
- ಸಭೆಗೆ ಅಮ್ ಆದ್ಮಿ ಪಕ್ಷದ (ಆಪ್) ಪ್ರತಿನಿಧಿಗೂ ಆಹ್ವಾನ ಕೊಡಿ
- ವಿವಾದ ಬಗೆಹರಿಸಲು ಸಿಎಂ ಪರಿಪೂರ್ಣ ಪ್ರಯತ್ನ ಮಾಡಬೇಕು
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ.
ಗಡಿ ವಿವಾದ ಕುರಿತು ತೀರ್ಮಾನಿಸಲು ಮಹಾರಾಷ್ಟ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ಎಲ್ಲ ಪಕ್ಷಗಳ ಸಭೆ ಕರೆಯಬೇಕು; ಸಭೆಯಲ್ಲಿ ಭಾಗವಹಿಸಲು ಆಮ್ ಆದ್ಮಿ ಪಕ್ಷದ ಪ್ರತಿನಿಧಿಗೂ ಅವಕಾಶ ನೀಡಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, "ಗಡಿ ವಿಚಾರದಲ್ಲಿ ಎಲ್ಲ ಪಕ್ಷಗಳೂ ಒಗ್ಗೂಡಿ ಹೋರಾಡಬೇಕು. ಆಪ್ ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಹಾಗಾಗಿ, ಸರ್ವಪಕ್ಷ ಸಭೆಗೆ ರಾಜ್ಯ ಸರ್ಕಾರ ನಮ್ಮ ಪಕ್ಷವನ್ನು ಆಹ್ವಾನಿಸಬೇಕು. ಭಾರತದ ಚುನಾವಣಾ ಆಯೋಗದ ಕಾನೂನಿನ ಪ್ರಕಾರ, ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕಿಲ್ಲ. ಆದರೆ ಪ್ರಸ್ತುತದ ವಸ್ತುಸ್ಥಿತಿಯ ಪ್ರಕಾರ ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಪರಿಗಣಿಸಿ ಸಭೆಗೆ ಕರೆಯಬಹುದು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಅಕ್ರಮ ಪ್ರಕರಣ | ಕಥೆ, ಚಿತ್ರಕಥೆ, ಸಂಭಾಷಣೆ ಬೇಡ ನೇರ ಉತ್ತರ ನೀಡಿ; ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ತರಾಟೆ
“ಒಂದು ದಶಕದಿಂದ ನೀರು ಹಂಚಿಕೆ ವಿವಾದ ಹಾಗೂ ಗಡಿ ವಿವಾದಕ್ಕೆ ಸಂಬಂಧಿಸಿದ ಸರ್ವಪಕ್ಷ ಸಭೆಗಳಲ್ಲಿ ಭಾಗವಹಿಸಿರುವ ಬ್ರಿಜೇಶ್ ಕಾಳಪ್ಪರಂತಹ ಅನುಭವಿ ಮತ್ತು ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧವಾದ ವ್ಯಕ್ತಿ ಇದ್ದಾರೆ. ಆದ್ದರಿಂದ ಸರ್ವಪಕ್ಷ ಸಭೆಗೆ ನಮ್ಮ ಪಕ್ಷದ ಕೊಡುಗೆಯು ಸತ್ವಯುತವಾಗಿ ಮತ್ತು ಯೋಗ್ಯವಾದ ರೀತಿಯಲ್ಲಿರುತ್ತದೆ ಎಂದು ಭರವಸೆ ನೀಡುತ್ತಿದ್ದೇನೆ. ಈ ವಿವಾದವನ್ನು ಸೂಕ್ತ ರೀತಿಯಲ್ಲಿ, ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಪೂರ್ಣವಾದ ಪ್ರಯತ್ನ ಮಾಡಬೇಕು” ಎಂದು ಪೃಥ್ವಿ ರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.