ಬೆಳಗಾವಿ | ಹಣಕ್ಕಾಗಿ ವೃದ್ಧೆ ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

  • ಬೆಲ್ಲದ ಬಾಗೇವಾಡಿಯ ಪ್ರಕರಣ ಬೇಧಿಸಿದ ಪೊಲೀಸರು
  • ತನಿಖೆ ವೇಳೆ ಸತ್ಯಾಂಶ ಹೊರಹಾಕಿದ ಆರೋಪಿಗಳು

ಬೆಳಗಾವಿ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಕಳೆದ ತಿಂಗಳು ನಡೆದಿದ್ದ ವೃದ್ಧೆಯ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಝಾಂಗಟಿಹಾಳದ ಶಂಕರ ರಾಮಪ್ಪ ಪಾಟೀಲ ಮತ್ತು ರಾಯಬಾಗ ತಾಲೂಕಿನ ನಂದಿಕುರಳಿಯ ಮಹೇಶ ಸದಾಶಿವ ಕಬಾಡಗೆ ಬಂಧಿತರು. 

ಅಕ್ಟೋಬರ್ 6ರ ತಡರಾತ್ರಿ ಮಲ್ಲವ್ವ ಜೀವಪ್ಪ ಕಮತೆ (75) ಎಂಬ ವೃದ್ಧೆಯ ಕೊಲೆಯಾಗಿತ್ತು. ಆಕೆಯ ಬಳಿ ಇದ್ದ 20 ಗ್ರಾಂ. ಚಿನ್ನಾಭರಣವೂ ಕಳುವಾಗಿತ್ತು. ಸದಾ ಒಂಟಿಯಾಗಿ ಇರುತ್ತಿದ್ದ ಮಲ್ಲವ್ವಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. 

ಆರೋಪಿಗಳು ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಗೊತ್ತಾಗಿತ್ತು. ಕೂಡಲೆ ಎಚ್ಚೆತ್ತುಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ತಿಂಗಳು ಮುಗಿಯುವದರೊಳಗೆ ಪ್ರಕರಣವನ್ನು ಭೇದಿಸಿದ್ದಾರೆ.

ಮಲ್ಲವ್ವ ಬೆಲ್ಲದ ಬಾಗೇವಾಡಿಯಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ಮಕ್ಕಳು, ಮೊಮ್ಮಕ್ಕಳು 4 ಕಿ. ಮೀ ದೂರದ ಕಡಹಟ್ಟಿಯಲ್ಲಿ ವಾಸಿಸುತ್ತಿದ್ದರು. ಪ್ರತಿದಿನ ಮಲ್ಲವ್ವನಿಗೆ ಆಕೆಯ ಮೊಮ್ಮಕ್ಕಳು ಊಟ ತಂದುಕೊಟ್ಟು ಹೋಗುತ್ತಿದ್ದರು.

ಇದನ್ನು ಗಮನಿಸಿದ್ದ ಆರೋಪಿಗಳು ಅಜ್ಜಿಯ ಜತೆಗೆ ಆತ್ಮೀಯತೆ ಬೆಳೆಸಿಕೊಂಡು ಸಹಾಯ ಮಾಡುವ ನೆಪದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿದ್ದರು. ಮಲ್ಲವ್ವನ ವಿಶ್ವಾಸ ಗಳಿಸಿಕೊಂಡು ಆಕೆಯಿಂದ ಆರೋಪಿ ಶಂಕರ ರಾಮಪ್ಪ ಪಾಟೀಲ 50 ಸಾವಿರ ರೂ. ಸಾಲವನ್ನೂ ಪಡದಿದ್ದ. ಅದರಲ್ಲಿ 10 ಸಾವಿರ ಸಾಲವನ್ನು ಮತ್ತೊಬ್ಬ ಆರೋಪಿ ಮಹೇಶ ಸದಾಶಿವ ಕಬಾಡಗೆ ನೀಡಿದ್ದ. ಮಲ್ಲವ್ವಳ ಬಳಿ ಇದಕ್ಕಿಂತಲೂ ಹೆಚ್ಚು ಹಣ ಹಾಗೂ ಚಿನ್ನ ಇರಬಹುದೆಂದು ಭಾವಿಸಿದ್ದ ಆರೋಪಿಗಳು ಆಕೆಯನ್ನು ಹತ್ಯೆಗೈದಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. 

ಈ ಸುದ್ದಿ ಓದಿದ್ದೀರಾ? : ಧಾರವಾಡ | ಮೈಮೇಲೆ ಬಿಸಿ ಸಾಂಬಾರ್‌ ಬಿದ್ದು ಗಾಯಗೊಂಡಿದ್ದ ಮಗು ಸಾವು

ಆರೋಪಿ ಮಹೇಶ ಅಜ್ಜಿಯ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಶಂಕರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ನಂತರ ಮನೆ ತುಂಬ ಹುಡುಕಾಡಿ, ತಡಕಾಡಿದಾಗ 20 ಗ್ರಾಂ ಚಿನ್ನಾಭರಣ, ಕೆಲವು ಆಸ್ತಿ ಪತ್ರಗಳು ಸಿಕ್ಕಿದ್ದು, ಅವುಗಳನ್ನು ತೆಗೆದುಕಂಡು ಪರಾರಿಯಾಗಿದ್ದರು. ತನಿಖೆ ವೇಳೆ, ಆರೋಪಿಗಳು ಸತ್ಯ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app