

“ಕುರುಬ ಸಮಾಜದ ನಾಯಕ ಅರವಿಂದ ದಳವಾಯಿ ಅವರಿಗೆ ಟಿಕೆಟ್ ತಪ್ಪಿಸಿದರೆ, ರಾಮದುರ್ಗ ತಾಲೂಕಿನಲ್ಲಿ ನಿಮ್ಮ ವಿರುದ್ಧ ಪ್ರಚಾರ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ವೈರಲ್ ಆಡಿಯೋ ಕುರಿತು ಈ ದಿನ.ಕಾಮ್ ಜೊತೆ ಅರವಿಂದ ದಳವಾಯಿ ಮಾತನಾಡಿ, “ಕಳೆದ 5 ವರ್ಷಗಳಿಂದ ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಪಕ್ಷದ ಪರವಾಗಿ ಕೆಲಸ ಮಾಡಿದ್ದು, ನನ್ನ ಸಮಯ ಮತ್ತು ಹಣ ಖರ್ಚು ಮಾಡಿದ್ದೇನೆ. ಆದರೆ, ರಾಮದುರ್ಗ ತಾಲೂಕಿನ ಮಾಜಿ ಶಾಸಕ ಅಶೋಕ ಪಟ್ಟಣ ಅವರು ಕುರುಬ ಸಮಾಜದವರಿಗೆ ಟಿಕೆಟ್ ತಪ್ಪಿಸಲು ಪ್ರಯತ್ನ ಮಾಡತ್ತಿದ್ದಾರೆ. ಇದು ನನ್ನ ಸ್ವಾಭಿಮಾನದ ಸಂಕೇತವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.