ಬೆಳಗಾವಿ | ನಿರಂತರ ಮಳೆಗೆ ನೂರಾರು ಎಕರೆ ಬೆಳೆ ಹಾನಿ, ಸೇತುವೆಗಳು ಜಲಾವೃತ

  • ತಿಗಡಿ ಮತ್ತು ಸಂಪಗಾಂವ ಗ್ರಾಮದ ಸೇತುವೆಗಳ ಮುಳಗಡೆ
  • ಹಳದಿ ಬಣ್ಣಕ್ಕೆ ತಿರುಗಿದ ಕಟಾವಿಗೆ ಬಂದಿದ್ದ ಹೆಸರು ಬೇಳೆ ಬೆಳೆ 

ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ರೈತರು ಬೆಳದ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದೆ. 

ಬೈಲಹೊಂಗಲ ತಾಲೂಕಿನ ತಿಗಡಿ ಮತ್ತು ಸಂಪಗಾಂವ ಸಂಪರ್ಕಿಸುವ ಸೇತುವೆಯು ಜಲಾವೃತವಾಗಿದ್ದು, ಎರಡು ಗ್ರಾಮಗಳ ಮಧ್ಯ ಸಂಪರ್ಕ ಕಡಿತಗೊಂಡಿರುವ ಪರಿಣಾಮ ಎರಡು ಗ್ರಾಮದ ಜನರು ಪರೆದಾಡುತ್ತಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಅಪಾರ ಪ್ರಮಾಣದಲ್ಲಿ ಕಟಾವು ಮಾಡುವ ಹಂತಕ್ಕೆ ಬೆಳೆದು ನಿಂತಿದ್ದ, ಹೆಸರು ಬೇಳೆ ಬೆಳೆಯು ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 

ಈ ಕುರಿತು ಈ ದಿನ.ಕಾಮ್ ಪ್ರತಿನಿಧಿಯೊಂದಿಗೆ ತಿಗಡಿ ಗ್ರಾಮದ ರುದ್ರಪ್ಪ ಉಳವಪ್ಪ ಡೊಂಕನ್ನವರ ಮಾತನಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.   

“ಪ್ರತಿವರ್ಷದ ಮಳೆಗಾಲದ ಸಂದರ್ಭದಲ್ಲಿ ಸಂಪಗಂವ ಮತ್ತು ತಿಗಡಿ ಗ್ರಾಮವನ್ನು ಸಂಪರ್ಕಿಸುವ ಸೇತುವೆಯು ಮುಳುಗಡೆಯಾಗುತ್ತಿದ್ದು, ಇದನ್ನು ಇನ್ನಷ್ಟು ಪ್ರಮಾಣದಲ್ಲಿ ಎತ್ತರಿಸುವಂತೆ ಜಿಲ್ಲಾಡಳಿತಕ್ಕೆ ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಕೂಡ, ಇತ್ತ ಗಮನ ಹರಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? : ನಮಗೆ “ಬಾವುಟ ಬೇಡ, ಭೂಮಿಯ ಹಕ್ಕು" ಕೊಡಿ | ಶರಾವತಿ ಮುಳಗಡೆ ಸಂತ್ರಸ್ತರ ಹೋರಾಟ

“ಸಂಪಗಂವ ಮತ್ತು ತಿಗಡಿ ಗ್ರಾಮದ ಜನರು  ಹೊಲಗಳಿಗೆ ಹಾಗೂ ದನಕರುಗಳನ್ನು ಮೇಯಿಸುವ ಪ್ರದೇಶಗಳಿಗೆ ಹೋಗಲು ಸೇತುವೆಯನ್ನೇ ಆಶ್ರಯಿಸಿರುವುದರಿಂದ, ಸೇತುವೆಯು ಮುಳುಗಡೆಯಾದಾಗ, ತೀವ್ರ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು” ಮನವಿ ಮಾಡಿಕೊಂಡರು. 

“ಕಟಾವಿಗೆ ಬಂದಿದ್ದ ಹೆಸರು ಬೇಳೆ ಬೆಳೆಯು, ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೆ, ಸಂಕಷ್ಟವನ್ನು ಎದುರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ” ಎಂದು ನೋವು ಹಂಚಿಕೊಂಡರು.

Rudrappa Ulavappa Donkannavara
ನಿಮಗೆ ಏನು ಅನ್ನಿಸ್ತು?
0 ವೋಟ್