
- ದಲ್ಲಾಳಿ ಮತ್ತು ವ್ಯಾಪಾರಸ್ಥರ ಅಲಿಖಿತ ಒಪ್ಪಂದ; ರೈತರ ಶೋಷಣೆ
- ರೈತರ ಫಸಲು ಒಣಗಿಸಲು ಪ್ರತ್ಯೇಕ ಜಾಗ ಕೊಡುವಂತೆ ಆಗ್ರಹ
ರೈತರು ಬೆಳೆದ ಆಹಾರೋತ್ಪನ್ನಗಳನ್ನು ನೇರವಾಗಿ ಬೆಳೆಗಾರನೇ ಮಾರಾಟ ಮಾಡುವ ಸಲುವಾಗಿ ಎಪಿಎಂಸಿಗಳನ್ನು ಸ್ಥಾಪಿಸಲಾಗಿದೆ. ಆದರೆ ಎಪಿಎಂಸಿ ದಲ್ಲಾಳಿಗಳೇ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಳ್ಳಾರಿ ತಾಲೂಕಿನ ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದ್ದು, "ದಲ್ಲಾಳಿಗಳು ಮತ್ತು ವ್ಯಾಪಾರಸ್ಥರು, ಎಪಿಎಂಸಿಗೆ ತಂದು ರಸ್ತೆಯಲ್ಲಿ ಒಣ ಹಾಕಿದ ಮಾಲನ್ನು ಖರೀದಿಸಬಾರದು ಎಂಬ ನಿಯಮ ಮಾಡಿಕೊಂಡು ರೈತರನ್ನು ಶೋಷಣೆ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
"ಮಾರುಕಟ್ಟೆಗೆ ತರುವ ಬೆಳೆಗಳ ಹಸಿ ಅಥವಾ ಒಣ ಪದಾರ್ಥವಾಗಿರಲಿ. ಅದನ್ನು ಪ್ರಶ್ನಿಸುವ ಅಧಿಕಾರ ಎಪಿಎಂಸಿ ದಲ್ಲಾಳಿಗಳಿಗೆ ಇಲ್ಲ. ಎಪಿಎಂಸಿಯೊಳಗೆ ರೈತರು ಬೆಳೆಗಳನ್ನು ರೈತರು ಬೆಳೆದರಷ್ಟೇ ಎಲ್ಲರ ಹೊಟ್ಟೆ ತುಂಬುತ್ತದೆ ಹೊರತು ಕಂಪ್ಯೂಟರ್ನಿಂದ ಉದುರುವುದಿಲ್ಲ. ಅಥವಾ ಹಣವನ್ನೇ ತಿನ್ನುತ್ತಾರೆಯೇ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ತಾಲೂಕಿನ ಕೊರ್ಲಗುಂದಿಯ ರೈತ ಅಡಿವೆಪ್ಪ ಎಂಬುವವರು "ಒಂದೂವರೆ ಎಕರೆಯಲ್ಲಿ ಬೆಳೆದ 40 ಕ್ವಿಂಟಾಲ್ ಮೆಕ್ಕೆಜೋಳವನ್ನು ನಗರದ ಎಪಿಎಂಸಿ ಮಾರುಕಟ್ಟೆಗೆ ತಂದು ಒಣಗಿಸಿ ಅಲ್ಲೇ ಮಾರಾಟ ಮಾಡಲು ಮುಂದಾಗಿದ್ದು, ನಾಲ್ಕು ದಿನ ಕಳೆದರೂ ಅದನ್ನು ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ" ಎಂದು ಆರೋಪಿಸಿದ್ದಾರೆ.
"ರೈತರು ಮಾರುಕಟ್ಟೆಗೆ ತಂದು ರಸ್ತೆಯಲ್ಲಿ ಒಣಹಾಕಿದ ಮಾಲನ್ನು ಖರೀದಿಸುವಂತಿಲ್ಲ. ತೇವಾಂಶ ಶೇ.15 ಇದ್ದರೆ ಮಾತ್ರ ಮಾಲು ಮಾರಾಟ ಮಾಡಬೇಕೆಂದು ನ.1ರಿಂದ ಮಾರುಕಟ್ಟೆಯ ವ್ಯಾಪಾರಸ್ಥರು ಮತ್ತು ದಲ್ಲಾಳಿಗಳ ಮಧ್ಯೆ ಅಲಿಖಿತ ಒಪ್ಪಂದವಾಗಿದೆ. ಆದರೆ ಈ ಬಗ್ಗೆ ನನಗೆ ಏನು ಗೊತ್ತಿಲ್ಲ. ಹಿಂದಿನಂತೆಯೇ ಇಲ್ಲಿಯೇ ತಂದು ಒಣಗಿಸಿ ಮಾರಾಟ ಮಾಡಲು ಮುಂದಾದೆ. ದಲ್ಲಾಳಿಗಳು ಸೇರಿದಂತೆ ಹಲವರು ಬಂದು ಬೆದರಿಕೆ ಹಾಕುತ್ತಾರೆ. ಹಮಾಲಿಗಳು ಕೂಡ ಸಿಗುತ್ತಿಲ್ಲ" ಎಂದು ಅವರು ದೂರಿದರು.
ಈ ಸುದ್ದಿ ಓದಿದ್ದೀರಾ? ಸುದ್ದಿ ವಿವರ| ರೈತರಿಗೆ ತಲೆನೋವಾದ ಸಿಬಿಲ್ ಸ್ಕೋರ್ ಎಂದರೇನು? ಮಾನದಂಡವೇನು?
ಇದರಿಂದ ಬೇಸತ್ತ ರೈತರೆಲ್ಲ ಸೇರಿ ಪ್ರತಿಭಟನೆ ನಡೆಸಿದ್ದು, "ಎಪಿಎಂಸಿ ಒಳಗೆ ರೈತರು ದವಸ, ಧಾನ್ಯಗಳನ್ನು ಒಣ ಹಾಕಬಾರದು ಎಂಬ ಅಲಿಖಿತ ನಿಯಮ ಕೈಬಿಡಬೇಕು. ಎಪಿಎಂಸಿ ಬಳಿ ಇರುವ ಸಗಟು ವ್ಯಾಪಾರ ಮಳಿಗೆಗಳು, ಹಣು-ತರಕಾರಿ ಮಾರುಕಟ್ಟೆಯಿಂದ ವಾಹನ ದಟ್ಟಣೆ ಸಮಸ್ಯೆಯಾಗುತ್ತಿದೆಯೋ ಹೊರತು ರೈತರು ಫಸಲು ಒಣಗಿಸುವುದರಿಂದ ಅಲ್ಲ. ಹಾಗಾಗಿ ಅವುಗಳನ್ನು ಸ್ಥಳಾಂತರ ಮಾಡಬೇಕು. ಇಲ್ಲವೇ ರೈತರು ಬೆಳೆ ಒಣಗಿಸಲು ಪ್ರತ್ಯೇಕ ಪ್ಲಾಟ್ ಸೌಲಭ್ಯ ಕಲ್ಪಿಸಬೇಕು" ಎಂದು ಆಗ್ರಹಿಸಿದರು.