ಬೆಳಗಾವಿ | ಕಾಲಿಗೆ ಚಪ್ಪಲಿ ಇಲ್ಲದೆ ಮುಳ್ಳಹಾದಿಯಲ್ಲಿ ಶಾಲೆಗೆ ಹೋಗುವ ಮಕ್ಕಳು

  • ಗುಡ್ಡ-ಕಾಲುದಾರಿಯ ಮೂಲಕ ನಡೆದು ಹೋಗುವ ವಿದ್ಯಾರ್ಥಿಗಳು
  • ಶಾಲೆಗೆ ತೆರಳಲು ಎರಡು ಕಿ.ಮೀ ನಡೆಯುವ 70 ಮಕ್ಕಳು

ಮಕ್ಕಳು ಶೂ-ಸಾಕ್ಸ್‌ಗೋಸ್ಕರ ಶಾಲೆಗೆ ಬರುತ್ತಾರೆಯೇ ಎಂದು ಇತ್ತೀಚೆಗೆ ಶಿಕ್ಷಣ ಸಚಿವರು ಹೇಳಿದ್ದರು. ಅವರ ಹೇಳಿಕೆ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಲೇವಡಿಯಿಂದ ಕೂಡಿದ್ದ ಸಚಿವರ ಪ್ರಶ್ನೆಗೆ ಗುಡ್ಡಗಾಡು ಪ್ರದೇಶದ ಮಕ್ಕಳು ಮೌನ ಉತ್ತರ ನೀಡಿದ್ದಾರೆ. ತಮಗೆ ಪಾಠದ ಜೊತೆಗೆ ಶೂ-ಸಾಕ್ಸ್‌ಗಳೂ ಏಕೆ ಅಗತ್ಯವೆಂದು ತೋರಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದೊಡ್ಡಮಂಗಡಿ ಗ್ರಾಮದ ಪ್ಲಾಟ್‌ನಲ್ಲಿ ವಾಸಿಸುತ್ತಿರುವ ಮಕ್ಕಳು ತಮ್ಮ ನಿವಾಸಗಳಿಂದ ಶಾಲೆಗೆ ತೆರಳಲು ಸಮರ್ಪಕ ರಸ್ತೆಯೂ ಇಲ್ಲ. ಇದರಿಂದಾಗಿ, ಅವರು ಗ್ರಾಮದ ಶಾಲೆಗೆ ಗುಡ್ಡ-ಕಾಲುದಾರಿಯ ಮೂಲಕ ನಡೆದುಕೊಂಡೇ ಹೋಗುತ್ತಾರೆ. 

Eedina App

ತಮ್ಮ ಕುಟುಂಬಗಳನ್ನು ಕಾಡುತ್ತಿರುವ ಬಡತನದಿಂದಾಗಿ, ಈ 70ಕ್ಕೂ ಹೆಚ್ಚು ಮಕ್ಕಳು ಚಪ್ಪಲಿಗಳನ್ನೂ ಹೊಂದಿಲ್ಲ. ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿಯೇ ಮುಳ್ಳಹಾದಿಯಲ್ಲಿ ಪುಸ್ತಕದ ಚೀಲಹೊತ್ತು ಶಾಲೆಗೆ ತೆರಳುತ್ತಿದ್ದಾರೆ. 

"ಪ್ಲಾಟ್‌ನಿಂದ ಶಾಲೆಗೆ ಎರಡು ಕಿ.ಮೀ ನಡೆದು ಹೋಗಬೇಕು. ರಸ್ತೆ ಇಲ್ಲದ ಕಾರಣ ಗುಡ್ಡದ ಮೇಲಿರುವ ಹಾದಿಯಲ್ಲಿ ಹೋಗುತ್ತೇವೆ. ನಮ್ಮಲ್ಲಿ ಹಲವರ ಬಳಿ ಚಪ್ಪಲಿಯೂ ಇಲ್ಲ. ಕಾಲಿಗೆ ಮುಳ್ಳುಗಳು, ಚೂಪಾದ ಕಲ್ಲಿನ ಚೂರುಗಳು ಚುಚ್ಚುತ್ತವೆ. ಆದರೆ, ನಾವು ಶಾಲೆಗೆ ಹೋಗಲೇಬೇಕು" ಎನ್ನುತ್ತಾರೆ ವಿದ್ಯಾರ್ಥಿಗಳು.

AV Eye Hospital ad

"ನಾವೆಲ್ಲರೂ ಚಿಕ್ಕ ವಯಸ್ಸಿನವರು. ಸಂಜೆಯ ವೇಳೆ ಈ ದಾರಿಯಲ್ಲಿ ಹೋಗಲು ಭಯವಾಗುತ್ತದೆ. ಹಾವುಗಳ ಕಾಟವೂ ಇರುತ್ತದೆ. ಈಗ ಮಳೆ ಸುರಿಯುತ್ತಿರುವುದರಿಂದಾಗಿ ಜಾರಿ ಬೀಳುವ ಆತಂಕವೂ ಇದೆ" ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. 

"ಇದೆಲ್ಲದರ ನಡುವೆ, ಮೂವರು ರೈತರಿಗೆ ಸೇರಿದ ಜಮೀನಿನ ಮೇಲೆ ಹಾದು ಹೋಗಬೇಕು. ಅವರು ದಿನನಿತ್ಯ ಜಮೀನಿನ ಮೇಲೆ ಹೋಗಬೇಡಿಯೆಂದು ಬೈಯುತ್ತಾರೆ. ಕಿರಿಕಿರಿ ಮಾಡುತ್ತಾರೆ. ಅದೆಲ್ಲವನ್ನೂ ಸಹಿಸಿಕೊಂಡು ಕಲಿಯಲು ಶಾಲೆಗೆ ಹೋಗುತ್ತಿದ್ದೇವೆ" ಎಂದು ಮಕ್ಕಳು ವಿವರಿಸಿದ್ದಾರೆ.

ಅಂತಹ ಹಾದಿಯಲ್ಲಿ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಭಯಭೀತರಾಗಿದ್ದಾರೆ. ಮಕ್ಕಳಿಗೆ ಏನಾದರೂ ಆದರೆ ಯಾರು ಹೊಣೆ ಎಂಬ ಆತಂಕದಲ್ಲಿದ್ದಾರೆ. 

ಇಂತಹ ಸಾವಿರಾರು ಮಕ್ಕಳು ರಾಜ್ಯದಲ್ಲಿದ್ದಾರೆ. ಅವರೆಲ್ಲರೂ ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಬಳಿಸಿಕೊಂಡು ಶಿಕ್ಷಣ ಕಲಿಯುತ್ತಿದ್ದಾರೆ. ಆ ಎಲ್ಲ ಮಕ್ಕಳಿಗೂ ಶಿಕ್ಷಣದ ಜೊತೆಗೆ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಶಾಲೆಯಲ್ಲಿ ನೀಡುವ ಬಿಸಿಯೂಟ, ಹಾಲು, ಮೊಟ್ಟೆಯೂ ಮುಖ್ಯ. ಅದೇ ರೀತಿಯಲ್ಲಿ ಸಮವಸ್ತ್ರ, ಶೂ-ಸಾಕ್ಸ್‌ ಕೂಡ ಅತ್ಯಗತ್ಯ.

ಮಾಸ್‌ ಮೀಡಿಯಾ ಬೆಳಗಾವಿ ಜಿಲ್ಲಾ ಮಾಧ್ಯಮ ಸಂಯೋಜಕ ಸುನೀಲ್‌ ಮಾಹಿತಿ ಆಧಾರಿತ ವರದಿ
ನಿಮಗೆ ಏನು ಅನ್ನಿಸ್ತು?
3 ವೋಟ್
eedina app